ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಹಿಂಸಾಚಾರ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ರಾಜಘಾಟ್‌ನ ಮಹಾತ್ಮ ಗಾಂಧೀ ಸಮಾಧಿ ಮುಂದೆ ಶಾಂತಿ ಪಠಣ ಮಾಡಿದ್ದಾರೆ.
ಮಂಗಳವಾರ ಗಾಂಧೀಜಿ ಸಮಾಧಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಅವರು ಹಿಂಸೆಯನ್ನು ನಿಲ್ಲಿಸುವಂತೆ ದೆಹಲಿಯ ಜನತೆಗೆ ಮನವಿ ಮಾಡಿದ್ದಾರೆ.
ದೆಹಲಿಯಲ್ಲಿ ಶಾಂತಿ ಸ್ಥಾಪಿಸಲು ದೇವಾಲಯ ಮತ್ತು ಮಸೀದಿಗಳು ಜನರಿಗೆ ತಿಳಿ ಹೇಳಬೇಕೆಂದು ಕೇಜ್ರಿವಾಲ್ ಹೇಳಿದ್ದಾರೆ.
‘ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ ಹಿಂದು, ಮುಸ್ಲಿಮ್ ಮತ್ತು ಪೊಲೀಸರು ಹತ್ಯೆಗೀಡಾಗುತ್ತಿದ್ದಾರೆ. ಮನೆ ಮತ್ತು ಅಂಗಡಿಗಳು ಬೆಂಕಿಗೆ ಆಹುತಿ ಆಗುತ್ತಿವೆ. ಇದರಿಂದ ಯಾರಿಗೂ ಸಹಾಯವಾಗುವುದಿಲ್ಲ. ಈ ಹುಚ್ಚು ಉನ್ಮಾದ ಕೊನೆಯಾಗಲೇಬೇಕಿದೆ‘ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಈ ವೇಳೆ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ಆಮ್ ಆದ್ಮಿ ಪಕ್ಷದ ಹಲವು ನಾಯಕರು ಹಾಜರಿದ್ದರು.
ಅಮಿತ್ ಶಾ, ಕೇಜ್ರಿವಾಲ್ ಭೇಟಿ
ಈಶಾನ್ಯ ದೆಹಲಿಯಲ್ಲಿ ಭುಗಿಲೆದ್ದಿರುವ ಹಿಂಸಾಚಾರ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಂಗಳವಾರ ಮಾತುಕತೆ ನಡೆಸಿದ್ದರು.
ಅಮಿತ್ ಶಾ ನೇತೃತ್ವದಲ್ಲಿ ನಡೆದ ಸಭೆಯ ನಂತರ ಮಾತನಾಡಿದ್ದ ಅರವಿಂದ ಕೇಜ್ರಿವಾಲ್, ‘ದೆಹಲಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ತೀವ್ರ ಆತಂಕಕ್ಕೀಡು ಮಾಡಿವೆ. ಪರಿಸ್ಥಿತಿ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುಲಾಗುವುದು. ಅಗತ್ಯ ಬಿದ್ದರೆ ಸೇನೆಯನ್ನು ಕರೆಸಿಕೊಳ್ಳಲಾಗುವುದು ಎಂಬ ಭರವಸೆಯನ್ನು ಕೇಂದ್ರ ಗೃಹ ಸಚಿವರು ನೀಡಿದ್ದಾರೆ‘ ಎಂದು ತಿಳಿಸಿದ್ದರು.
‘ತಮ್ಮ ಮೇಲಿನ ಅಧಿಕಾರಿಗಳು ಆಜ್ಞೆ ಮಾಡದ ಹೊರತು ತಾವು ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಈ ವಿಚಾರವಾಗಿ ಕೇಂದ್ರ ಗೃಹ ಸಚಿವರ ಬಳಿ ಮಾತನಾಡುತ್ತೇನೆ‘ ಎಂದು ದೆಹಲಿ ಸಿಎಂ ಕೇಜ್ರಿವಾಲ್ ಹೇಳಿದ್ದರು.
ಅಗತ್ಯ ಬಿದ್ದರೆ ಹೊರಗಿನವರು ಒಳನುಸುಳದಂತೆ ದೆಹಲಿಯ ಸರಹದ್ದುಗಳನ್ನು ಮುಚ್ಚಲಾಗುವುದು ಎಂದು ಅವರು ತಿಳಿಸಿದ್ದರು.
10ಕ್ಕೆ ಏರಿದ ಸಾವಿನಸಂಖ್ಯೆ
ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಇಂದು ಐವರು ಮೃತಪಟ್ಟಿದ್ದಾರೆ. ಇದರೊಂದಿಗೆ, ಈವರೆಗೆ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 150 ಜನ ಗಾಯಾಳುಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಗುರು ತೇಗ್ ಬಹದ್ದೂರ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಸುನಿಲ್ ಕುಮಾರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.