ನಾಪತ್ತೆ (ಪ್ರಾತಿನಿಧಿಕ ಚಿತ್ರ)
ನವದೆಹಲಿ: ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ವಿದ್ಯಾರ್ಥಿ ನಜೀಬ್ ಅಹಮದ್ ನಾಪತ್ತೆ ಪ್ರಕರಣವನ್ನು ಮುಕ್ತಾಯಗೊಳಿಸಲು ಸಿಬಿಐಗೆ ದೆಹಲಿ ನ್ಯಾಯಾಲಯವೊಂದು ಸೋಮವಾರ ಅನುಮತಿ ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಆಯಾಮದಲ್ಲೂ ತನಿಖೆ ನಡೆಸಿದರೂ ಯಾವುದೇ ಪ್ರಯೋಜನವಾಗದ ಕಾರಣ ಈ ನಿರ್ಧಾರ ಪ್ರಕಟಿಸುತ್ತಿರುವುದಾಗಿ ಹೆಚ್ಚುವರಿ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಜ್ಯೋತಿ ಮಹೇಶ್ವರಿ ಅವರು ಹೇಳಿದ್ದಾರೆ. ಜತೆಗೆ ಭವಿಷ್ಯದಲ್ಲಿ ಯಾವುದೇ ಸುಳಿವು ಸಿಕ್ಕರೂ ಪ್ರಕರಣವನ್ನು ಮತ್ತೆ ತೆರೆಯಲು ಸಿಬಿಐಗೆ ಅವಕಾಶ ನೀಡಿದ್ದಾರೆ.
2016ರ ಅಕ್ಟೋಬರ್ 15ರಂದು ನಜೀಬ್ ನಾಪತ್ತೆಯಾಗಿದ್ದು, ದೆಹಲಿ ಪೊಲೀಸರು ಪ್ರಕರಣದ ತನಿಖೆ ನಡೆಸಿದ್ದರು. ನಂತರ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಗಿತ್ತು. 2018ರಲ್ಲಿ ಸಿಬಿಐ, ಪ್ರಕರಣವನ್ನು ಮುಕ್ತಾಯಗೊಳಿಸಿತ್ತು. ಸಿಬಿಐ ಸರಿಯಾಗಿ ತನಿಖೆ ನಡೆಸಿಲ್ಲ ಎಂದು ನಜೀಬ್ ಅವರ ತಾಯಿ ಆರೋಪಿಸಿದ್ದರು.
ಸಮಗ್ರ ತನಿಖೆಯ ಬಳಿಕವೂ ಯಾವುದೇ ಸಾಕ್ಷ್ಯ ಸಿಗದ ಕಾರಣದಿಂದ ಈಗ ಮತ್ತೆ ಪ್ರಕರಣವನ್ನು ಮುಕ್ತಾಯಗೊಳಿಸಲು ನ್ಯಾಯಾಲಯ ಅನುಮತಿಸಿದೆ. ‘ಮಗನ ಪತ್ತೆಗಾಗಿ 2016ರಿಂದಲೂ ಹೋರಾಡುತ್ತಿರುವ ನಜೀಬ್‌ನ ತಾಯಿಯ ಸಂಕಷ್ಟ ಅರ್ಥವಾಗುತ್ತದೆ. ಆದರೆ, ಸಿಬಿಐ ನಡೆಸಿರುವ ತನಿಖೆಯನ್ನು ದೂಷಿಸಲೂ ಸಾಧ್ಯವಿಲ್ಲ‘ ಎಂದು ನ್ಯಾಯಾಲಯ ಹೇಳಿದೆ.
ವಿದ್ಯಾರ್ಥಿ ನಜೀಬ್‌ಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಕೆಲವು ಸದಸ್ಯರಿಗೂ ಜಟಾಪಟಿ ನಡೆದಿದ್ದ ಆರೋಪ ಕೇಳಿಬಂದಿತ್ತು. ಅದಾದ ಮರುದಿನವೇ ಅಂದರೆ 2016ರ ಅಕ್ಟೋಬರ್ 15ರಂದೇ ನಜೀಬ್, ಜೆಎನ್‌ಯುನ ಮಹಿ–ಮಾಂಡವಿ ಹಾಸ್ಟೆಲ್‌ನಿಂದ ನಾಪತ್ತೆಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.