ADVERTISEMENT

ಹಸಿರು ಇಂಧನ ಕಾರಿಡಾರ್: ₹ 12,000ಕೋಟಿ ವೆಚ್ಚದ ಯೋಜನೆಗೆ ಕೇಂದ್ರ ಸಂಪುಟ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2022, 19:30 IST
Last Updated 6 ಜನವರಿ 2022, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಹಸಿರು ಇಂಧನ ಕಾರಿಡಾರ್‌ನಡಿ ₹12,000 ಕೋಟಿ ವೆಚ್ಚದ ಎರಡನೇ ಹಂತದ ಯೋಜನೆಗೆ ಕೇಂದ್ರ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ.

ಈ ಯೋಜನೆಯು ವಿದ್ಯುತ್‌ ಗ್ರಿಡ್‌ಗಳ ಏಕೀಕರಣ ಹಾಗೂ 20 ಗಿಗಾವಾಟ್‌ ವಿದ್ಯುತ್‌ ಉತ್ಪಾದನೆ ಮಾಡುವ ಪ್ರಾಜೆಕ್ಟ್‌ಗಳ ಸ್ಥಳಾಂತರ ಒಳಗೊಂಡಿದೆ.

ಅಲ್ಲದೇ, ಈ ಯೋಜನೆಯಡಿ 10,750 ಕಿ.ಮೀ.ವಿದ್ಯುತ್‌ ಪ್ರಸರಣ ಮಾರ್ಗವನ್ನು ಸೇರಿಸುವ ಹಾಗೂ 27,500 ಮೆಗಾವಾಟ್‌ ವಿದ್ಯುತ್‌ ಪರಿವರ್ತನೆ ಸಾಮರ್ಥ್ಯದ ಸಬ್‌ಸ್ಟೇಷನ್‌ಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ.

ADVERTISEMENT

ಎರಡನೇ ಹಂತದ ಯೋಜನೆಯನ್ನು 2021–22 ರಿಂದ 2025–26ನೇ ಹಣಕಾಸು ವರ್ಷಗಳ ಅವಧಿಯಲ್ಲಿ ಅನುಷ್ಠಾನಗೊಳಿಸಲಾಗುತ್ತದೆ. ಒಟ್ಟು ಯೋಜನಾ ವೆಚ್ಚದಲ್ಲಿ ಕೇಂದ್ರ ಸರ್ಕಾರದ ಪಾಲು ಶೇ 33ರಷ್ಟು ಇರಲಿದೆ.

ಕರ್ನಾಟಕ, ಗುಜರಾತ್, ಹಿಮಾಚಲಪ್ರದೇಶ, ಕೇರಳ, ರಾಜಸ್ಥಾನ, ತಮಿಳುನಾಡು ಹಾಗೂ ಉತ್ತರಪ್ರದೇಶ ರಾಜ್ಯಗಳಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಕೇಂದ್ರ ಇಂಧನ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಯೋಜನೆಯ ಮೊದಲ ಹಂತವನ್ನು ₹ 10,142 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಶೇ 80ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದೂ ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.