ADVERTISEMENT

41 ರಾಜತಾಂತ್ರಿಕರನ್ನು ಹಿಂದಕ್ಕೆ ಕರೆಸಿಕೊಂಡ ಕೆನಡಾ: ಭಾರತದ ಗಡುವಿನೊಳಗೆ ಕ್ರಮ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2023, 11:28 IST
Last Updated 20 ಅಕ್ಟೋಬರ್ 2023, 11:28 IST
ಅರಿಂದಮ್ ಬಾಗ್ಚಿ
ಅರಿಂದಮ್ ಬಾಗ್ಚಿ   

ನವದೆಹಲಿ: ಭಾರತದಲ್ಲಿರುವ ತನ್ನ 62 ರಾಜತಾಂತ್ರಿಕ ಸಿಬ್ಬಂದಿ ಪೈಕಿ 41 ಜನರನ್ನು ಕೆನಡಾ ಹಿಂದಕ್ಕೆ ಕರೆಸಿಕೊಂಡಿದೆ. ಆದರೆ, ಇದಕ್ಕೆ ಬದಲಾಗಿ, ತನ್ನ ದೇಶದಲ್ಲಿರುವ ಭಾರತದ ರಾಜತಾಂತ್ರಿಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಕೆನಡಾ ಹೇಳಿದೆ.

ರಾಜತಾಂತ್ರಿಕರು ಹಾಗೂ ದೇಶದ ವಿವಿಧೆಡೆಯ ಕಾನ್ಸುಲರ್‌ ಕಚೇರಿಗಳ ಸಿಬ್ಬಂದಿ ಸೇರಿದಂತೆ 41 ಮಂದಿ ಬುಧವಾರ ಹಾಗೂ ಗುರುವಾರ ದೇಶ ತೊರೆದಿದ್ದಾರೆ. 

ಇದರೊಂದಿಗೆ, ಬೆಂಗಳೂರು, ಚಂಡೀಗಢ ಹಾಗೂ ಮುಂಬೈನಲ್ಲಿರುವ ಕಾನ್ಸುಲರ್‌ ಕಚೇರಿಗಳಲ್ಲಿನ ಭೌತಿಕ ಕಾರ್ಯಾಚರಣೆಯನ್ನು ಕೆನಡಾ ಸ್ಥಗಿತಗೊಳಿಸಿದೆ. ದೇಶದಲ್ಲಿ ಸದ್ಯ ಕೆನಡಾದ 21 ರಾಜತಾಂತ್ರಿಕರು ಮಾತ್ರ ಇದ್ದು, ನವದೆಹಲಿಯಲ್ಲಿರುವ ಕೆನಡಾ ಹೈಕಮಿಷನ್ ಭೌತಿಕವಾಗಿ ಸೇವೆಗಳನ್ನು ಒದಗಿಸುತ್ತಿದೆ.

ADVERTISEMENT

ಖಾಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಹರ್‌ದೀಪ್‌ ಸಿಂಗ್‌ ನಿಜ್ಜರ್ ಅವರನ್ನು ಜೂನ್‌ 18ರಂದು ಕೆನಡಾದಲ್ಲಿ ಹತ್ಯೆ ಮಾಡಲಾಗಿತ್ತು. ನಿಜ್ಜರ್‌ ಹತ್ಯೆಯಲ್ಲಿ ಭಾರತದ ಕೈವಾಡ ಇದೆ ಎಂದು ಆರೋಪಿಸಿದ್ದ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರೂಡೊ, ತನಿಖೆ ನಡೆಸುವುದಾಗಿ ಘೋಷಿಸಿದ್ದರು.

ಇದರ ಬೆನ್ನಲ್ಲೇ, ಉಭಯ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಕಾಣಿಸಿಕೊಂಡಿತ್ತು. ಕೆನಡಾ ವಿರುದ್ಧ ಕಠಿಣ ನಿಲುವು ತಳೆದಿರುವ ಭಾರತ, ಎರಡೂ ದೇಶಗಳಲ್ಲಿರುವ ರಾಜತಾಂತ್ರಿಕರ ಸಂಖ್ಯೆ ಸಮಾನವಾಗಿರಬೇಕು ಎಂದು ಹೇಳಿತ್ತು. ಅದರಂತೆ, ಭಾರತದಲ್ಲಿರುವ ರಾಜತಾಂತ್ರಿಕರ ಪೈಕಿ 41 ಮಂದಿಯನ್ನು ಅ.20ರೊಳಗೆ ಹಿಂದಕ್ಕೆ ಕರೆಸಿಕೊಳ್ಳುವಂತೆ ಗಡುವು ನೀಡಿತ್ತು. ಈ ಗಡುವಿನ ಒಳಗೆ ಕೆನಡಾ ಕ್ರಮ ಕೈಗೊಂಡಿದೆ.

