ADVERTISEMENT

ಎಡಪಕ್ಷಗಳು ಒಂದಾಗಲಿ: ಪ್ರತಿಧ್ವನಿಸಿದ ಒತ್ತಾಯ

ಕೇರಳ: ಕಣ್ಣೂರಿನಲ್ಲಿ ಸಿಪಿಎಂನ 23ನೇ ಮಹಾಸಮಾವೇಶ

ಪಿಟಿಐ
Published 6 ಏಪ್ರಿಲ್ 2022, 16:26 IST
Last Updated 6 ಏಪ್ರಿಲ್ 2022, 16:26 IST
ಕೇರಳದ ಕಣ್ಣೂರಿನಲ್ಲಿ ಬುಧವಾರ ಆರಂಭಗೊಂಡ ಸಿಪಿಎಂನ 23ನೇ ಸಮಾವೇಶದಲ್ಲಿ ಮುಖಂಡರಾದ ಎಸ್‌.ರಾಮಚಂದ್ರನ್‌ ಪಿಳ್ಳೈ ಹಾಗೂ ಸೀತಾರಾಂ ಯೆಚೂರಿ ಅವರು ಪಕ್ಷದ ಧ್ವಜಾರೋಹಣ ನೆರವೇರಿಸಿದರು. –ಪಿಟಿಐ ಚಿತ್ರ 
ಕೇರಳದ ಕಣ್ಣೂರಿನಲ್ಲಿ ಬುಧವಾರ ಆರಂಭಗೊಂಡ ಸಿಪಿಎಂನ 23ನೇ ಸಮಾವೇಶದಲ್ಲಿ ಮುಖಂಡರಾದ ಎಸ್‌.ರಾಮಚಂದ್ರನ್‌ ಪಿಳ್ಳೈ ಹಾಗೂ ಸೀತಾರಾಂ ಯೆಚೂರಿ ಅವರು ಪಕ್ಷದ ಧ್ವಜಾರೋಹಣ ನೆರವೇರಿಸಿದರು. –ಪಿಟಿಐ ಚಿತ್ರ    

ಕಣ್ಣೂರು: ದೇಶದಲ್ಲಿನ ಪ್ರಸಕ್ತ ರಾಜಕೀಯ ಪರಿಸ್ಥಿತಿ ಹಾಗೂ ಸವಾಲುಗಳನ್ನು ಎದುರಿಸಲು ಕಮ್ಯುನಿಸ್ಟ್ ಚಳವಳಿಯ ಭಾಗವಾಗಿರುವ ಎಲ್ಲ ಪಕ್ಷಗಳು ಮತ್ತೆ ಒಂದಾಗಬೇಕು ಎಂಬ ಪ್ರತಿಪಾದನೆ ಇಲ್ಲಿ ಆರಂಭವಾದ ಸಿಪಿಎಂನ 23ನೇ ಮಹಾಸಮಾವೇಶದಲ್ಲಿ ಬುಧವಾರ ಪ್ರತಿಧ್ವನಿಸಿತು.

‘ತಮ್ಮ ಇತಿಹಾಸದಲ್ಲಿಯೇ ಎಡಪಕ್ಷಗಳು ಕೆಟ್ಟ ದಿನಗಳನ್ನು ಎದುರಿಸುತ್ತಿವೆ. ಇಂತಹ ದುಃಸ್ಥಿತಿಯನ್ನು ಗೆಲ್ಲಲು ಎಡಪಂಥೀಯ ಪಕ್ಷಗಳು ಮತ್ತೆ ಒಂದಾಗಬೇಕು’ ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜಾ ಹೇಳಿದರು.

ಈ ಮಾತಿಗೆ ದನಿಗೂಡಿಸಿದ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ‘ಕಮ್ಯುನಿಸ್ಟ್‌ ಚಳವಳಿ ಪುನರುಜ್ಜೀವನವು ತತ್ವಾಧಾರಿತವಾಗಿರಬೇಕು. ಈಗಿನ ಸವಾಲುಗಳನ್ನು ಎದುರಿಸಲು ಎಡಪಕ್ಷಗಳು ಒಂದಾಗುವುದು ಮುಖ್ಯ’ ಎಂದರು.

