ADVERTISEMENT

ಕೊರೊನಾ ವಿರುದ್ಧ ‘ಸರ್ಜಿಕಲ್‌ ಸ್ಟ್ರೈಕ್‌’ ಮಾಡಿ: ಕೇಂದ್ರಕ್ಕೆ ಬಾಂಬೆ ಹೈಕೋರ್ಟ್‌

ಪಿಟಿಐ
Published 9 ಜೂನ್ 2021, 20:52 IST
Last Updated 9 ಜೂನ್ 2021, 20:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಇಂದಿನ ಸಮಾಜದ ಅತಿ ದೊಡ್ಡ ಶತ್ರುವಾದ ಕೊರೊನಾ ವೈರಾಣು ವಿರುದ್ಧದ ಹೋರಾಟವು ‘ನಿರ್ದಿಷ್ಟ ದಾಳಿ’ಯಂತೆ (ಸರ್ಜಿಕಲ್‌ ಸ್ಟ್ರೈಕ್‌) ಇರಬೇಕು. ಆದರೆ, ಶತ್ರು ಹೊರಬರಲಿ ಎಂದು ಕಾಯುತ್ತಾ ನಿಂತ ಯೋಧನಂತೆ ಕೇಂದ್ರವು ಹೋರಾಟ ನಡೆಸುತ್ತಿದೆ ಎಂದು ಕೇಂದ್ರ ಸರ್ಕಾರವನ್ನು ಬಾಂಬೆ ಹೈಕೋರ್ಟ್‌ ಬುಧವಾರ ತರಾಟೆಗೆ ತೆಗೆದುಕೊಂಡಿದೆ.

ಮನೆ ಮನೆಗೆ ತೆರಳಿ ಲಸಿಕೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ವಕೀಲರಾದ ಧೃತಿ ಕಪಾಡಿಯಾ ಮತ್ತು ಕುನಾಲ್‌ ತಿವಾರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. 75 ವರ್ಷ ದಾಟಿದ ಹಿರಿಯ ನಾಗರಿಕರಿಗೆ, ಅಂಗವಿಕಲರಿಗೆ, ಹಾಸಿಗೆ ಅಥವಾ ಗಾಲಿ ಕುರ್ಚಿಗಳಲ್ಲಿ ಇರುವವರಿಗೆ ಅವರು ಇರುವಲ್ಲಿಗೇ ಹೋಗಿ ಲಸಿಕೆ ನೀಡಬೇಕು ಎಂದು ಅವರು ಕೋರ್ಟ್‌ಗೆ ಮನವಿ ಮಾಡಿದ್ದರು.

ಮುಖ್ಯ ನ್ಯಾಯಮೂರ್ತಿ ದೀಪಂಕರ್‌ ದತ್ತ ಮತ್ತು ನ್ಯಾಯಮೂರ್ತಿ ಜಿ.ಎಸ್‌. ಕುಲಕರ್ಣಿ ಇದ್ದ ವಿಭಾಗೀಯ ಪೀಠ ಈ ಅರ್ಜಿಯ ವಿಚಾರಣೆ ನಡೆಸಿದೆ. ಕೇಂದ್ರ ಸರ್ಕಾರದ ‘ಮನೆಯ ಸಮೀಪವೇ ಲಸಿಕೆ ಕೇಂದ್ರ’ ನೀತಿಯ ಕುರಿತು ಕೋರ್ಟ್ ಹೀಗೆ ಹೇಳಿದೆ: ‘ನಮ್ಮ ಶತ್ರು ಕೊರೊನಾ ವೈರಾಣು ಕೆಲವು ಪ್ರದೇಶಗಳು ಮತ್ತು ಮನೆಯಿಂದ ಹೊರ ಬರಲಾದ ಜನರಲ್ಲಿ ಅಡಗಿರುತ್ತದೆ. ಹೀಗಾಗಿ ಸರ್ಕಾರವು ನಿರ್ದಿಷ್ಟ ದಾಳಿ ಮಾದರಿಯಲ್ಲಿ ವೈರಸ್‌ ಇರುವಲ್ಲಿಗೇ ಹೋಗಿ ಅದನ್ನು ಸೋಲಿಸಬೇಕು. ಆದರೆ ನೀವು ವೈರಾಣು ಹೊರಗೆ ಬರಲಿ ಎಂದು ಗಡಿಯಲ್ಲಿ ನಿಂತು ಕಾಯುತ್ತಿದ್ದೀರಿ’ ಎಂದು ಹೇಳಿದೆ. ಸರ್ಕಾರ ಜನರ ಒಳಿತಿಗಾಗಿಯೇ ಹಲವಾರು ನಿರ್ಧಾರಗಳನ್ನು ಕೈಗೊಂಡಿದೆ. ಆದರೆ ನಿರ್ಧಾರಗಳನ್ನು ವಿಳಂಬವಾಗಿ ತೆಗೆದುಕೊಂಡಿದ್ದರಿಂದ ಹಲವಾರು ಜೀವ ನಷ್ಟವಾಯಿತು ಎಂದಿದೆ.

ADVERTISEMENT

ಲಸಿಕಾ ಕೇಂದ್ರಗಳಿಗೆ ತೆರಳಲಾಗದ ಹಿರಿಯ ನಾಗರಿಕರು ಮತ್ತು ಅಂಗವಿಕಲರ ಭಾವನೆಗಳಷ್ಟೇ ಅಲ್ಲ, ಅವರ ಕುಟುಂಬದವರ ಭಾವನೆಗಳನ್ನೂ ಕೇಂದ್ರ ಸರ್ಕಾರ ಪರಿಗಣಿಸಬೇಕು ಎಂದು ಕೋರ್ಟ್ ಹೇಳಿದೆ. ಈ ಅರ್ಜಿಯ ಮುಂದಿನ ವಿಚಾರಣೆಯನ್ನು ಜುಲೈ 1ಕ್ಕೆ ನಿಗದಿಪಡಿಸಿದೆ.

