ADVERTISEMENT

ರೈಲಿನಲ್ಲಿ ಚೆನ್ನೈಗೆ ನಿತ್ಯ 1 ಕೋಟಿ ಲೀಟರ್‌ ಕಾವೇರಿ ನೀರು 

ಜಲಕ್ಷಾಮ 

​ಪ್ರಜಾವಾಣಿ ವಾರ್ತೆ
Published 12 ಜುಲೈ 2019, 13:55 IST
Last Updated 12 ಜುಲೈ 2019, 13:55 IST
   

ಚೆನ್ನೈ: ವೆಲ್ಲೂರು ಜಿಲ್ಲೆಯ ಜೋಲಾರ್‌ಪೇಟೆಯಿಂದ 25 ಲಕ್ಷ ಲೀಟರ್‌ ಕಾವೇರಿ ನೀರು ಹೊತ್ತ ಮೊದಲ ರೈಲು ಶುಕ್ರವಾರ ಮಧ್ಯಾಹ್ನ ವಿಲ್ಲಿವಾಕ್ಕಂ ರೈಲ್ವೆ ನಿಲ್ದಾಣ ತಲುಪಿದೆ.

ವಿಶೇಷವಾಗಿ ರೂಪಿಸಲಾಗಿರುವ ವ್ಯಾಗನ್‌(ನೀರು ಸಂಗ್ರಹಿಸಿಕೊಳ್ಳುವ ರೈಲು) ಮೂಲಕ ತರಲಾಗುವ ಕಾವೇರಿ ನೀರು, ಚೆನ್ನೈ ನಗರದ ಜನರ ನೀರಿನ ದಾಹ ತಣಿಸಲಿದೆ. ವ್ಯಾಗನ್‌ಗಳನ್ನು ಒಳಗೊಂಡ ಎರಡು ರೈಲು ಗಾಡಿಗಳು ನಿತ್ಯ ನಾಲ್ಕು ಬಾರಿ ನೀರು ತರಲಿವೆ. ದಿನಕ್ಕೆ 1 ಕೋಟಿ ಲೀಟರ್‌ನಂತೆ ಆರು ತಿಂಗಳ ವರೆಗೂ ಜೀವ ಜಲದ ಪೂರೈಕೆ ನಡೆಯಲಿದೆ.

ಪೂಜೆಯ ಬಳಿಕ ಜೋಲಾರ್‌ಪೇಟೆಯಿಂದ ’ವಿಶೇಷ ನೀರಿನ ರೈಲು’ ಬೆಳಿಗ್ಗೆ 7:15ಕ್ಕೆ ಪ್ರಯಾಣ ಆರಂಭಿಸಿತು. ಸುಮಾರು 215 ಕಿ.ಮೀ. ದೂರ ಸಂಚಾರ ಮಾಡಿ ಮಧ್ಯಾಹ್ನ 12ರ ವೇಳೆಗೆ ವಿಲ್ಲಿವಾಕ್ಕಂ ರೈಲ್ವೆ ನಿಲ್ದಾಣ ತಲುಪಿತು. ತಮಿಳುನಾಡಿನ ನಾಲ್ವರು ಸಚಿವರ ಸಮ್ಮುಖದಲ್ಲಿ ವಿಲ್ಲಿವಾಕ್ಕಂನಿಂದ ಕಿಲ್ಪೌಕ್‌ ಪಂಪಿಂಗ್‌ ಸ್ಟೇಷನ್‌ಗೆ ನೀರು ಪಂಪ್‌ ಮಾಡುವ ಕಾರ್ಯ ಮೂರು ಗಂಟೆ ತಡವಾಗಿ ಆರಂಭವಾಯಿತು.

ನಗರದಲ್ಲಿ ಎದುರಾಗಿರುವ ನೀರಿನ ತೀವ್ರ ಕ್ಷಾಮ ಎದುರಿಸಲು ನಿತ್ಯ 1 ಕೋಟಿ ಲೀಟರ್‌ ನೀರು ಪೂರೈಸುವುದು ಸೇರಿದಂತೆ ಹಲವು ಕ್ರಮಗಳನ್ನು ತಮಿಳುನಾಡು ಸರ್ಕಾರ ಜೂನ್‌ 21ರಂದು ಘೋಷಿಸಿತ್ತು. ಇದಕ್ಕಾಗಿ ಒಟ್ಟು ₹ 68 ಕೋಟಿ ಅನ್ನು ಕಾದಿರಿಸಿತ್ತು.

ತಲಾ 50,000 ಲೀಟರ್‌ ಸಾಮರ್ಥ್ಯದ, 50 ಟ್ಯಾಂಕ್‌ ವ್ಯಾಗನ್‌ಗಳ ಮೂಲಕ ರೈಲಿನಲ್ಲಿ ನೀರು ಸಾಗಿಸಲಾಗುತ್ತದೆ. ಹೀಗೆ ಸಾಗಿಸಲಾದ ನೀರನ್ನು ವ್ಯಾಗನ್‌ಗಳಿಂದ ಶುದ್ಧೀಕರಣ ಘಟಕಕ್ಕೆ ಹರಿಸಲು ಸುಮಾರು 100 ಇನ್‌ಲೆಟ್‌ ಪೈಪ್‌ಗಳನ್ನು ಅಳವಡಿಸಲಾಗಿದೆ ಎಂದು ಚೆನ್ನೈ ಮಹಾನಗರ ನೀರು ಸರಬರಾಜು ಮಂಡಳಿ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.