ADVERTISEMENT

ಅನಿಲ್‌ ದೇಶಮುಖ್‌ ವಿರುದ್ಧ ಸಿಬಿಐ ತನಿಖೆಗೆ ಬಾಂಬೆ ಹೈಕೋರ್ಟ್ ಅಸ್ತು

ಸಚಿನ್‌ ವಾಜೆ ಮರು ನೇಮಕ, ಪೊಲೀಸ್ ಸಿಬ್ಬಂದಿ ವರ್ಗಾವಣೆ, ಸ್ಥಳ ನಿಯುಕ್ತಿ ಪ್ರಕರಣ

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 16:16 IST
Last Updated 22 ಜುಲೈ 2021, 16:16 IST
ಅನಿಲ್ ದೇಶಮುಖ್
ಅನಿಲ್ ದೇಶಮುಖ್   

ಮುಂಬೈ: ಪೊಲೀಸ್ ಸಿಬ್ಬಂದಿ ವರ್ಗಾವಣೆ, ಸ್ಥಳ ನಿಯುಕ್ತಿ ಮತ್ತು ಅಮಾನತುಗೊಂಡಿದ್ದ ಪೊಲೀಸ್‌ ಅಧಿಕಾರಿ ಸಚಿನ್ ವಾಜೆ ಅವರನ್ನು ಇಲಾಖೆಗೆ ಮರು ನೇಮಕ ಮಾಡುವಲ್ಲಿ ಮಹಾರಾಷ್ಟ್ರದ ಮಾಜಿ ಸಚಿವ ಅನಿಲ್ ದೇಶಮುಖ್ ಹಾಗೂ ಅವರ ಆಪ್ತರು ಯಾವ ರೀತಿಯ ನಂಟು ಹೊಂದಿದ್ದರು ಎನ್ನುವ ಬಗ್ಗೆ ಸಿಬಿಐ ತನಿಖೆ ನಡೆಸಬಹುದು ಎಂದು ಬಾಂಬೆ ಹೈಕೋರ್ಟ್ ಗುರುವಾರ ಹೇಳಿದೆ.

ದೇಶಮುಖ್ ವಿರುದ್ಧ ಸಿಬಿಐ ದಾಖಲಿಸಿರುವ ಎಫ್ಐಆರ್‌ನಲ್ಲಿನ ಎರಡು ಪ್ಯಾರಾಗಳನ್ನು ಕೈಬಿಡುವಂತೆ ಕೋರಿ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಸ್.ಎಸ್. ಶಿಂಧೆ ಮತ್ತು ಎನ್.ಜೆ.ಜಾಮಮಾದರ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ವಜಾಗೊಳಿಸಿದೆ.

ಉದ್ಯಮಿ ಮುಖೇಶ್‌ ಅಂಬಾನಿ ನಿವಾಸದ ಬಳಿ ಸ್ಫೋಟಕಗಳಿದ್ದ ವಾಹನ ಪತ್ತೆ ಪ್ರಕರಣದಲ್ಲಿ ಬಂಧನಕ್ಕೊಳಗಾದ ನಂತರ ಪೊಲೀಸ್ ಸೇವೆಯಿಂದ ವಜಾಗೊಳಿಸಲ್ಪಟ್ಟಿದ್ದ ಸಚಿನ್ ವಾಜೆ ಎನ್‌ಸಿಪಿ ನಾಯಕ ದೇಶಮುಖ್ ವಿರುದ್ಧದ ಆರೋಪಗಳ ಬಗ್ಗೆ ಒಂದು ಪ್ಯಾರಾಗ್ರಾಫ್ ಹೇಳಿದರೆ, ಎರಡನೇ ಪ್ಯಾರಾಗ್ರಾಫ್ ಪೊಲೀಸ್ ಅಧಿಕಾರಿಗಳವರ್ಗಾವಣೆ ಮತ್ತು ಸ್ಥಳ ನಿಯುಕ್ತಿಗೆ ಸಂಬಂಧಿಸಿದ್ದಾಗಿದೆ.

ADVERTISEMENT

‘ನಮ್ಮ ದೃಷ್ಟಿಯಲ್ಲಿ ಸಿಬಿಐ, ಪೊಲೀಸ್ ಸಿಬ್ಬಂದಿಯ ವರ್ಗಾವಣೆ ಮತ್ತು ಸ್ಥಳ ನಿಯುಕ್ತಿ ಹಾಗೂ 15 ವರ್ಷಗಳ ನಂತರ ಸಚಿನ್ ವಾಜೆ ಅವರನ್ನು ಪೊಲೀಸ್ ಇಲಾಖೆಗೆ ಮರು ನೇಮಕ ಮಾಡಿಕೊಂಡಿರುವ ಬಗ್ಗೆ ಕಾನೂನುಬದ್ಧವಾಗಿ ತನ್ನ ವಿಚಾರಣೆ ಮುಂದುವರಿಸಬಹುದು. ಏಕೆಂದರೆ ಇದು ಮಾಜಿ ಗೃಹ ಸಚಿವ ದೇಶಮುಖ್ ಮತ್ತು ಅವರ ಆಪ್ತರಿಗೆ ಸಂಬಂಧಿಸಿದೆ’ ಎಂದು ನ್ಯಾಯಾಲಯ ಹೇಳಿದೆ.

ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಸಿಬಿಐ ಈ ವರ್ಷದ ಏಪ್ರಿಲ್ 21 ರಂದು ದೇಶಮುಖ್ ವಿರುದ್ಧ ಎಫ್ಐಆರ್ ದಾಖಲಿಸಿದೆ. ಏಪ್ರಿಲ್ 5 ರಂದು ಹೈಕೋರ್ಟ್‌ ನೀಡಿದ ಆದೇಶದ ಹಿನ್ನೆಲೆಯಲ್ಲಿ ಎನ್‌ಸಿಪಿ ಮುಖಂಡರ ವಿರುದ್ಧ ಸಿಬಿಐ ಪ್ರಾಥಮಿಕ ತನಿಖೆ ಆರಂಭಿಸಿತ್ತು. ಭ್ರಷ್ಟಾಚಾರ ಮತ್ತು ದುಷ್ಕೃತ್ಯದ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಹೈಕೋರ್ಟ್ ಸಿಬಿಐಗೆ ಸೂಚನೆ ನೀಡಿದ ನಂತರ ದೇಶಮುಖ್ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.