ADVERTISEMENT

ದೆಹಲಿ: 2013ರಿಂದ ಐಷಾರಾಮಿ ಕಾರು ಕದಿಯುತ್ತಿದ್ದ ‘ಕಾರ್ ಕಿಂಗ್’ ಬಂಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಜನವರಿ 2022, 6:27 IST
Last Updated 16 ಜನವರಿ 2022, 6:27 IST
ಬಂಧಿತ ಆರೋಪಿಯಿಂದ ವಶಪಡಿಸಿಕೊಂಡಿರುವ ಉಪಕರಣಗಳು (ಸಂಗ್ರಹ ಚಿತ್ರ)
ಬಂಧಿತ ಆರೋಪಿಯಿಂದ ವಶಪಡಿಸಿಕೊಂಡಿರುವ ಉಪಕರಣಗಳು (ಸಂಗ್ರಹ ಚಿತ್ರ)   

ನವದೆಹಲಿ: 2013ರಿಂದ ಐಷಾರಾಮಿ ಕಾರುಗಳನ್ನು ಕದಿಯುತ್ತಿದ್ದ ‘ಕಾರ್‌ ಕಿಂಗ್‌’ ಖ್ಯಾತಿಯ ಆರೋಪಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು ಸಿವಿಲ್‌ ಲೈನ್ಸ್‌ ಪ್ರದೇಶದ ನಿವಾಸಿ 42 ವರ್ಷದ ಕುನಾಲ್ ಎಂದು ಗುರುತಿಸಲಾಗಿದೆ.

‘ಕುನಾಲ್‌ನಿಂದ ಮೂರು ಕಾರು, ಹಲವು ಬಗೆಯ ನಂಬರ್ ಪ್ಲೇಟ್‌, ಕೀಗಳು ಸೇರಿದಂತೆ ಕಾರಿನ ಬಿಡಿಭಾಗಗಳನ್ನು ವಶಪಡಿಸಿಕೊಂಡಿದ್ದೇವೆ’ ಎಂದು ಉತ್ತರ ವಿಭಾಗದ ಡಿಸಿಪಿ ಸಾಗರ್ ಸಿಂಗ್ ಕಲ್ಸಿ ಹೇಳಿದ್ದಾರೆ.

ADVERTISEMENT

ಕುನಾಲ್‌ ವಿರುದ್ಧ ದೆಹಲಿಯ ಅನೇಕ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ.

ಜನವರಿ 10 ರಂದು ಶ್ರೆತಾಂಕ್ ಅಗರವಾಲ್ ಎಂಬುವರು ತಮ್ಮ ಮನೆ ಬಳಿ ನಿಲ್ಲಿಸಿದ್ದ ಟೊಯೊಟಾ ಫಾರ್ಚುನರ್‌ ಕಾರು ಕಾಣೆಯಾಗಿದೆ ಎಂದು ದೂರು ನೀಡಿದ್ದರು. ಪ್ರಕರಣ ಸಂಬಂಧ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಕುನಾಲ್‌ನನ್ನು ಕಾಶ್ಮೀರದಲ್ಲಿ ಸೆರೆ ಹಿಡಿದಿದ್ದಾರೆ.

ಕುನಾಲ್‌ ಕದ್ದ ಕಾರುಗಳಿಗೆ ನಂಬರ್‌ ಪ್ಲೇಟ್‌ ಮತ್ತು ಚಾಸಿಸ್‌ ಸಂಖ್ಯೆಯನ್ನು ಬದಲಾಯಿಸುತ್ತಿದ್ದ. ಹಾಗಾಗಿ ತನಿಖೆ ನಡೆಸಲು ತೊಂದರೆಯಾಗುತ್ತಿತ್ತು ಎಂದು ಪೊಲೀಸರು ವಿವರಿಸಿದ್ದಾರೆ.

2013ರಿಂದ ಐಷಾರಾಮಿ ಕಾರುಗಳನ್ನು ಕಳ್ಳತನ ಮಾಡುತ್ತಿದ್ದು, ಕದ್ದ ಕಾರುಗಳನ್ನು ಉತ್ತರ ಪ್ರದೇಶ ಮತ್ತು ಕಾಶ್ಮೀರದಲ್ಲಿ ಮಾರಾಟ ಮಾಡುತ್ತಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.