ADVERTISEMENT

2021ರ ಜೆಇಇ (ಮೇನ್ಸ್‌) ಅಕ್ರಮ: ಬೆಂಗಳೂರು ಸೇರಿ ಹಲವೆಡೆ ಸಿಬಿಐ ಶೋಧ

ಪಿಟಿಐ
Published 5 ಮಾರ್ಚ್ 2023, 6:05 IST
Last Updated 5 ಮಾರ್ಚ್ 2023, 6:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ (ಪಿಟಿಐ): 2021ರಲ್ಲಿ ನಡೆದಿದ್ದ ಜೆಇಇ (ಮೇನ್ಸ್‌) ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಆರೋಪದ ಮೇರೆಗೆ ಸಿಬಿಐ ದೆಹಲಿ, ಎನ್‌ಸಿಆರ್‌, ಬೆಂಗಳೂರು ಸೇರಿದಂತೆ ವಿವಿಧ ನಗರಗಳ 19 ಸ್ಥಳಗಳಲ್ಲಿ ಶನಿವಾರ ಶೋಧ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪುಣೆ, ಜಮ್‌ಶೇಡ್‌ಪುರ, ಇಂದೋರ್‌ನ ವಿವಿಧೆಡೆಯೂ ಶೋಧ ನಡೆದಿದೆ. ಈ ವೇಳೆ 25 ಲ್ಯಾಪ್‌ಟಾಪ್‌ಗಳು, ಏಳು ಡೆಸ್ಕ್‌ಟಾಪ್‌ಗಳು, ಸುಮಾರು 30 ಪೋಸ್ಟ್‌ ಡೇಟೆಡ್‌ ಚೆಕ್‌ಗಳ ಜತೆಗೆ ಹಲವು ಮಹತ್ವದ ದಾಖಲೆಗಳು, ವಿವಿಧ ವಿದ್ಯಾರ್ಥಿಗಳ ತಾತ್ಕಾಲಿಕ ಪದವಿ ಪ್ರಮಾಣಪತ್ರಗಳು, ಅಂಕಪಟ್ಟಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಹೇಳಿದ್ದಾರೆ.

‘ತನಿಖೆ ಮುಂದುವರಿಸಿದ್ದು, ಹಲವರನ್ನು ವಿಚಾರಣೆಗೆ ಒಳಪಡಿಸಲಾಗಿದೆ’ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.

ADVERTISEMENT

ಪರೀಕ್ಷಾ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ 2021ರ ಸೆಪ್ಟೆಂಬರ್‌ನಲ್ಲಿ ‘ಅಫಿನಿಟಿ ಎಜುಕೇಷನ್‌ ಪ್ರೈವೇಟ್‌ ಲಿಮಿಟೆಡ್‌’ ಮತ್ತು ಅದರ ಮೂವರು ನಿರ್ದೇಶಕರಾದ ಸಿದ್ಧಾರ್ಥ ಕೃಷ್ಣ, ವಿಶ್ವಂಭರ್‌ ಮನಿ ತ್ರಿಪಾಠಿ ಮತ್ತು ಗೋವಿಂದ ವಾರ್ಷ್ಣೆ ಹಾಗೂ ಅವರ ಸಹಚರರ ವಿರುದ್ಧ ಪ್ರಕರಣ ದಾಖಲಿಸಿತ್ತು.

‘ಈ ಮೂವರು ನಿರ್ದೇಶಕರು ತಮ್ಮ ಸಹಚರರೊಂದಿಗೆ ಪಿತೂರಿ ಮಾಡಿ ಜೆಇಇ (ಮೇನ್ಸ್‌) ಆನ್‌ಲೈನ್‌ ಪರೀಕ್ಷೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಅರ್ಜಿದಾರರಿಗೆ ರಾಷ್ಟ್ರೀಯ ತಾಂತ್ರಿಕ ಸಂಸ್ಥೆಗಳಲ್ಲಿ (ಎನ್‌ಐಟಿ) ಪ್ರವೇಶ ಕೊಡಿಸುವುದಕ್ಕೆ ಪೂರಕವಾಗಿ ಪರೀಕ್ಷೆಯಲ್ಲಿ ಅಕ್ರಮ ಎಸಗಿದ್ದಾರೆ. ಈ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲು ಹರಿಯಾಣದ ಸೋನೆಪತ್‌ನಲ್ಲಿರುವ ಆಯ್ದ ಪರೀಕ್ಷಾ ಕೇಂದ್ರದಿಂದ ರಿಮೋಟ್‌ ಮೂಲಕ ಅಭ್ಯರ್ಥಿಗಳ ಪ್ರಶ್ನೆ ಪತ್ರಿಕೆ ಉತ್ತರಿಸಲು ನೆರವಾಗಿದ್ದಾರೆ’ ಎಂಬ ಆರೋಪ ಇದೆ ಎಂದು ಅವರು ಹೇಳಿದ್ದಾರೆ.

‘ಈ ಆರೋಪಿಗಳು ದೇಶದ ವಿವಿಧೆಡೆ ಅಭ್ಯರ್ಥಿಗಳ 10 ಮತ್ತು 12ನೇ ತರಗತಿಯ ಅಂಕಪಟ್ಟಿ, ಬಳಕೆದಾರರ ಐ.ಡಿ, ಪಾಸ್‌ವರ್ಡ್‌ ಮತ್ತು ಪೋಸ್ಟ್‌ ಡೇಟೆಡ್‌ ಚೆಕ್‌ಗಳನ್ನು ಪಡೆಯುತ್ತಿದ್ದರು. ಅಭ್ಯರ್ಥಿಗಳು ಪ್ರವೇಶ ಪಡೆದ ಬಳಿಕ, ಅವರಿಂದ ₹ 12 ಲಕ್ಷದಿಂದ ₹ 15 ಲಕ್ಷದವರೆಗೆ ಹಣ ಪಡೆಯುತ್ತಿದ್ದರು ಎಂಬ ಆರೋಪದವಿದೆ’ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.