ADVERTISEMENT

IT Raid:₹300 ಕೋಟಿ ಎಣಿಕೆ, ಮುಗಿಯತ್ತಲೇ ಇಲ್ಲ ಬೌದ್‌ ಡಿಸ್ಟಿಲರಿ ಖಜಾನೆ ಲೆಕ್ಕ

ಪಿಟಿಐ
Published 10 ಡಿಸೆಂಬರ್ 2023, 14:43 IST
Last Updated 10 ಡಿಸೆಂಬರ್ 2023, 14:43 IST
   

ನವದೆಹಲಿ/ಭುವನೇಶ್ವರ: ಒಡಿಶಾ ಮೂಲದ ಡಿಸ್ಟಿಲರಿ ಕಂಪನಿಗೆ ಸೇರಿದ ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸುತ್ತಿರುವ ದಾಳಿಯಲ್ಲಿ ಸಿಕ್ಕ ಹಣ ₹300 ಕೋಟಿ ದಾಟಿದ್ದು, ದೇಶದಲ್ಲಿ ಯಾವುದೇ ತನಿಖಾ ಸಂಸ್ಥೆ ಒಂದೇ ದಾಳಿಯಲ್ಲಿ ವಶಪಡಿಸಿಕೊಂಡ ದೊಡ್ಡ ಮೊತ್ತದ ನಗದು ಇದಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಡಿಸೆಂಬರ್ 6ರಿಂದ ಬೌದ್‌ ಡಿಸ್ಟಿಲರಿ ಪ್ರೈವೇಟ್ ಲಿಮಿಟೇಡ್ ಮತ್ತು ಅದರ ಪ್ರವರ್ತಕರು, ಇತರರ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಆರಂಭಿಸಿದ್ದರು. ತೆರಿಗೆ ವಂಚನೆ ಮತ್ತು ಅಕ್ರಮ ವ್ಯವಹಾರದ ಆರೋಪದ ಮೇಲೆ 5 ದಿನಗಳಿಂದ ಮ್ಯಾರಥಾನ್ ದಾಳಿ ನಡೆಯುತ್ತಿದೆ.

ಈಗಾಗಲೇ ₹300 ಕೋಟಿಗೂ ಅಧಿಕ ಹಣ ಎಣಿಕೆ ಮಾಡಲಾಗಿದ್ದು, ಎಣಿಕೆ ಮುಂದುವರಿದಿದೆ ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.

ADVERTISEMENT

ವಶಪಡಿಸಿಕೊಂಡಿರುವ ನಗದು ಡಿಸ್ಟಿಲರಿ ಸಂಸ್ಥೆ, ವಿತರಕರು ಮತ್ತು ಇತರರು ದೇಶದಲ್ಲಿ ಕ್ಯಾಶ್ ಮೂಲದ ನಡೆಸಿದ ವ್ಯಾಪಾರದಿಂದ ಗಳಿಸಿದ ಲೆಕ್ಕರಹಿತ ಹಣ ಎಂದು ಆದಾಯ ಇಲಾಖೆ ಅಭಿಪ್ರಾಯಪಟ್ಟಿದೆ.

ಇದು ಒಂದೇ ಸಮೂಹ ಮತ್ತು ಅದಕ್ಕೆ ಸಂಬಂಧಿಸಿದ ಘಟಕಗಳ ವಿರುದ್ಧದ ಕ್ರಮದ ಭಾಗವಾಗಿ ದೇಶದಲ್ಲಿ ತನಿಖಾ ಏಜೆನ್ಸಿಯೊಂದು ವಶಪಡಿಸಿಕೊಂಡ ಅತಿ ಹೆಚ್ಚಿನ ಪ್ರಮಾಣದ ನಗದಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಹಿಂದೆ 2019ರಲ್ಲಿ ಜಿಎಸ್‌ಟಿ ಗುಪ್ತಚರ ಸಿಬ್ಬಂದಿ ಕಾನ್ಪುರ ಮೂಲದ ಉದ್ಯಮಿಯ ಮೇಲೆ ದಾಳಿ ನಡೆಸಿ ₹257 ಕೋಟಿ ಹಣವನ್ನು ವಶಪಡಿಸಿಕೊಂಡಿದ್ದರು. ಜುಲೈ 2018ರಲ್ಲಿ ತಮಿಳುನಾಡಿನಲ್ಲಿ ರಸ್ತೆ ನಿರ್ಮಾಣ ಸಂಸ್ಥೆಯ ವಿರುದ್ಧ ನಡೆದ ದಾಳಿಯಲ್ಲಿ ₹163 ಕೋಟಿ ವಶಪಡಿಸಿಕೊಳ್ಳಲಾಗಿತ್ತು.

ಜಾರ್ಖಂಡ್‌ನ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಧೀರಜ್ ಪ್ರಸಾದ್ ಸಾಹು ಅವರ ರಾಂಚಿಯ ಸ್ಥಳಗಳು ಮತ್ತು ಇತರ ಸ್ಥಳಗಳಲ್ಲಿಯೂ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ.

ಸಾಹು ಮನೆಯಿಂದ ಎಷ್ಟು ಪ್ರಮಾಣದ ನಗದು ಮತ್ತು ಇತರ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.