ADVERTISEMENT

ಸಾಲಗಾರರ ಸಂಕಷ್ಟಕ್ಕೆ ಸ್ಪಂದಿಸಲು ಕೇಂದ್ರಕ್ಕೆ ಸೂಚಿಸಿದ ಸುಪ್ರೀಂ ಕೋರ್ಟ್‌

ಸಾಲ ಮರುಪಾವತಿ ಮುಂದೂಡಿಕೆ ಅವಧಿಯ ಬಡ್ಡಿ: ಕೇಂದ್ರಕ್ಕೆ ‘ಸುಪ್ರೀಂ’ ತರಾಟೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2020, 20:02 IST
Last Updated 26 ಆಗಸ್ಟ್ 2020, 20:02 IST
ಸುರ್ಪೀಂ ಕೋರ್ಟ್‌
ಸುರ್ಪೀಂ ಕೋರ್ಟ್‌   

ನವದೆಹಲಿ: ಬ್ಯಾಂಕ್‌ ಸಾಲ ಮರುಪಾವತಿ ಮುಂದೂಡಿಕೆ ಅವಧಿಯ ಬಡ್ಡಿ ಮನ್ನಾ ವಿಚಾರದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳದ ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್‌ ಬುಧವಾರ ತರಾಟೆಗೆ ತೆಗೆದುಕೊಂಡಿದೆ.ವ್ಯಾಪಾರ ಮತ್ತು ಬ್ಯಾಂಕುಗಳ ಹಿತಾಸಕ್ತಿಯನ್ನಷ್ಟೇ ನೋಡಿಕೊಂಡರೆ ಸಾಲದು, ಜನರ ಸಂಕಷ್ಟವನ್ನೂ ಗಣನೆಗೆ ತೆಗೆದುಕೊಳ್ಳಬೇಕು ಎಂದೂ ನ್ಯಾಯಮೂರ್ತಿ ಅಶೋಕ್‌ ಭೂಷಣ್‌ ನೇತೃತ್ವದ ಪೀಠವು ಹೇಳಿದೆ.

ಲಾಕ್‌ಡೌನ್‌ ಅವಧಿಯಲ್ಲಿ ಮುಂದೂಡಲಾದ ಸಾಲ ಮರುಪಾವತಿ ಅವಧಿಗೆ ಬಡ್ಡಿ ಮನ್ನಾ ಮಾಡಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಪೀಠವು ನಡೆಸಿತು.

ಬಡ್ಡಿ ಬನ್ನಾ ಮಾಡುವುದಕ್ಕೆ ಸಂಬಂಧಿಸಿ ಸರ್ಕಾರವು ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಹಿಂದೆ ಅವಿತುಕೊಳ್ಳುವುದು ಸಾಧ್ಯವಿಲ್ಲ. ಸರ್ಕಾರ ಹೇರಿದ್ದ ಲಾಕ್‌ಡೌನ್‌ನಿಂದಾಗಿಯೇ ಈಗಿನ ಪರಿಸ್ಥಿತಿ ನಿರ್ಮಾಣ ಆಗಿದೆ. ಹಾಗಾಗಿ, ಸಾಲ ಮರುಪಾವತಿ ಮುಂದೂಡಿರುವ ಆರು ತಿಂಗಳ ಬಡ್ಡಿ ಮತ್ತು ಬಡ್ಡಿಯ ಮೇಲಿನ ಬಡ್ಡಿ ವಿಚಾರದಲ್ಲಿ ಸ್ಪಷ್ಟ ನಿಲುವು ಪ್ರಕಟಿಸಬೇಕು ಎಂದು ಪೀಠವು ಹೇಳಿದೆ. ವಿಕೋಪ ನಿರ್ವಹಣೆ ಕಾಯ್ದೆಯ ಅಡಿಯಲ್ಲಿ ಇರುವ ಅಧಿಕಾರವನ್ನು ಬಳಸಿಕೊಂಡು ಕೇಂದ್ರವು ನಿರ್ಧಾರ ಕೈಗೊಳ್ಳಬೇಕೇ ವಿನಾ ಆರ್‌ಬಿಐಯನ್ನು ಅವಲಂಬಿಸಬಾರದು ಎಂದೂ ಸೂಚಿಸಿದೆ.