ADVERTISEMENT

‘ಆರ್‌ಎಸ್‌ಎಸ್‌ ಮತ್ತು ಬಿಜೆಪಿ ವಿರುದ್ಧ ಒಗ್ಗಟ್ಟಿನ ಹೋರಾಟ ಅಗತ್ಯ ಇದೆ. ಆರ್‌ಎಸ್‌ಎಸ್‌ಅನ್ನು ಸೈದ್ಧಾಂತಿಕವಾಗಿ ಎದುರಿಸಲು ಹಾಗೂ ಪರ್ಯಾಯ ಶಕ್ತಿಯಾಗಿ ಹೊರಹೊಮ್ಮಲು ಎಡಪಂಥಕ್ಕೆ ಮಾತ್ರ ಸಾಧ್ಯ’ ಎಂದು ಉಭಯ ನಾಯಕರು ಹೇಳಿದರು.

‘ಈ ಉದ್ದೇಶ ಸಾಧನೆಗಾಗಿ ಎಲ್ಲ ಪ್ರಗತಿಪರ, ಜಾತ್ಯತೀತ ಹಾಗೂ ಪ್ರಜಾತಾಂತ್ರಿಕ ಶಕ್ತಿಗಳನ್ನು ಒಗ್ಗೂಡಿಸಲು ನಾವು ಶ್ರಮಿಸಬೇಕು. ಆರ್‌ಎಸ್‌ಎಸ್‌ ಪ್ರಭಾವದಿಂದಾಗಿ ಸಮಾಜದಲ್ಲಿ ಕಂಡುಬರುತ್ತಿರುವ ದ್ವೇಷಪೂರಿತ ಸಿದ್ಧಾಂತಗಳು ಹಾಗೂ ತಾರತಮ್ಯ ಮಾಡುತ್ತಿರುವ ಆಡಳಿತವನ್ನು ಕಿತ್ತೊಗೆಯಲು ಹೋರಾಟ ಅಗತ್ಯ’ ಎಂದು ಅವರು ಪ್ರತಿಪಾದಿಸಿದರು.

ಈಗ ನಡೆಯುತ್ತಿರುವ ಸಮಾವೇಶ ಹಾಗೂ ಬರುವ ಅಕ್ಟೋಬರ್‌ನಲ್ಲಿ ನಡೆಯುವ ಸಿಪಿಐನ 24ನೇ ಸಮಾವೇಶವು ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚೆ, ಆತ್ಮಾವಲೋಕನ ಹಾಗೂ ನಿರ್ದಿಷ್ಟ ಕಾರ್ಯಕ್ರಮಗಳನ್ನು ರೂಪಿಸಲು ಎರಡು ಪಕ್ಷಗಳಿಗೆ ವೇದಿಕೆ ಒದಗಿಸಲಿವೆ’ ಎಂದು ಡಿ.ರಾಜಾ ಹೇಳಿದರು.

ಅಖಿಲ ಭಾರತ ಫಾರ್ವರ್ಡ್ ಬ್ಲಾಕ್‌ನ ಪ್ರಧಾನ ಕಾರ್ಯದರ್ಶಿ ದೇವವ್ರತ ಬಿಸ್ವಾಸ್, ರೆವಲ್ಯೂಷನರಿ ಸೋಷಲಿಸ್ಟ್‌ ಪಾರ್ಟಿ ಪ್ರಧಾನ ಕಾರ್ಯದರ್ಶಿ ಮನೋಜ್‌ ಭಟ್ಟಾಚಾರ್ಯ, ಸಿಪಿಐ(ಎಂಎಲ್) ಲಿಬರೇಷನ್‌ನ ಪ್ರಧಾನ ಕಾರ್ಯದರ್ಶಿ ದೀಪಂಕರ್‌ ಭಟ್ಟಾಚಾರ್ಯ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.