ADVERTISEMENT

ಕೋವಿಡ್‌ ಲಸಿಕೆ ಪೂರೈಸುವಂತೆ ಭಾರತವನ್ನು ಕೋರಿದ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ

ರೈತರ ಪ್ರತಿಭಟನೆ ಮತ್ತೆ ಪ್ರಸ್ತಾಪ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2021, 6:10 IST
Last Updated 11 ಫೆಬ್ರುವರಿ 2021, 6:10 IST
ಜಸ್ಟಿನ್ ಟ್ರೂಡೊ
ಜಸ್ಟಿನ್ ಟ್ರೂಡೊ   

ನವದೆಹಲಿ: ಕೋವಿಡ್‌–19 ಲಸಿಕೆ ಪೂರೈಸುವಂತೆ ಭಾರತಕ್ಕೆ ಮನವಿ ಮಾಡಿರುವ ಕೆನಡಾ, ರೈತರ ಪ್ರತಿಭಟನೆ ವಿಷಯವನ್ನು ಇದೇ ಸಂದರ್ಭದಲ್ಲಿ ಮತ್ತೊಮ್ಮೆ ಪ್ರಸ್ತಾಪಿಸಿದೆ.

ಪ‍್ರಧಾನಿ ನರೇಂದ್ರ ಮೋದಿ ಅವರಿಗೆ ಬುಧವಾರ ದೂರವಾಣಿ ಮೂಲಕ ಮಾತನಾಡಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ, ಭಾರತದಿಂದ ಕೋವಿಡ್‌–19 ಲಸಿಕೆಗಳನ್ನು ಪೂರೈಸುವಂತೆ ಕೋರಿದ್ದಾರೆ. ಈ ಮನವಿಗೆ ಸ್ಪಂದಿಸಿದ ಪ್ರಧಾನಿ, ಇತರ ದೇಶಗಳಿಗೆ ಕಳುಹಿಸಿರುವಂತೆ ಕೆನಡಾಗೂ ಶೀಘ್ರದಲ್ಲೇ ಲಸಿಕೆಗಳನ್ನು ಕಳುಹಿಸಲಾಗುವುದು. ಕೆನಡಾದ ಲಸಿಕೆ ಅಭಿಯಾನಕ್ಕೆ ಭಾರತ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ, ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ವಿಷಯವನ್ನು ಟ್ರೂಡೊ ಪ್ರಸ್ತಾಪಿಸಿದ್ದಾರೆ. ಪ್ರಜಾಪ್ರಭುತ್ವದ ಸಿದ್ಧಾಂತಗಳನ್ನು ಎತ್ತಿ ಹಿಡಿಯುವುದು ಅಗತ್ಯವಿದೆ ಮತ್ತು ಮಾತುಕತೆ ಮೂಲಕ ಈ ವಿಷಯವನ್ನು ಇತ್ಯರ್ಥಗೊಳಿಸಬೇಕು ಎಂದು ಕೋರಿದ್ದಾಗಿ ಕೆನಡಾ ಪ್ರಧಾನಿ ಕಚೇರಿಯಿಂದ ಬಿಡುಗಡೆ ಮಾಡಿರುವ ಹೇಳಿಕೆ ತಿಳಿಸಿದೆ.

ADVERTISEMENT

ಮಾತುಕತೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಹ ಟ್ವೀಟ್‌ ಮಾಡಿದ್ದಾರೆ. ‘ನನ್ನ ಸ್ನೇಹಿತ ಜಸ್ಟಿನ್‌ ಟ್ರೂಡೊ ದೂರವಾಣಿ ಕರೆ ಮಾಡಿದ್ದಕ್ಕೆ ಸಂತೋಷವಾಯಿತು. ಕೋವಿಡ್‌–19 ಲಸಿಕೆಯನ್ನು ಕೆನಡಾಗೆ ಪೂರೈಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದ್ದೇನೆ. ಹವಾಮಾನ ಬದಲಾವಣೆ, ಜಾಗತಿಕ ಆರ್ಥಿಕ ಪುನಶ್ಚೇತನ ಸೇರಿದಂತೆ ಇತರ ಮಹತ್ವದ ವಿಷಯಗಳ ಬಗ್ಗೆಯೂ ಈ ಸಂದರ್ಭದಲ್ಲಿ ಚರ್ಚಿಸಲಾಯಿತು’ ಎಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದರು.

ಆದರೆ, ನವದೆಹಲಿಯಲ್ಲಿ ಪ್ರಧಾನಿ ಕಚೇರಿ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲೂ ರೈತರ ಪ್ರತಿಭಟನೆ ವಿಷಯ ಚರ್ಚೆ ಮಾಡಿರುವುದನ್ನು ಪ್ರಸ್ತಾಪಿಸಿಲ್ಲ.

‘ಕೋವಿಡ್‌–19 ವಿರುದ್ಧ ಹೋರಾಟದಲ್ಲಿ ಜಗತ್ತು ಜಯ ಸಾಧಿಸಲು ಕಾರಣವಾಗಿದ್ದರೆ ಅದಕ್ಕೆ ಭಾರತದ ಫಾರ್ಮಾಸ್ಯುಟಿಕಲ್‌ ಸಾಮರ್ಥ್ಯವೇ ಕಾರಣವಾಗಿದೆ ಎಂದು ಟ್ರಡೊ, ಮೋದಿಗೆ ತಿಳಿಸಿದ್ದಾರೆ. ನರೇಂದ್ರ ಮೋದಿ ಅವರ ನಾಯಕತ್ವದ ಬಗ್ಗೆ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ’ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಜಸ್ಟಿನ್ ಟ್ರೂಡೊ ಅವರು ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಕಳೆದ ಡಿಸೆಂಬರ್‌ನಲ್ಲಿ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ಬಗ್ಗೆಯೂ ಭಾರತವು ಕಟುವಾದ ಪ್ರತಿಕ್ರಿಯೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.