ADVERTISEMENT

ಉಪ‍ಚುನಾವಣಾ ಕಣ: ಬಿಜೆಪಿ ಪಾಲಿಗೆ ಮಗ್ಗುಲಮುಳ್ಳು

ಆನಂದ್ ಮಿಶ್ರಾ
Published 7 ನವೆಂಬರ್ 2018, 19:45 IST
Last Updated 7 ನವೆಂಬರ್ 2018, 19:45 IST
ಜಮಖಂಡಿಯಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿ ಆನಂದ್ ಸಿದ್ದು ನ್ಯಾಮಗೌಡ ಅವರ ಗೆಲುವಿನ ನಂತರ ಪಕ್ಷದ ಕಾರ್ಯಕರ್ತರ ಸಂಭ್ರಮ         –ಪಿಟಿಐ ಚಿತ್ರ
ಜಮಖಂಡಿಯಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿ ಆನಂದ್ ಸಿದ್ದು ನ್ಯಾಮಗೌಡ ಅವರ ಗೆಲುವಿನ ನಂತರ ಪಕ್ಷದ ಕಾರ್ಯಕರ್ತರ ಸಂಭ್ರಮ         –ಪಿಟಿಐ ಚಿತ್ರ   

ನವದೆಹಲಿ: 2014ರ ಲೋಕಸಭಾ ಚುನಾವಣೆಯಲ್ಲಿ ಭಾರಿ ಗೆಲುವು ದಾಖಲಿಸಿದ ಬಳಿಕ ನಡೆದ ಉಪಚುನಾವಣೆಗಳು ಆಡಳಿತಾರೂಢ ಬಿಜೆಪಿಗೆ ಸಂಕಷ್ಟ ತಂದದ್ದೇ ಹೆಚ್ಚು.

ಕರ್ನಾಟಕದಲ್ಲಿ ಲೋಕಸಭೆಯ ಮೂರು ಮತ್ತು ವಿಧಾನಸಭೆಯ ಎರಡು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶವೂ ಇದಕ್ಕೆ ಹೊರತಲ್ಲ. ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವ ಈ ಸಮಯದಲ್ಲಿ ಆಡಳಿತಾರೂಢ ಪಕ್ಷವು ಉಪಚುನಾವಣೆಗಳಲ್ಲಿ ಮತ್ತೆ ಮತ್ತೆ ಸೋಲುತ್ತಿರುವುದು ಆ ಪಕ್ಷಕ್ಕೆ ಎಚ್ಚರಿಕೆಯ ಗಂಟೆಯೇ ಹೌದು.

ಬಿಜೆಪಿಯ ಈ ಸ್ಥಿತಿಗೆ ಮುಖ್ಯ ಕಾರಣ ವಿರೋಧ ಪಕ್ಷಗಳ ಮೈತ್ರಿ. ಬೆನ್ನು ಬೆನ್ನು ಸೋಲಿನ ಬಳಿಕ ಲೋಕಸಭೆಯಲ್ಲಿ ಬಿಜೆಪಿಯ ಸ್ಥಾನಗಳ ಸಂಖ್ಯೆ 272ಕ್ಕೆ ಕುಸಿದಿದೆ. 2014ರಲ್ಲಿ ಈ ಪಕ್ಷ 282 ಸಂಸದರನ್ನು ಹೊಂದಿತ್ತು. ದಯನೀಯ ಸೋಲು ಕಂಡಿದ್ದ ಕಾಂಗ್ರೆಸ್‌ಗೆ ಲೋಕಸಭೆಯಲ್ಲಿ 44 ಸದಸ್ಯರಷ್ಟೇ ಇದ್ದರು. ಆದರೆ, ಈಗ ಕಾಂಗ್ರೆಸ್‌ ಬಲ 50ಕ್ಕೆ ಏರಿದೆ.

ADVERTISEMENT

ಅಧಿಕೃತ ವಿರೋಧ ಪಕ್ಷ ಎನಿಸಿಕೊಳ್ಳಲು ಕಾಂಗ್ರೆಸ್‌ಗೆ ಇನ್ನೂ ಸಾಧ್ಯವಾಗಿಲ್ಲ. ಈ ಮನ್ನಣೆ ದೊರೆಯಬೇಕಿದ್ದರೆ ಲೋಕಸಭೆಯ ಒಟ್ಟು ಸದಸ್ಯ ಸಂಖ್ಯೆಯ ಕನಿಷ್ಠ ಶೇ 10ರಷ್ಟು ಸ್ಥಾನಗಳನ್ನು ಹೊಂದಿರಬೇಕು. ಅದು 55 ಆಗುತ್ತದೆ.

