ಜೈಪುರ: ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ಜಾತಿ ಗಣತಿ ನಡೆಸಲಾಗುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಇಲ್ಲಿನ ಧೋಲ್‌ಪುರದಲ್ಲಿ ಚುನಾವಣೆ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಕೇಂದ್ರ ಸರ್ಕಾರ ಪರಿಚಯಿಸಿರುವ ಅಗ್ನಿಪಥ್ ಯೋಜನೆಯನ್ನು ಟೀಕಿಸಿದರು. ಇದು ದೇಶವನ್ನು ರಕ್ಷಿಸಲು ಬಯಸಿರುವ ಲಕ್ಷಾಂತರ ಯುವಕರ ಕನಸುಗಳನ್ನು ಛಿದ್ರಗೊಳಿಸಿದೆ ಎಂದರು.
ರಾಜಸ್ಥಾನದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ, ಕಾಂಗ್ರೆಸ್ ಮೊದಲು ಜಾತಿ ಗಣತಿ ಮಾಡಲಿದೆ. ಕೇಂದ್ರದಲ್ಲಿ ನಾವು ಅಧಿಕಾರಕ್ಕೆ ಬಂದರೆ ರಾಷ್ಟ್ರಮಟ್ಟದಲ್ಲೂ ಜಾತಿ ಗಣತಿ ಮಾಡಲಾಗುವುದು ಎಂದು ರಾಹುಲ್ ಗಾಂಧಿ ಹೇಳಿದರು.
ದೇಶದ ದಲಿತರು ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ಜನರು ತಮ್ಮ ಸಂಖ್ಯೆಯನ್ನು ತಿಳಿದುಕೊಳ್ಳಲು ಜಾತಿ ಗಣತಿ ಅಗತ್ಯವಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ತಮ್ಮನ್ನು ಒಬಿಸಿ ಎಂದು ಕರೆದುಕೊಳ್ಳುತ್ತಿದ್ದರು, ಆದರೆ ನಾನು ಜಾತಿ ಗಣತಿಗೆ ಒತ್ತಾಯಿಸಿದ ತಕ್ಷಣ, ಅವರು ದೇಶದಲ್ಲಿ ಒಂದೇ ಜಾತಿ ಇದೆ ಎಂದು ಹೇಳಲು ಪ್ರಾರಂಭಿಸಿದ್ದಾರೆ ಎಂದು ಪ್ರಧಾನಿ ಮೋದಿ ಅವರನ್ನು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.