ADVERTISEMENT

ಸರ್ಕಾರವು ಆರ್‌ಬಿಐ ಹಿಂದೆ ಅಡಗಿಕೊಂಡಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಾಲಿಸಿಟರ್‌ ಜನರಲ್‌ ತುಷಾರ್ ಮೆಹ್ತಾ, ‘ಪೀಠವು ಹಾಗೆ ಹೇಳಬಾರದು, ನಾವು ಆರ್‌ಬಿಐ ಜತೆಗೆ ಸಮನ್ವಯದಿಂದ ಕೆಲಸ ಮಾಡುತ್ತಿದ್ದೇವೆ’ ಎಂದರು.

ಕೇಂದ್ರ ಸರ್ಕಾರವು ತನ್ನ ನಿಲುವನ್ನೂ ಪ್ರಕಟಿಸಿಲ್ಲ, ಯಾವುದೇ ಪ್ರಮಾಣಪತ್ರವನ್ನೂ ಸಲ್ಲಿಸಿಲ್ಲ ಎಂಬುದರತ್ತ ಅರ್ಜಿದಾರರ ವಕೀಲ ರಾಜೀವ್‌ ದತ್ತಾ ಅವರು ಪೀಠದ ಗಮನ ಸೆಳೆದರು. ಬಡ್ಡಿ ಮನ್ನಾ ವಿಚಾರವನ್ನು ಅನಿರ್ದಿಷ್ಟಾವಧಿಗೆ ತಳ್ಳಿಕೊಂಡು ಹೋಗಲು ಸಾಧ್ಯವಿಲ್ಲ ಎಂದು ಪೀಠವು ಅಭಿಪ್ರಾಯಪಟ್ಟಿತು.ಸ್ಪಷ್ಟ ನಿಲುವು ಇರುವ ಪ್ರಮಾಣಪತ್ರವನ್ನು ಆಗಸ್ಟ್‌ 31ರೊಳಗೆ ಸಲ್ಲಿಸಬೇಕು ಎಂಬ ನಿರ್ದೇಶನವನ್ನೂ ಕೊಟ್ಟಿತು.

ಬ್ಯಾಂಕುಗಳ ಸಂಕಷ್ಟ:ಬಡ್ಡಿ ಮನ್ನಾ ಮಾಡುವುದು ಬುದ್ಧಿವಂತಿಕೆಯ ನಡೆ ಅಲ್ಲ. ಬಡ್ಡಿ ಮನ್ನಾ ಮಾಡುವುದರಿಂದ ಬ್ಯಾಂಕುಗಳ ಹಣಕಾಸು ಸ್ಥಿತಿ ಹದಗೆಡುತ್ತದೆ ಎಂದು ಆರ್‌ಬಿಐ ಹಿಂದಿನ ವಿಚಾರಣೆ ಸಂದರ್ಭದಲ್ಲಿ ವಾದಿಸಿತ್ತು. ಆದರೆ, ಇದನ್ನು ಪೀಠವು ಒಪ್ಪಿರಲಿಲ್ಲ.ಮುಂದೂಡಿಕೆ ಅವಧಿಯ ಬಡ್ಡಿಯ ಮೇಲೆ ಬಡ್ಡಿ ವಿಧಿಸುವುದರಲ್ಲಿ ಯಾವ ಅರ್ಥವೂ ಇಲ್ಲ ಎಂದು ಪೀಠವು ಹೇಳಿತ್ತು.

