ADVERTISEMENT

RG Kar ಪ್ರಕರಣ: ಸಂತ್ರಸ್ತೆಗೆ ನ್ಯಾಯ ಕೋರಿ ಧರಣಿಗೆ ಕಲ್ಕತ್ತ ಹೈಕೋರ್ಟ್ ಅನುಮತಿ

ಪಿಟಿಐ
Published 20 ಡಿಸೆಂಬರ್ 2024, 12:57 IST
Last Updated 20 ಡಿಸೆಂಬರ್ 2024, 12:57 IST
<div class="paragraphs"><p>ಕಲ್ಕತ್ತ ಹೈಕೋರ್ಟ್</p></div>

ಕಲ್ಕತ್ತ ಹೈಕೋರ್ಟ್

   

ಕೋಲ್ಕತ್ತ: ಇಲ್ಲಿನ ಆರ್‌.ಜಿ. ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅತ್ಯಾಚಾರಕ್ಕೊಳಗಾಗಿ, ಕೊಲೆಯಾದ ವೈದ್ಯ ವಿದ್ಯಾರ್ಥಿನಿಗೆ ತ್ವರಿತ ನ್ಯಾಯ ದೊರಕಿಸುವಂತೆ ಆಗ್ರಹಿಸಿ (ಡಿಸೆಂಬರ್ 20 ರಿಂದ 26 ರವರೆಗೆ) ಪ್ರತಿಭಟನೆ ನಡೆಸಲು ವೈದ್ಯರ ಸಂಘಟನೆಗೆ ಕಲ್ಕತ್ತಾ ಹೈಕೋರ್ಟ್ ಶುಕ್ರವಾರ ಅನುಮತಿ ನೀಡಿದೆ.

ಆದಾಗ್ಯೂ, ಕೇಂದ್ರ ಕೋಲ್ಕತ್ತದ ಎಸ್‌ಪ್ಲನೇಡ್‌ನಲ್ಲಿರುವ ಡೋರಿನಾ ಕ್ರಾಸಿಂಗ್‌ನಿಂದ 50 ಅಡಿ ದೂರದಲ್ಲಿ ಪ್ರತಿಭಟನೆ ನಡೆಸುವಂತೆ ವೈದ್ಯರ ಜಂಟಿ ವೇದಿಕೆಗೆ ನ್ಯಾಯಾಲಯ ನಿರ್ದೇಶನ ನೀಡಿದೆ.

ADVERTISEMENT

ನಗರದ ಹೃದಯ ಭಾಗದಲ್ಲಿರುವ ಜನನಿಬಿಡ ಪ್ರದೇಶ ಡೋರಿನಾ ಕ್ರಾಸಿಂಗ್‌ನಲ್ಲಿ ದಿನದ 24 ಗಂಟೆ ಧರಣಿ ನಡೆಸಲು ವೈದ್ಯರ ಸಂಘಟನೆ ಮುಂದಾಗಿತ್ತು.

ಪಶ್ಚಿಮ ಬಂಗಾಳ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲರು ಪ್ರತಿಭಟನೆ ನಡೆಸಲು ಡೋರಿನಾ ಕ್ರಾಸಿಂಗ್‌ ಪ್ರದೇಶವನ್ನು ಆಯ್ಕೆ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಪ್ರತಿಭಟನೆಯಿಂದ ಈ ಪ್ರದೇಶದಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತದೆ ಎಂದು ಅವರು ಪ್ರತಿಪಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ತೀರ್ಥಂಕರ ಘೋಷ್, ಪ್ರತಿಭಟನೆಯ ಆಯೋಜಕರು ವೈದ್ಯರಾಗಿರುವುದರಿಂದ, ಅವರು ಈ ಪ್ರದೇಶದಲ್ಲಿ ಸಂಚರಿಸುವ ಜನರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರೆ ಎಂದು ಹೇಳಿದರು.

ಪ್ರತಿಭಟನೆ ನಡೆಸುವ ವೇದಿಕೆಯು 40 ಅಡಿ ಉದ್ದ ಮತ್ತು 23 ಅಡಿ ಅಗಲವನ್ನು ಮೀರಬಾರದು. ಧರಣಿಯಲ್ಲಿ ಭಾಗವಹಿಸುವವರ ಸಂಖ್ಯೆ ಒಮ್ಮೆಗೆ 250 ಮೀರಬಾರದು. ಜತೆಗೆ ಪ್ರತಿಭಟನೆಯ ವೇಳೆ ಯಾವುದೇ ಪ್ರಚೋದನಕಾರಿ ಭಾಷಣ ಮಾಡದಂತೆ ನ್ಯಾಯಾಲಯ ನಿರ್ದೇಶಿಸಿದೆ.

ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ವ್ಯವಸ್ಥೆ ಮಾಡುವಂತೆ ಆಡಳಿತ ಮಂಡಳಿಗೆ ನ್ಯಾಯಮೂರ್ತಿ ಘೋಷ್ ನಿರ್ದೇಶನ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.