ಈ ವರ್ಷ ಮೇಯಲ್ಲಿ ಉತ್ತರ ಪ್ರದೇಶದ ಕೈರಾನಾ ಕ್ಷೇತ್ರದ ಉಪಸಮರದಲ್ಲಿ ಬಿಜೆಪಿಗೆ ಸೋಲಾಗಿತ್ತು. ಎಸ್‌ಪಿ, ಬಿಎಸ್‌ಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಈ ಕ್ಷೇತ್ರದಲ್ಲಿ ಆರ್‌ಎಲ್‌ಡಿಯ ಮುಸ್ಲಿಂ ಅಭ್ಯರ್ಥಿಗೆ ಬೆಂಬಲ ನೀಡಿದ್ದವು.

ಹಿಂದುತ್ವವಾದಿ ಹುಕುಂ ಸಿಂಗ್‌ ಅವರ ನಿಧನದಿಂದ ಈ ಕ್ಷೇತ್ರ ತೆರವಾಗಿತ್ತು. ಅವರ ಮಗಳು ಮೃಗಾಂಕಾ ಸಿಂಗ್‌ ಅವರು ಆರ್‌ಎಲ್‌ಡಿಯ ತಬಸ್ಸುಮ್‌ ಹಸನ್‌ ಎದುರು ಸೋತರು. 2013ರಲ್ಲಿ ಇಲ್ಲಿ ಜಾಟ್‌ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಭಾರಿ ಕೋಮು ಸಂಘರ್ಷ ಉಂಟಾಗಿತ್ತು. ಕೆಲವೇ ತಿಂಗಳ ಬಳಿಕ ನಡೆದ ಲೋಕಸಭಾ ಚುನಾವಣೆಯಲ್ಲಿ ಅದರ ಲಾಭವನ್ನು ಬಿಜೆಪಿ ಪಡೆದುಕೊಂಡಿತ್ತು.

ಕೈರಾನಾ ಸೋಲಿಗೆ ಮುನ್ನವೇ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಭಾರಿ ಮುಖಭಂಗವೇ ಆಗಿತ್ತು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಉಪಮುಖ್ಯಮಂತ್ರಿ ಕೇಶವ ‍ಪ್ರಸಾದ್‌ ಮೌರ್ಯ ಪ್ರತಿನಿಧಿಸಿದ್ದ ಗೋರಖಪುರ ಮತ್ತು ಫುಲ್ಪುರ ಲೋಕಸಭಾ ಕ್ಷೇತ್ರಗಳಲ್ಲಿ ಎಸ್‌ಪಿ–ಬಿಎಸ್‌ಪಿ ಮೈತ್ರಿ ಎದುರು ಬಿಜೆಪಿ ಸೋತಿತ್ತು.

ಉತ್ತರ ಪ್ರದೇಶದ 80 ಕ್ಷೇತ್ರಗಳ ಪೈಕಿ 71 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತ್ತು. ಆದರೆ, ಉಪಚುನಾವಣೆಗಳಲ್ಲಿ ಬೆನ್ನು ಬೆನ್ನಿಗೆ ಮೂರು ಕ್ಷೇತ್ರ
ಗಳನ್ನು ಕಳೆದುಕೊಂಡಿತು. ಕರ್ನಾಟಕದ 28 ಕ್ಷೇತ್ರಗಳ ಪೈಕಿ 17 ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು. ಆದರೆ ಈಗ ಮೂರು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಒಂದನ್ನು ಗೆಲ್ಲಲು ಮಾತ್ರ ಬಿಜೆಪಿಗೆ ಸಾಧ್ಯವಾಗಿದೆ.

ದೇಶದ ಎಲ್ಲ ಭಾಗಗಳಲ್ಲಿಯೂ ಒಂದು ಪ್ರವೃತ್ತಿಯನ್ನು ಗುರುತಿಸುವುದಕ್ಕೆ ಸಾಧ್ಯ ಇದೆ. ಎರಡು ಪ್ರಬಲ ರಾಜಕೀಯ ಪಕ್ಷಗಳು ಎಲ್ಲೆಲ್ಲಿ ಒಂದಾಗಿವೆಯೋ ಅಲ್ಲೆಲ್ಲ ಬಿಜೆಪಿಗೆ ಸಂಕಷ್ಟ ಎದುರಾಗಿದೆ. ಗಂಗಾ ನದಿಯ ಬಯಲಿನಿಂದ ಕಾವೇರಿಯ ತಪ್ಪಲಿನವರೆಗೆ ಇದು ನಿಜವಾಗಿದೆ.

