ADVERTISEMENT

ವಿದ್ಯಾರ್ಥಿಗಳಿಗೆ 'ಜಾತಿ ಬ್ಯಾಂಡ್' ಬಳಕೆ ಸಮರ್ಥಿಸಿದ ತಮಿಳುನಾಡು ಶಿಕ್ಷಣ ಸಚಿವ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2019, 14:54 IST
Last Updated 16 ಆಗಸ್ಟ್ 2019, 14:54 IST
   

ಚೆನ್ನೈ: ಇಲ್ಲಿನ ಕೆಲವೊಂದು ಶಾಲೆಗಳಲ್ಲಿ ವಿದ್ಯಾರ್ಥಿಗಳ ಜಾತಿ ಆಧರಿಸಿ ಅವರ ಕೈಗೆ ಜಾತಿ ಬ್ಯಾಂಡ್ ಕಟ್ಟಲಾಗುತ್ತಿದೆ.

ವಿದ್ಯಾರ್ಥಿಗಳ ಜಾತಿಯನ್ನು ಸುಲಭವಾಗಿ ಗುರುತಿಸುವುದಕ್ಕಾಗಿ ವಿವಿಧ ಬಣ್ಣದ ಬ್ಯಾಂಡ್‌ಗಳನ್ನು ವಿದ್ಯಾರ್ಥಿಗಳ ಮೊಣಕೈಗೆ ಕಟ್ಟುವ ನಿಯಮವೊಂದು ತಮಿಳುನಾಡಿನ ಶಾಲೆಗಳಲ್ಲಿದೆ.

ವಿದ್ಯಾರ್ಥಿಗಳ ನಡುವೆ ಈ ರೀತಿ ತಾರತಮ್ಯ ತೋರುವ ಶಾಲೆಗಳನ್ನು ಪತ್ತೆ ಹಚ್ಚುವಂತೆ ಶಾಲಾ ಶಿಕ್ಷಣ ನಿರ್ದೇಶಕರು ಅಧಿಕಾರಿಗಳಿಗೆ ಆದೇಶ ನೀಡಿದ್ದರು.

ADVERTISEMENT

ತಮಿಳುನಾಡಿನ ಕೆಲವೊಂದು ಶಾಲೆಗಳಲ್ಲಿ ವಿದ್ಯಾರ್ಥಿಗಳು ಬಣ್ಣ ಬಣ್ಣದ ಪಟ್ಟಿಗಳನ್ನು ಧರಿಸಿಕೊಂಡು ಬರುವಂತೆ ಆದೇಶಿಸಲಾಗಿದೆ. ವಿದ್ಯಾರ್ಥಿಗಳು ಮೇಲು ಜಾತಿಗೆ ಸೇರಿದವರೋ, ಕೆಳ ಜಾತಿಯವರೋ ಎಂದು ಗುರುತಿಸುವುದಕ್ಕಾಗಿ ಕೆಂಪು, ಹಳದಿ, ಹಸಿರು ಮತ್ತು ಕೇಸರಿ ಬಣ್ಣದ ಪಟ್ಟಿಯನ್ನುಮೊಣಕೈಗೆ ಧರಿಸುವಂತೆಸೂಚಿಸಲಾಗಿದೆ. ಈ ರೀತಿ ತಾರತಮ್ಯ ಮಾಡುವ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ನಿರ್ದೇಶಕ ಎಸ್. ಕಣ್ಣಪ್ಪನ್ ಸುತ್ತೋಲೆ ಹೊರಡಿಸಿದ್ದರು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಆಗಸ್ಟ್ 13ರಂದು ವರದಿ ಮಾಡಿದೆ.

ಅದೇ ವೇಳೆ ರಿಂಗ್ ಮತ್ತ ತಿಲಕವನ್ನೂ ಜಾತಿಯ ಗುರುತಾಗಿ ಪರಿಗಣಿಸಲಾಗುತ್ತದೆ. ಸ್ಫೋರ್ಟ್ಸ್ ಟೀಂ ಆಯ್ಕೆ, ಮಧ್ಯಾಹ್ನದ ಭೋಜನ ವೇಳೆ ಈ ಗುರುತುಗಳನ್ನಾಧರಿಸಿ ಮಕ್ಕಳಲ್ಲಿ ತಾರತಮ್ಯ ತೋರಲಾಗುತ್ತದೆ.

ಈ ನಿಯಮನ್ನು ವಿವಿಧ ಜಾತಿಯ ಪ್ರಭಾವಿ ನಾಯಕರು ಮತ್ತು ಶಿಕ್ಷಕರು ಮಕ್ಕಳ ಮೇಲೆ ಹೇರಿದ್ದಾರೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

ಆದರೆ ಜಾತಿ ಗುರುತಿಸುವ ಬಣ್ಣದ ಪಟ್ಟಿಯನ್ನು ವಿದ್ಯಾರ್ಥಿಗಳು ಧರಿಸುವ ಪರಿಪಾಠವನ್ನು ತಮಿಳುನಾಡು ಶಿಕ್ಷಣ ಸಚಿವ ಕೆ. ಎ. ಸಂಗೊಟ್ಟಿಯನ್ ಸಮರ್ಥಿಸಿಕೊಂಡಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಶಾಲೆಯಲ್ಲಿ ಈ ರೀತಿ ಜಾತಿ ಪಟ್ಟಿ ಬಳಸುವುದನ್ನು ನಿಲ್ಲಿಸಬೇಕು ಎಂದು ಶಿಕ್ಷಣ ಇಲಾಖೆ ಹೊರಡಿಸಿದ ಸುತ್ತೋಲೆಯನ್ನು ತಿರಸ್ಕರಿಸಿದ ಸಚಿವರು, ಜಾತಿ ಪಟ್ಟಿ ಧರಿಸುವ ಪರಿಪಾಠ ಹಾಗೇಯೇ ಮುಂದುವರಿಯಲಿದೆ ಎಂದು ಹೇಳಿರುವುದಾಗಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯಲ್ಲಿ ಉಲ್ಲೇಖಿಸಿದೆ.

ತಮಿಳುನಾಡಿನ ಉತ್ತರ ಭಾಗದ ಜಿಲ್ಲೆಗಳಲ್ಲಿ ಹಲವು ವರ್ಷದಿಂದ ಈ ರೀತಿಯ ಪರಿಪಾಠವಿದೆ.

ಕಳೆದ ವರ್ಷ ಕೆಲವು ದೈಹಿಕ ಶಿಕ್ಷಣ ತರಬೇತುದಾರರು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸುವಾಗ ಈ ರೀತಿಯ ತಾರತಮ್ಯ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.