ಬಡ್ಡಿ ಮನ್ನಾ ವಿಚಾರದಲ್ಲಿ ಎರಡು ಅಂಶಗಳಿವೆ. ಮರುಪಾವತಿ ಅವಧಿಯ ಬಡ್ಡಿಯನ್ನು ಪೂರ್ಣವಾಗಿ ಮನ್ನಾ ಮಾಡುವುದು ಮತ್ತು ಈ ಅವಧಿಯ ಬಡ್ಡಿಯ ಮೇಲಿನ ಬಡ್ಡಿ ಮನ್ನಾ ಮಾಡುವುದು. ಈಗಿನದ್ದು ಸಂಕಷ್ಟದ ಸಮಯ. ಮರುಪಾವತಿಯನ್ನು ಮುಂದೂಡಿಕೆ ಮಾಡಿ ಆ ಅವಧಿಗೆ ಬಡ್ಡಿ ಹೇರುವುದು ಗಂಭೀರ ವಿಚಾರ ಎಂದೂ ಆಗ ಪೀಠವು ಹೇಳಿತ್ತು.

ಹಣಕಾಸು ಸಚಿವಾಲಯ ಮತ್ತು ಆರ್‌ಬಿಐನ ಅಧಿಕಾರಿಗಳು ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಜೂನ್‌ನಲ್ಲಿ ನಡೆದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್‌ ಸೂಚನೆ ನೀಡಿತ್ತು.

ಕೇಂದ್ರಕ್ಕೂ ಇದೆ ಹೊಣೆ

ಬಡ್ಡಿ ಮನ್ನಾ ವಿಚಾರದಲ್ಲಿ ತಾನು ನಿಸ್ಸಾಯಕ ಎಂದು ಕೇಂದ್ರ ಸರ್ಕಾರ ಹೇಳಬಾರದು. ಇದು ಬ್ಯಾಂಕು ಮತ್ತು ಗ್ರಾಹಕರ ನಡುವಣ ವಿಚಾರ ಎಂದೂ ಹೇಳುವಂತಿಲ್ಲ. ಮರುಪಾವತಿ ಮುಂದೂಡಿಕೆಯನ್ನು ಕೇಂದ್ರವೇ ಘೋಷಿಸಿರುವುದರಿಂದ ಅದರ ಪ್ರಯೋಜನವು ಗ್ರಾಹಕರಿಗೆ ದಕ್ಕುವಂತೆ ನೋಡಿಕೊಳ್ಳಬೇಕು ಎಂದು ಈ ಹಿಂದಿನ ವಿಚಾರಣೆ ಸಂದರ್ಭದಲ್ಲಿ ಪೀಠವು ಹೇಳಿತ್ತು.

ಕೋವಿಡ್‌ ಹರಡುವಿಕೆ ತಡೆಗಾಗಿ ದೇಶವ್ಯಾಪಿ ಲಾಕ್‌ಡೌನ್‌ ಹೇರಿದ್ದ ಕಾರಣದಿಂದ ಸಾಲ ಮರುಪಾವತಿಯನ್ನು ಮೂರು ತಿಂಗಳು ಮುಂದೂಡಿ ಮಾರ್ಚ್‌ 27ರಂದು ಆರ್‌ಬಿಐ ಸುತ್ತೋಲೆ ಹೊರಡಿಸಿತ್ತು. ಬಳಿಕ ಈ ಅವಧಿಯನ್ನು ಆಗಸ್ಟ್‌ 31ರವರೆಗೆ ವಿಸ್ತರಿಸಲಾಗಿದೆ.

ಮತ್ತೆ ವಿಸ್ತರಣೆಗೆ ಕೋರಿಕೆ

ಮರುಪಾವತಿ ಅವಧಿ ವಿಸ್ತರಣೆಯು ಇದೇ 31ಕ್ಕೆ ಕೊನೆಗೊಳ್ಳುತ್ತದೆ. ಈ ಅವಧಿಯನ್ನು ಇನ್ನಷ್ಟು ವಿಸ್ತರಿಸಬೇಕು ಎಂದು ಅರ್ಜಿದಾರರ ಪರ ವಕೀಲ ಕಪಿಲ್‌ ಸಿಬಲ್‌ ಕೋರಿದರು. ಈಗ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ಪೂರ್ಣಗೊಂಡು ತೀರ್ಪು ಪ್ರಕಟವಾಗುವವರೆಗೆ ಮರುಪಾವತಿಯನ್ನು ಮುಂದೂಡಬೇಕು ಎಂದು ಅವರು ವಿನಂತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.