‘ಭಾರತದಿಂದ ವಲಸೆ ಬರುವವರ ಅರ್ಜಗಳನ್ನು ಸ್ವೀಕಾರ ಹಾಗೂ ಪರಿಶೀಲನೆ ಕಾರ್ಯವನ್ನು ಕೆನಡಾ ಮುಂದುವರಿಸಲಿದೆ. ಕೆಲ ನಿರ್ದಿಷ್ಟ ಅರ್ಜಿಗಳ ಪರಿಶೀಲನೆ ಕಾರ್ಯ ಸ್ಥಳೀಯವಾಗಿ ಇಲ್ಲವೇ ಸುರಕ್ಷತೆ ಇರುವ ಸ್ಥಳದಲ್ಲಿಯೇ ನಡೆಯಬೇಕಾಗುತ್ತದೆ’ ಎಂದು ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ, ವಲಸೆ ಸಚಿವ ಮಾರ್ಕ್‌ ಮಿಲ್ಲರ್‌ ಹೇಳಿದ್ದಾರೆ.

‘ತನ್ನ ಅಧಿಕಾರಿಗಳು ಹೊಂದಿದ್ದ ರಾಜತಾಂತ್ರಿಕ ರಕ್ಷಣೆ ಹಾಗೂ ಸೌಲಭ್ಯಗಳನ್ನು ಏಕಪಕ್ಷೀಯವಾಗಿ ತೆಗೆದುಹಾಕಿದ ಭಾರತದ ಕ್ರಮವು ರಾಜತಾಂತ್ರಿಕ ಸಂಬಂಧಗಳ ಕುರಿತ ವಿಯೆನ್ನಾ ಒಪ್ಪಂದದ ಉಲ್ಲಂಘನೆಯಾಗುತ್ತಿದ್ದರು, ಕೆನಡಾದ ರಾಜತಾಂತ್ರಿಕ ಸಿಬ್ಬಂದಿ ಸುರಕ್ಷಿತವಾಗಿ ಭಾರತ ತೊರೆಯುವಂತೆ ಕ್ರಮ ಕೈಗೊಳ್ಳಲಾಗಿದೆ’ ಎಂದೂ ಹೇಳಿದ್ದಾರೆ.

ಮೆಲಾನಿ ಜೋಲಿ
ಭಾರತದ ಆಂತರಿಕ ವಿಷಯಗಳಲ್ಲಿ ಕೆನಡಾ ಹಸ್ತಕ್ಷೇಪ ಮಾಡುತ್ತಿರುವ ಕಾರಣ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಭಾರತ ಮತ್ತು ಕೆನಡಾದಲ್ಲಿರುವ ಉಭಯ ದೇಶಗಳ ರಾಜತಾಂತ್ರಿಕರ ಸಂಖ್ಯೆ ಸಮವಾಗಿರಬೇಕು ಎಂಬ ಉದ್ದೇಶದಿಂದ ಇಂತಹ ಸೂಚನೆ ನೀಡಲಾಗಿತ್ತು.
-ಅರಿಂದಮ್‌ ಬಾಗ್ಚಿ, ವಿದೇಶಾಂಗ ಸಚಿವಾಲಯ ವಕ್ತಾರ 
ರಾಜತಾಂತ್ರಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ತನಗೆ ಭಾರತ ಸೂಚಿಸಿದ್ದು ಈ ನಿರ್ಧಾರದಿಂದ ಎರಡೂ ದೇಶಗಳ ಪ್ರಜೆಗಳಿಗೆ ಕೆನಡಾ ಹೈಕಮಿಷನ್‌ ಹಾಗೂ ಕಾನ್ಸುಲೇಟ್‌ ಕಚೇರಿಗಳಲ್ಲಿ ಸಿಗುತ್ತಿದ್ದ ಸೇವೆಗಳ ಮೇಲೆ ಪರಿಣಾಮ ಉಂಟಾಗಲಿದೆ.
-ಮೆಲಾನಿ ಜೋಲಿ, ವಿದೇಶಾಂಗ ಸಚಿವೆ ಕೆನಡಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.