ADVERTISEMENT

₹6,000 ಕೋಟಿ ವಿದೇಶಿ ವಿನಿಮಯ ಪಾವತಿ ಹಗರಣ: ಸಿಬಿಐನಿಂದ ಆರು ಮಂದಿ ಬಂಧನ

ಬ್ಯಾಂಕ್‌ ಆಫ್‌ ಬರೋಡಾ

ಪಿಟಿಐ
Published 27 ಅಕ್ಟೋಬರ್ 2021, 15:39 IST
Last Updated 27 ಅಕ್ಟೋಬರ್ 2021, 15:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಬ್ಯಾಂಕ್‌ ಆಫ್‌ ಬರೋಡಾದಲ್ಲಿ ₹ 6 ಸಾವಿರ ಕೋಟಿವಿದೇಶಿ ವಿನಿಮಯ ಪಾವತಿ ಹಗರಣಕ್ಕೆ ಸಂಬಂಧಿಸಿ ಕೇಂದ್ರ ತನಿಖಾ ದಳ (ಸಿಬಿಐ) ಬುಧವಾರ ಆರು ಜನರನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2015ರಲ್ಲಿ ಹಗರಣ ಪತ್ತೆಯಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ 14 ಸ್ಥಳಗಳಲ್ಲಿ ಶೋಧ ನಡೆಸಿದೆ ಎಂದೂ ಅವರು ಹೇಳಿದರು.

ಪ್ರಕರಣದ ಕುರಿತು ಬ್ಯಾಂಕ್‌ ಆಫ್‌ ಬರೋಡಾದ ಆಗಿನ ಎಜಿಎಂ ಮತ್ತು ವಿದೇಶಿ ವಿನಿಮಯ ಅಧಿಕಾರಿ ವಿರುದ್ಧ ಸಿಬಿಐ 2015ರ ಡಿಸೆಂಬರ್‌ 12 ರಂದು ವಿಶೇಷ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿತ್ತು ಎಂದು ಸಿಬಿಐ ವಕ್ತಾರ ಆರ್‌ಸಿ ಜೋಶಿ ಹೇಳಿದರು.

ADVERTISEMENT

ಪ್ರಕರಣದ ತನಿಖೆಯ ಭಾಗವಾಗಿ ತನುಜ್‌ ಗುಲಾಟೆ, ಇಶ್‌ ಭೂತಾನಿ, ಉಜ್ವಲ್‌ ಸೂರಿ, ಹುನ್ನೆ ಗೋಯಲ್‌, ಸಾಹಿಲ್‌ ವಾಧ್ವಾ ಮತ್ತು ರಾಕೇಶ್‌ ಕುಮಾರ್‌ ಅವರನ್ನು ಸಿಬಿಐ ಬುಧವಾರ ಬಂಧಿಸಿದೆ ಎಂದು ಅಧಿಕಾರಿಗಳು ಹೇಳಿದರು.

2015ರಲ್ಲಿ ಬ್ಯಾಂಕ್‌ ಆಫ್‌ ಬರೋಡಾದ ಅಶೋಕ್‌ ವಿಹಾರ್‌ ಶಾಖೆಯಿಂದ 59 ಚಾಲ್ತಿ ಖಾತೆದಾರರು ಆಗ್ನೇಯ ಏಷ್ಯಾ ದೇಶಗಳಿಗೆ ₹ 6 ಸಾವಿರ ಕೋಟಿಗೂ ಹೆಚ್ಚು ಹಣ ರವಾನೆ ಮಾಡಿದ್ದಾರೆ ಎಂದು ಆರೋಪಿಸಿ ಸಿಬಿಐ ಬ್ಯಾಂಕ್‌ ಮತ್ತು ಇತರರ ವಿರುದ್ಧ ದೂರು ದಾಖಲಿಸಿತ್ತು ಎಂದು ಅವರು ಹೇಳಿದರು.

‘ಎಲ್ಲಾ ಹಣವನ್ನು ಹಾಂಕಾಂಗ್‌ಗೆ ರವಾನಿಸಲಾಗಿದೆ. ಹಣವನ್ನು ಆಮದು ಮಾಡಿಕೊಳ್ಳಲು ಮುಂಚಿತವಾಗಿ ಹೀಗೆ ಮಾಡಲಾಗಿದೆ. ಹೆಚ್ಚಿನ ಸಂದರ್ಭಗಳಲ್ಲಿ ಫಲಾನುಭವಿಯು ಒಬ್ಬರೇ ಆಗಿದ್ದರು’ ಎಂದು ಎಫ್‌ಐಆರ್‌ ದಾಖಲಿಸಿದ ನಂತರ ಅಧಿಕಾರಿಯೊಬ್ಬರು ಹೇಳಿದ್ದರು.

59 ಆರೋಪಿಗಳಲ್ಲಿ ಹೆಚ್ಚಿನವರನ್ನು ಸಂಸ್ಥೆ ಗುರುತಿಸಿದೆ ಎಂದು ಮೂಲಗಳು ಹೇಳಿವೆ.

‘ಹೆಚ್ಚಿನ ಕಂಪನಿ, ಸಂಸ್ಥೆಗಳ ವಿಳಾಸಗಳು ತಪ್ಪಾಗಿದ್ದು, ಬಹುತೇಕ ಅಸ್ತಿತ್ವದಲ್ಲಿಲ್ಲ ಎಂದು ತಿಳಿದು ಬಂದಿದೆ. ಇದರಲ್ಲಿ ಭಾಗಿಯಾಗಿರುವ ಹೆಚ್ಚಿನ ಆರೋಪಿಗಳನ್ನು ಗುರುತಿಸಲಾಗಿದ್ದು ಅವರ ವಿಚಾರಣೆ ನಡೆಯುತ್ತಿದೆ’ ಎಂದು ಅಧಿಕಾರಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.