ಲಸಿಕೆ ಅಭಿಯಾನದ ಆರಂಭದಲ್ಲಿ ಹಿರಿಯ ರಾಜಕಾರಣಿಯೊಬ್ಬರು ತಮ್ಮ ಮನೆಯಲ್ಲೇ ಹೇಗೆ ಲಸಿಕೆ ಪಡೆದರು ಎಂದು ಬಿಎಂಸಿಯನ್ನು ಕೋರ್ಟ್ ಪ್ರಶ್ನಿಸಿದೆ. ಈ ಕಾರ್ಯಕ್ಕೆ ಬಿಎಂಸಿ ಅಥವಾ ರಾಜ್ಯ ಸರ್ಕಾರ ಹೊಣೆ ಹೊತ್ತುಕೊಳ್ಳಲೇಬೇಕು ಎಂದು ಹೇಳಿದೆ.

ಬಿಎಂಸಿ ಪರ ವಕೀಲ ಅನಿಲ್‌ ಸಖಾರೆ ಮತ್ತು ಮಹಾರಾಷ್ಟ್ರ ಸರ್ಕಾರ ಪರ ಹೆಚ್ಚುವರಿ ವಕೀಲೆ ಗೀತಾ ಶಾಸ್ತ್ರಿ ಅವರಿಗೂ ಈ ಕುರಿತು ಮಾಹಿತಿ ನೀಡಲು ಕೋರ್ಟ್ ಆದೇಶಿಸಿದೆ.

ಸದ್ಯಕ್ಕೆ ಮನೆ ಬಾಗಿಲಿಗೆ ತೆರಳಿ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲು ಆಗುವುದಿಲ್ಲ. ಆದರೆ ‘ಮನೆ ಹತ್ತಿರ ಲಸಿಕೆ’ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಕೇಂದ್ರ ಸರ್ಕಾರ ಮಂಗಳವಾರ ಹೇಳಿತ್ತು.

‘ಕೇಂದ್ರದ ಅನುಮತಿ ಬೇಕಿಲ್ಲ’

ಕೇರಳ, ಜಮ್ಮು ಮತ್ತು ಕಾಶ್ಮೀರ, ಬಿಹಾರ ಮತ್ತು ಒಡಿಶಾ ಸರ್ಕಾರಗಳು ಮತ್ತು ಮಹಾರಾಷ್ಟ್ರದ ವಸಯಿ–ವಿರಾರ್‌ನಂತಹ ಕೆಲವು ನಗರ ಪಾಲಿಕೆಗಳು ಮನೆ ಬಾಗಿಲಿಗೆ ತೆರಳಿ ಲಸಿಕೆ ನೀಡುತ್ತಿರುವುದನ್ನು ಕೋರ್ಟ್‌ ಉಲ್ಲೇಖಿಸಿದೆ. ದೇಶದ ಇತರ ರಾಜ್ಯಗಳಲ್ಲಿ ಅದೇ ಮಾದರಿಯನ್ನು ಏಕೆ ಉತ್ತೇಜಿಸಬಾರದು ಎಂದು ಪೀಠವು ಪ್ರಶ್ನಿಸಿದೆ.

ರಾಜ್ಯ ಸರ್ಕಾರಗಳು ಮತ್ತು ಸ್ಥಳೀಯ ಸಂಸ್ಥೆಗಳು ಮನೆ ಮನೆಗೂ ತೆರಳಿ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಂಡರೆ ಅದನ್ನು ಕೇಂದ್ರ ಸರ್ಕಾರ ತಡೆಯುವಂತಿಲ್ಲ. ಆದರೆ ರಾಜ್ಯ ಸರ್ಕಾರಗಳು ಕೇಂದ್ರದ ಅನುಮತಿಗಾಗಿ ಕಾಯುತ್ತಿವೆ. ಹಲವಾರು ರಾಜ್ಯಗಳು ಕೇಂದ್ರದ ಅನುಮತಿಯಿಲ್ಲದೇ ಮನೆಮನೆಗೆ ತೆರಳಿ ಲಸಿಕೆ ನೀಡುತ್ತಿರುವಾಗ ಬೃಹನ್‌ಮುಂಬೈ ನಗರ ಪಾಲಿಕೆ ಏಕೆ ಕೇಂದ್ರದ ಅನುಮತಿಗೆ ಕಾಯುತ್ತಿದೆ. ಹೀಗೆ ಮಾಡುವ ಮೂಲಕ ಬಿಎಂಸಿಯು ಹೈಕೋರ್ಟ್‌ನ ನಿರೀಕ್ಷೆಯನ್ನು ಹುಸಿಗೊಳಿಸಿದೆ. ಕೋವಿಡ್‌ ನಿರ್ವಹಣೆ ವಿಚಾರದಲ್ಲಿ ಬಿಎಂಸಿ ಇತರ ರಾಜ್ಯಗಳಿಗೆ ಮಾದರಿಯಾಗಿದೆ ಎಂದು ನಾವು ಸದಾ ಹೇಳುತ್ತಿದ್ದೆವು ಎಂದು ದತ್ತ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.