ADVERTISEMENT

ಉಪ ಚುನಾವಣೆಯಲ್ಲಿ ಅಕ್ರಮ: ಆಯೋಗಕ್ಕೆ ದೂರು ನೀಡಲು ಬಿಜೆಡಿ ನಿರ್ಧಾರ

ಪಿಟಿಐ
Published 23 ನವೆಂಬರ್ 2025, 11:46 IST
Last Updated 23 ನವೆಂಬರ್ 2025, 11:46 IST
<div class="paragraphs"><p>- ಐಸ್ಟಾಕ್ ಚಿತ್ರ</p></div>

- ಐಸ್ಟಾಕ್ ಚಿತ್ರ

   

ಭುವನೇಶ್ವರ: ಒಡಿಶಾದ ನುಆಪಢಾ ವಿಧಾನಸಭೆ ಕ್ಷೇತ್ರಕ್ಕೆ ಇತ್ತೀಚೆಗೆ ನಡೆದಿದ್ದ ಉಪ ಚುನಾವಣೆಯಲ್ಲಿ ‘ಸರ್ಕಾರಿ ಪ್ರಾಯೋಜಿತ ಅಕ್ರಮ’ ನಡೆದಿದೆ ಎಂದು ಬಿಜು ಜನತಾ ದಳ (ಬಿಜೆಡಿ) ಆರೋಪಿಸಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿಯೂ ಪಕ್ಷ ಹೇಳಿದೆ.

ಪಕ್ಷದ ಅಧ್ಯಕ್ಷ ನವೀನ್‌ ಪಟ್ನಾಯಕ್‌ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ‘ಈ ಬಗ್ಗೆ ಈ ಹಿಂದೆಯೇ ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ಬಳಿ ದೂರು ನೀಡಿದ್ದೆವು. ಆದರೆ, ಯಾವ ಪ್ರಯೋಜನವೂ ಆಗಿಲ್ಲ’ ಎಂದು ಪಕ್ಷ ತಿಳಿಸಿದೆ.

ADVERTISEMENT

‘ನಮ್ಮ ಪಕ್ಷಕ್ಕೆ ಬಂದಿದ್ದ ಮತಗಳನ್ನು ಇವಿಎಂ ಬಳಸಿ ಬೇರೆ ಪಕ್ಷಕ್ಕೆ ವರ್ಗಾಯಿಸಲಾಗಿದೆ. ಇದು ರಾಜ್ಯ ಸರ್ಕಾರದ ಪ್ರಾಯೋಜಕತ್ವದಲ್ಲೇ ನಡೆದಿದೆ. ಒಟ್ಟು 63 ಮತಗಟ್ಟೆಗಳಲ್ಲಿ ಅಕ್ರಮ ನಡೆದಿದೆ. ನಮ್ಮ ಮತಗಳನ್ನು ಪಡೆದುಕೊಂಡು ಬಿಜೆ‍ಪಿ ಗೆದ್ದಿದೆ’ ಎಂದು ವಿಧಾನಸಭೆಯಲ್ಲಿ ವಿರೋಧ ಪಕ್ಷದ ಮುಖ್ಯ ಸಚೇತಕಿ ಪ್ರಮೀಳಾ ಮಲ್ಲಿಕ್‌ ಹೇಳಿದರು.

‘ಮತದಾನದ ದಿನ ಸಂಜೆ 5ಕ್ಕೆ ಶೇಕಡ 75ರಷ್ಟು ಮತದಾನ ನಡೆದಿದೆ ಎಂದು ಆಯೋಗ ಹೇಳಿತ್ತು. 7ರ ಹೊತ್ತಿಗೆ ಶೇ 77ಕ್ಕೆ ಏರಿಕೆಯಾಯಿತು. ಮಾರನೇ ದಿನ ಶೇ 81ರಷ್ಟು ಮತದಾನ ನಡೆದಿದೆ ಎಂದು ಹೇಳಿತು. ಅಂತಿಮವಾಗಿ ಶೇ 83.45ರಷ್ಟು ಮತದಾನ ನಡೆದಿದೆ ಎಂದಿತು. ಅಕ್ರಮ ನಡೆದಿದೆ ಎಂಬುದು ಖಚಿತ’ ಎಂದರು.

ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದರೆ, ಬಿಜೆ‍ಡಿ ಮೂರನೇ ಸ್ಥಾನಕ್ಕೆ ಕುಸಿದಿತ್ತು. ಕಾಂಗ್ರೆಸ್‌ ಎರಡನೇ ಸ್ಥಾನದಲ್ಲಿತ್ತು. ಬಿಜೆಡಿಯ ಎಲ್ಲ ಆರೋಪಗಳನ್ನು ಬಿಜೆಪಿ ತಳ್ಳಿಹಾಕಿದ್ದು, ‘ಬಿಜೆಡಿಯು ಜನರ ವಿಶ್ವಾಸ ಕಳೆದುಕೊಂಡಿದೆ’ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.