ಮಹಾರಾಷ್ಟ್ರದ ಪಾಲ್ಘರ್‌ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಅಲ್ಲಿ ಬಿಜೆಪಿ ಗೆದ್ದಿದೆ. ಆದರೆ, ಭಂಡಾರಾ–ಗೊಂಡಿಯಾ ಕ್ಷೇತ್ರದಲ್ಲಿ ಕಾಂಗ್ರೆಸ್‌–ಎನ್‌ಸಿಪಿ ಮೈತ್ರಿ ಅಭ್ಯರ್ಥಿ ಗೆಲುವಿನ ನಗೆ ಬೀರಿದರು.

ಕರ್ನಾಟಕದಲ್ಲಿ ಜೆಡಿಎಸ್‌, ಮಹಾರಾಷ್ಟ್ರದಲ್ಲಿ ಎನ್‌ಸಿಪಿ, ಉತ್ತರ ಪ್ರದೇಶದಲ್ಲಿ ಎಸ್‌ಪಿ, ಬಿಎಸ್‌ಪಿ ಮತ್ತು ಆರ್‌ಎಲ್‌ಡಿಯಂತಹ ಪ್ರಾದೇಶಿಕ ಪಕ್ಷಗಳು ಬಿಜೆಪಿಯ ಲೋಕಸಭಾ ಸ್ಥಾನಗಳನ್ನು ಕಸಿದುಕೊಳ್ಳುತ್ತಿವೆ. ಆದರೆ, ಈ ಪ್ರವೃತ್ತಿಯನ್ನು ಬೆಳೆಯಲು ಬಿಟ್ಟರೆ ಅದು 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮಗ್ಗುಲ ಮುಳ್ಳಾಗುವ ಎಲ್ಲ ಅಪಾಯಗಳೂ ಇವೆ.

ಕಾಂಗ್ರೆಸ್‌ ಪಕ್ಷ ಪುನಶ್ಚೇತನಗೊಂಡಂತೆ ಕಾಣಿಸುತ್ತಿದೆ. ಆದರೆ, ಮೋದಿ ನೇತೃತ್ವದ ಬಿಜೆಪಿಯ ಜೈತ್ರಯಾತ್ರೆಗೆ ತಡೆಯೊಡ್ಡಲು ಒಬ್ಬಂಟಿಯಾಗಿ ಕಾಂಗ್ರೆಸ್‌ಗೆ ಸಾಧ್ಯವಾಗದು. ರಾಜಸ್ಥಾನದಲ್ಲಿ ಈ ಫೆಬ್ರುವರಿಯಲ್ಲಿ ಎರಡು ಲೋಕಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಪಡೆದಿತ್ತು. ಡಿಸೆಂಬರ್‌ನಲ್ಲಿ ಅಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಕೈ ಮೇಲಾಗಲಿದೆ ಎಂದು ಭಾವಿಸುವಂತೆ ಈ ಫಲಿತಾಂಶ ಮಾಡಿದೆ.

ಛತ್ತೀಸಗಡದಲ್ಲಿ ಅಜಿತ್‌ ಜೋಗಿ ಅವರು ಹೊಸ ಪಕ್ಷ ಮಾಡಿರುವುದರಿಂದ ಅಲ್ಲಿ ಸ್ಪರ್ಧೆ ತ್ರಿಕೋನವಾಗಿದೆ ಎಂಬುದು ಬಿಜೆಪಿಗೆ ಸಮಾಧಾನಕರ ಅಂಶ. ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಸ್ಪರ್ಧೆ ಇರುವ ಮಧ್ಯ ಪ್ರದೇಶ ಮಾತ್ರ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಅಗ್ನಿ ಪರೀಕ್ಷೆ ಒಡ್ಡಲಿದೆ.

282:ಕಳೆದ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆದ್ದ ಸ್ಥಾನಗಳು
272:ಈಗ ಬಿಜೆಪಿ ಹೊಂದಿರುವ ಸ್ಥಾನಗಳು
27:ಕಳೆದ ಲೋಕಸಭಾ ಚುನಾವಣೆ ಬಳಿಕ ಉಪಚುನಾವಣೆ ನಡೆದ ಕ್ಷೇತ್ರಗಳು
6:ಬಿಜೆಪಿ ಗೆದ್ದ ಸ್ಥಾನಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.