ADVERTISEMENT

ಲೈಂಗಿಕ ಕ್ರಿಯೆಗೆ ಸಮ್ಮತಿ ನೀಡಲು ಅಪ್ರಾಪ್ತ ವಯಸ್ಕರು ಅಸಮರ್ಥರು: ಕಲ್ಕತ್ತಾ HC

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಡಿಸೆಂಬರ್ 2025, 6:48 IST
Last Updated 11 ಡಿಸೆಂಬರ್ 2025, 6:48 IST
<div class="paragraphs"><p>ಕಲ್ಕತ್ತಾ ಹೈಕೋರ್ಟ್</p></div>

ಕಲ್ಕತ್ತಾ ಹೈಕೋರ್ಟ್

   

ಪಿಟಿಐ ಚಿತ್ರ 

ಅ‍ಪ್ರಾ‍ಪ್ತ ವಯಸ್ಸಿನವರಿಗೆ ಲೈಂಗಿಕ ಸಂಬಂಧದ ಪರಿಣಾಮಗಳ ಬಗ್ಗೆ ತಿಳಿದಿರುವುದಿಲ್ಲ, ಹೀಗಾಗಿ ಅವರು ಅದಕ್ಕೆ ಒಪ್ಪಿಗೆ ನೀಡಲು ಅಸಮರ್ಥರಾಗಿರುತ್ತಾರೆ ಎಂದು ಪೊಕ್ಸೊ ಪ್ರಕರಣವೊಂದರಲ್ಲಿ ತೀರ್ಪು ನೀಡಿರುವ ಕಲ್ಕತ್ತ ಹೈಕೋರ್ಟ್, ಕೆಳಹಂತದ ನ್ಯಾಯಾಲಯ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಎತ್ತಿ ಹಿಡಿದಿದೆ‌.

ADVERTISEMENT

12 ವರ್ಷದ ಬಾಲಕಿಯೊಂದಿಗೆ 23 ವರ್ಷದ ವ್ಯಕ್ತಿಯೊಬ್ಬನ ಸಂಬಂಧ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ರಾಜಶೇಖರ್ ಮಾಂಥ ಹಾಗೂ ಅಜಯ್ ಕುಮಾರ್ ಗುಪ್ತಾ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.

ಬಾಲಕಿ 12–14 ವರ್ಷವಿದ್ದಾಗ ದೋಷಿ ಲೈಂಗಿಕ ದೌರ್ಜನ್ಯ ಎಸಗಿದ್ದ ಎನ್ನುವುದು ದೂರು.

ದೋಷಿ ಜೊತೆ ಸಂತ್ರಸ್ತೆಯು ಸ್ನೇಹ ಸಂಬಂಧ ಹೊಂದಿದ್ದರು ಎನ್ನುವ ಕಾರಣಕ್ಕೆ ಪೊಕ್ಸೊ ಕಾಯ್ದೆಯಡಿ ನೀಡಿರುವ ರಕ್ಷಣೆಯನ್ನು ದುರ್ಬಲಗೊಳಿಸಲಾಗದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಪ್ರಕರಣದಲ್ಲಿ ಸಂತೋಷ್ ಶ್ರೀವಾತ್ಸವ ಅಲಿಯಾಸ್ ಮನು ಶ್ರೀವಾತ್ಸವ ಎಂಬಾತನನ್ನು ಐಪಿಸಿ ಕಾಯ್ದೆಯ ಸೆಕ್ಷನ್ 376 ಹಾಗೂ ಪೋಕ್ಸೊ ಕಾಯ್ದೆಯ ಸೆಕ್ಷನ್ 6ರಡಿ ದೋಷಿ ಎಂದು ಕೆಳ ನ್ಯಾಯಾಲಯ ಹೇಳಿತ್ತು. ಅದನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

ಪ್ರಕರಣದಲ್ಲಿ ಲಭ್ಯವಿರುವ ಮೌಖಿಕ ಹಾಗೂ ವೈಜ್ಞಾನಿಕ ಸಾಕ್ಷಿಗಳು ದೋಷಿಯು ಲೈಂಗಿಕ ದೌರ್ಜನ್ಯ ಎಸಗಿರುವುದನ್ನು ದೃಢಿಕರಿಸುತ್ತದೆ. ಸಂತ್ರಸ್ತೆಗೆ ಹುಟ್ಟಿದ ಮಗುವಿನ ಜೈವಿಕ ತಂದೆಯೂ ಆತನೇ ಎಂದು ಡಿಎನ್ಎ ವರದಿ ಹೇಳಿದೆ ಎನ್ನುವುದನ್ನು ಕೋರ್ಟ್ ಗಮನಿಸಿದೆ.

2014ರಲ್ಲಿ ದೋಷಿಯು ಬಾಲಕಿಯ ಜೊತೆ ಪ್ರೇಮ ಸಂಬಂಧ ಪ್ರಾರಂಭಿಸಿದ್ದ. 2014ರಲ್ಲಿ ಆಕೆ 14 ವರ್ಷದವಳಾಗಿದ್ದಾಗ ಲೈಂಗಿಕ ಸಂಬಂಧದಲ್ಲಿ ಏರ್ಪಟ್ಟಿದ್ದ. ಮದುವೆಯಾಗುವುದಾಗಿ ನಂಬಿಸಿ, ಆಕೆಯ ವಿರೋಧದ ಹೊರತಾಗಿಗೂ ಲೈಂಗಿಕ ದೌರ್ಜನ್ಯ ಎಸಗಿದ್ದ. 2017ರಲ್ಲಿ ಆಕೆ ಗರ್ಭಿಣಿಯಾದಾಗ ವಿಷಯ ಬೆಳಕಿಗೆ ಬಂದಿತ್ತು. ಆದರೆ ಆತ ಆರೋಪವನ್ನು ನಿರಾಕರಿಸಿದ್ದರಿಂದ ಎಫ್‌ಐಆರ್ ದಾಖಲು ಮಾಡಲಾಗಿತ್ತು ಎಂದು ಪ್ರಾಸಿಕ್ಯೂಷನ್ ಹೇಳಿದೆ.

(ಬಾರ್ ಆ್ಯಂಡ್ ಬೆಂಚ್ ಮಾಹಿತಿ ಆಧರಿಸಿದ ಬರೆದ ಸುದ್ದಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.