ತುಷಾರ್ ಗಾಂಧಿ
- ಪಿಟಿಐ ಚಿತ್ರ
ತಿರುವನಂತಪುರ: ಮಹಾತ್ಮ ಗಾಂಧಿ ಮರಿಮೊಮ್ಮಗ ತುಷಾರ್ ಗಾಂಧಿ ಅವರು ಆರ್‌ಎಸ್‌ಎಸ್ ವಿರುದ್ಧ ಹೇಳಿಕೆ ನೀಡಿದ್ದನ್ನು ವಿರೋಧಿಸಿ ಪ್ರತಿಭಟನೆ ಮಾಡಿದ ಬಿಜೆಪಿ–ಆರ್‌ಎಸ್‌ಎಸ್ ಕಾರ್ಯಕರ್ತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸಂಘಪರಿವಾರದ ಕಾರ್ಯಕರ್ತರು ಪ್ರತಿಭಟನೆ ಮಾಡಿರುವುದನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ವಿರೋಧ ಪಕ್ಷ ಕಾಂಗ್ರೆಸ್ ಬಲವಾಗಿ ಖಂಡಿಸಿದೆ. ಇದಾದ ಬೆನ್ನಲ್ಲೇ ಪ್ರಕರಣ ದಾಖಲಾಗಿದೆ.
ಗಾಂಧಿವಾದಿ ದಿವಂಗತ ಪಿ. ಗೋಪಿನಾಥ್ ನಾಯರ್ ಅವರ ಪುತ್ಥಳಿ ಅನಾವರಣಗೊಳಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ತುಷಾರ್ ಗಾಂಧಿ, ‘ಆರ್‌ಎಸ್‌ಎಸ್ ವಿಷ’ ಎಂದು ಹೇಳಿದ್ದರು.
‘ಬಿಜೆಪಿಯನ್ನು ನಾವು ಸೋಲಿಸಬಹುದು. ಆದರೆ ಆರ್‌ಎಸ್‌ಎಸ್ ವಿಷ. ಅದರ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಏಕೆಂದರೆ ಅದು ನಮ್ಮ ದೇಶದ ವ್ಯವಸ್ಥೆಯಲ್ಲಿ ಹರಡಿದರೆ ಎಲ್ಲವೂ ನಾಶವಾಗುತ್ತದೆ’ ಎಂದು ಹೇಳಿದ್ದರು.
ಕಾರ್ಯಕ್ರಮದಿಂದ ಹಿಂದಿರುಗಿ ಹೋಗುವ ವೇಳೆ ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರು ತುಷಾರ್ ಗಾಂಧಿ ಅವರ ಕಾರು ತಡೆದು ಘೋಷಣೆ ಕೂಗಿ, ಆರ್‌ಎಸ್‌ಎಸ್ ವಿರುದ್ಧದ ಹೇಳಿಕೆ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದರು.
ತಮ್ಮ ಹೇಳಿಕೆ ಹಿಂಪಡೆಯಲು ನಿರಾಕರಿಸಿದ ತುಷಾರ್ ಗಾಂಧಿ, ‘ಗಾಂಧೀಜಿ ಕೀ ಜೈ’ ಎಂದು ಘೋಷಣೆ ಕೂಗಿ ಸ್ಥಳದಿಂದ ತೆರಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.