ADVERTISEMENT

ತೆಲಂಗಾಣದಲ್ಲಿ ರಾಷ್ಟ್ರೀಯ ಅರಿಸಿನ ಮಂಡಳಿ: ಸಂಪುಟ ಸಭೆ ಒಪ್ಪಿಗೆ

ಪಿಟಿಐ
Published 4 ಅಕ್ಟೋಬರ್ 2023, 16:53 IST
Last Updated 4 ಅಕ್ಟೋಬರ್ 2023, 16:53 IST
   

ನವದೆಹಲಿ: ತೆಲಂಗಾಣದಲ್ಲಿ ರಾಷ್ಟ್ರೀಯ ಅರಿಸಿನ ಮಂಡಳಿ ಸ್ಥಾಪನೆಗೆ ಕೇಂದ್ರ ಸಂಪುಟ ಸಭೆ ಬುಧವಾರ ಒಪ್ಪಿಗೆ ನೀಡಿದೆ. ಮಂಡಳಿ ಸ್ಥಾಪನೆಗೆ ಕೇಂದ್ರ ಸರ್ಕಾರ ಅಧಿಸೂಚನೆಯನ್ನೂ ಹೊರಡಿಸಿದೆ. 

2030ರ ವೇಳೆಗೆ ಅರಿಸಿನ ರಫ್ತು ವಹಿವಾಟನ್ನು ₹8,400 ಕೋಟಿಗೆ ಹೆಚ್ಚಿಸುವ ನಿರೀಕ್ಷೆ ಇದೆ. ಅರಿಸಿನ ಮತ್ತು ಅದರ ಉತ್ಪನ್ನಗಳ ಅಭಿವೃದ್ಧಿಗೆ ಮಂಡಳಿ ಶ್ರಮಿಸಲಿದೆ ಎಂದು ವಾಣಿಜ್ಯ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಈ ಕುರಿತು ನಂತರದಲ್ಲಿ ಸುದ್ದಿಗಾರರಿಗೆ ವಿವರಣೆ ನೀಡಿದ ಕೇಂದ್ರ ಸಚಿವ ಕಿಶನ್‌ ರೆಡ್ಡಿ ಅವರು, ಮಂಡಲಿಯು ತೆಲಂಗಾಣದ ರೈತರಿಗಷ್ಟೇ ಅಲ್ಲದೆ ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶ, ತಮಿಳುನಾಡು, ಆಂಧ್ರಪ್ರದೇಶ, ಮಿಜೊರಾಂ, ಅಸ್ಸಾಂ, ಗುಜರಾತ್‌, ಒಡಿಶಾ ಮತ್ತು ಪಶ್ಚಿಮ ಬಂಗಾಳದ ರೈತರಿಗೆ ನೆರವು ನೀಡಲಿದೆ ಎಂದರು.

ADVERTISEMENT

‘ತೆಲಂಗಾಣದ ರೈತರು ಮಂಡಲಿ ಸ್ಥಾಪನೆಗೆ ಒತ್ತಾಯಿಸಿದ್ದರು. ಬೇಡಿಕೆ ಈಡೇರುವವರೆಗೂ  ಚಪ್ಪಲಿ ಅಥವಾ ಶೂ ಧರಿಸುವುದಿಲ್ಲ ಎಂದು ಪ್ರತಿಜ್ಞೆಗೈದು 15 ವರ್ಷಗಳಿಂದ ಬರಿಗಾಲಿನಲ್ಲಿ ಓಡಾಡುತ್ತಿದ್ದರು. ಸಂಪುಟ ಸಭೆ ನಿರ್ಧಾರದ ಬಳಿಕ ನಮ್ಮ ಸಿಬ್ಬಂದಿ ರೈತರಿಗೆ ಚಪ್ಪಲಿಗಳನ್ನು ವಿತರಿಸಿದರು’ ಎಂದು ಹೇಳಿದರು.

ವಿಶ್ವದ ಅರಿಸಿನ ವ್ಯಾಪಾರ ವಹಿವಾಟಿನಲ್ಲಿ ಭಾರತವು ಶೇ 62ಕ್ಕಿಂತಲೂ ಹೆಚ್ಚಿನ ಪಾಲು ಹೊಂದಿದೆ.

ಗಿರಿಜನ ವಿವಿಗೆ ಅಸ್ತು: 

ತೆಲಂಗಾಣದಲ್ಲಿ ಸಾಮಕ್ಕ ಸಾರಕ್ಕ ಕೇಂದ್ರೀಯ ಗಿರಿಜನ ವಿಶ್ವವಿದ್ಯಾಲಯ ಸ್ಥಾಪನೆಗಾಗಿ ಕೇಂದ್ರೀಯ ವಿಶ್ವವಿದ್ಯಾಲಯಗಳ ಕಾಯಿದೆಗೆ ತಿದ್ದುಪಡಿ ತರಲು ಬುಧವಾರ ಇಲ್ಲಿ ನಡೆದ  ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಹೊಸ ವಿಶ್ವವಿದ್ಯಾಲಯವು ರಾಜ್ಯದಲ್ಲಿ ಉನ್ನತ ಶಿಕ್ಷಣದ ಗುಣಮಟ್ಟ ಸುಧಾರಿಸಲಿದೆ ಎಂದು ಸರ್ಕಾರ ಹೇಳಿದೆ. ತೆಲಂಗಾಣದ ಮುಲುಗುನಲ್ಲಿ ಸ್ಥಾಪನೆಯಾಗಲಿರುವ ಈ ವಿಶ್ವವಿದ್ಯಾಲಯಕ್ಕೆ ₹ 889.07 ಕೋಟಿ ಹಣ ಒದಗಿಸಲಾಗುವುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಮೋದಿ ಅವರು ಈಚೆಗೆ ತೆಲಂಗಾಣದಲ್ಲಿ ಸಾರ್ವಜನಿಕ ಸಭೆಯಲ್ಲಿ, ಕೇಂದ್ರೀಯ ಗಿರಿಜನ ವಿವಿ ಮತ್ತು ಅರಿಸಿನ ಮಂಡಳಿ ಸ್ಥಾಪಿಸುವುದಾಗಿ ಘೋಷಿಸಿದ್ದರು. 

ನದಿ ನೀರು ಹಂಚಿಕೆ: 
ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ನಡುವೆ ನದಿ ನೀರು ಹಂಚಿಕೆ ಕುರಿತು ಅನುಸರಿಸಬೇಕಾದ ನಿಯಮಗಳಿಗೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ. ಕೃಷ್ಣಾ ನದಿ ನೀರು ನ್ಯಾಯಮಂಡಳಿ ಈ ನಿಯಮಗಳನ್ನು ರೂಪಿಸಿದೆ.

ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಅವರು, ‘ಎರಡೂ ರಾಜ್ಯಗಳ ಅಭಿವೃದ್ಧಿ ಯೋಜನೆಗಳ ಆಧಾರಿತವಾಗಿ ನ್ಯಾಯಾಧೀಕರಣವು ನೀರು ಹಂಚಿಕೆ ಮಾಡಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.