ADVERTISEMENT

ಪಿಎನ್‌ಬಿ ಉಪವ್ಯವಸ್ಥಾಪಕರಾಗಿದ್ದ ಗೋಕುಲ್‌ನಾಥ್‌ ಶೆಟ್ಟಿ ವಿರುದ್ಧ ಸಿಬಿಐ ಪ್ರಕರಣ

ಲಂಚ ಪ್ರಕರಣ

ಪಿಟಿಐ
Published 20 ಅಕ್ಟೋಬರ್ 2020, 11:58 IST
Last Updated 20 ಅಕ್ಟೋಬರ್ 2020, 11:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ) ₹13,000 ಸಾವಿರ ಕೋಟಿ ವಂಚನೆ ಹಗರಣದ ಪ್ರಮುಖ ಆರೋಪಿ, ಬ್ಯಾಂಕ್‌ನ ನಿವೃತ್ತ ಉಪ ವ್ಯವಸ್ಥಾಪಕ ಗೋಕುಲ್‌ನಾಥ್‌ ಶೆಟ್ಟಿ ವಿರುದ್ಧ, ‘ರಿಶಿಕಾ ಫೈನ್ಯಾನ್ಸಿಯಲ್ಸ್‌’ನಿಂದ ₹1.08 ಕೋಟಿ ಲಂಚ ಪಡೆದಿರುವುದಕ್ಕೆ ಸಂಬಂಧಿಸಿದಂತೆ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.

ರಿಶಿಕಾ ಫೈನ್ಯಾನ್ಸಿಯಲ್ಸ್‌ ಸಂಸ್ಥೆಯು ಗೀತಾಂಜಲಿ ಜೆಮ್ಸ್‌ಗೆ ಬ್ಯಾಂಕ್‌ ಖಾತರಿಯನ್ನು ವ್ಯವಸ್ಥೆ ಮಾಡಿತ್ತು. ರಿಶಿಕಾ ಫೈನ್ಯಾನ್ಸಿಯಲ್ಸ್‌ ಸಂಸ್ಥೆಯ ಮಾಲೀಕ ದೇವಜ್ಯೋತಿ ದತ್ತಾ ಅವರು, ವಿದೇಶಿ ಬ್ಯಾಂಕ್‌ಗಳಿಂದ ‘ಲೆಟರ್ಸ್‌ ಆಫ್‌ ಅಂಡರ್‌ಟೇಕಿಂಗ್‌(ಎಲ್‌ಒಯು)’ ವ್ಯವಸ್ಥೆಯ ಮಾಡುತ್ತಿದ್ದರು.

‘ದತ್ತಾ ಅವರಿಂದ ಒಪ್ಪಿಗೆ ಬಳಿಕ ‘ಸ್ವಿಫ್ಟ್‌’(ಇಂಟರ್‌ನ್ಯಾಷನಲ್‌ ಬ್ಯಾಂಕಿಂಗ್‌ ಮೆಸೇಜಿಂಗ್‌ ಸರ್ವೀಸ್‌) ಮುಖಾಂತರ ಈ ಎಲ್‌ಒಯುಗಳನ್ನು ಶೆಟ್ಟಿ ವಿತರಿಸುತ್ತಿದ್ದರು. ವಂಚನೆ ಹಗರಣದ ಪ್ರಮುಖ ಆರೋಪಿ ಮೆಹುಲ್‌ ಚೋಕ್ಸಿಯ ಗೀತಾಂಜಲಿ ಜೆಮ್ಸ್‌ ಪರವಾಗಿ ದತ್ತಾ ಕೆಲಸ ಮಾಡುತ್ತಿದ್ದರು. ಎಲ್‌ಒಯುಎಸ್‌ ವಿತರಣೆಯಿಂದ ಬರುತ್ತಿದ್ದ ದಳ್ಳಾಳಿ ಹಣ ದತ್ತಾ ಖಾತೆಗೆ ಸೇರುತ್ತಿತ್ತು. ಇದರಿಂದ ₹1.08 ಕೋಟಿ ಹಣ 2014ರಿಂದ 2017ರವರೆಗೆ ಶೆಟ್ಟಿ ಅವರಿಗೆ ನೀಡಲಾಗಿತ್ತು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಅರ್ಜಿದಾರರಿಗೆ ಸಾಲ ಮಂಜೂರು ಮಾಡುವ ಸಂದರ್ಭದಲ್ಲಿ, ವಿದೇಶಗಳಲ್ಲಿ ಶಾಖೆ ಹೊಂದಿರುವ ಭಾರತೀಯ ಬ್ಯಾಂಕ್‌ಗಳಿಗೆ, ಅರ್ಜಿ ಸಲ್ಲಿಕೆಯಾದ ಬ್ಯಾಂಕ್‌ ‘ಎಲ್‌ಒಯು’ ಮುಖಾಂತರ ಖಾತರಿ ನೀಡುತ್ತವೆ. ಒಂದು ವೇಳೆ ಅರ್ಜಿದಾರರು ಸಾಲ ಮರುಪಾವತಿಸಲು ವಿಫಲವಾದಲ್ಲಿ ಎಲ್‌ಒಯು ನೀಡಿದ ಬ್ಯಾಂಕ್‌, ಬಡ್ಡಿ ಸಹಿತ ಸಾಲ ಮರುಪಾವತಿ ನೀಡಬೇಕಾಗುತ್ತದೆ. ಪ್ರಕರಣದ ಆರೋಪಿಗಳಾದ ನೀರವ್‌ ಮೋದಿ ಹಾಗೂ ಚೋಕ್ಸಿಯ ಕಂಪನಿಗಳು ಎಲ್‌ಒಯು ಬಳಸಿ ವಿದೇಶಗಳಲ್ಲಿ ಇರುವ ಬ್ಯಾಂಕ್‌ಗಳಿಂದ ಸಾಲ ಪಡೆದಿದ್ದರು. ಈ ಸಾಲವನ್ನು ಮರುಪಾವತಿಸದೇ ಇದ್ದ ಕಾರಣ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ಸಾಲ ಮರುಪಾವತಿಸುವ ಹೊಣೆ ಬಿದ್ದಿತ್ತು.

‘ಗೋಕುಲ್‌ನಾಥ್‌ ಶೆಟ್ಟಿ, ಪಿಎನ್‌ಬಿ ನಿಯಮಗಳನ್ನು ಮೀರಿ ಎಲ್‌ಒಯುಗಳನ್ನು ಅಕ್ರಮವಾಗಿ ನೀಡಿದ್ದರು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.