ADVERTISEMENT

ಚಿಟ್‌ಫಂಡ್‌ ಹಗರಣ: ನಳಿನಿ ಚಿದಂಬರಂ ವಿರುದ್ಧ ಆರೋಪಪಟ್ಟಿ

ಪಿಟಿಐ
Published 11 ಜನವರಿ 2019, 20:08 IST
Last Updated 11 ಜನವರಿ 2019, 20:08 IST
Nalini Chidambaram
Nalini Chidambaram   

ನವದೆಹಲಿ: ಚಿಟ್‌ಫಂಡ್‌ ಹಗರಣದಲ್ಲಿ ಸಿಕ್ಕಿಬಿದ್ದಿರುವ ಶಾರದಾ ಕಂಪನಿಗಳ ಸಮೂಹದಿಂದ ₹1.4 ಕೋಟಿ ಹಣವನ್ನು ಪಡೆದಿದ್ದಾರೆ ಎಂಬ ಆರೋಪದ ಮೇಲೆ, ಕಾಂಗ್ರೆಸ್‌ನ ಹಿರಿಯ ಮುಖಂಡ ಪಿ.ಚಿದಂಬರಂ ಅವರ ಪತ್ನಿ ನಳಿನಿ ಚಿದಂಬರಂ ಅವರ ವಿರುದ್ಧ ಸಿಬಿಐ ಆರೋಪಪಟ್ಟಿ ದಾಖಲಿಸಿದೆ.

ಶಾರದಾ ಗ್ರೂಪ್‌ನ ಮಾಲೀಕ ಸುದೀಪ್ತ ಸೇನ್‌ ಮತ್ತು ‌ಇತರ ಆರೋಪಿಗಳ ಜತೆ ಸೇರಿ ನಳಿನಿ ಕ್ರಿಮಿನಲ್‌ ಸಂಚು ರೂಪಿಸಿದ್ದಾರೆ. ಶಾರದಾ ಸಮೂಹದ ಹಣವನ್ನು ದುರ್ಬಳಕೆ ಮಾಡಿಕೊಳ್ಳಲು ಮತ್ತು ಮೋಸ ಮಾಡಲು ಈ ಸಂಚು ರೂಪಿಸಲಾಗಿತ್ತು ಎಂದು ಸಿಬಿಐ ವಕ್ತಾರ ಅಭಿಷೇಕ್‌ ದಯಾಳ್‌ ತಿಳಿಸಿದ್ದಾರೆ.

ಕೇಂದ್ರದ ಮಾಜಿ ಸಚಿವ ಮಾತಂಗ್ ಸಿನ್ಹಾ ಅವರ ಮಾಜಿ ಪತ್ನಿ ಮನೋರಂಜನಾ ಸಿನ್ಹಾ ಅವರು ಸೇನ್‌ ಅವರನ್ನು ನಳಿನಿ ಅವರಿಗೆ ಪರಿಚಯ ಮಾಡಿಕೊಟ್ಟಿದ್ದರು. ಸೆಬಿ ಸೇರಿದಂತೆ ಹಲವು ಸಂಸ್ಥೆಗಳು ಸೇನ್‌ ವಿರುದ್ಧ ನಡೆಸುವ ತನಿಖೆಯನ್ನು ನಿರ್ವಹಿಸುವ ಉದ್ದೇಶ ಇದರ ಹಿಂದೆ ಇತ್ತು. ಇದಕ್ಕಾಗಿ ನಳಿನಿ 2010–12ರ ಅವಧಿಯಲ್ಲಿ ಸೇನ್‌ ಅವರ ಕಂಪನಿಯ ಮೂಲಕ ₹1.4 ಕೋಟಿ ಪಡೆದಿದ್ದಾರೆ ಎಂದು ದಯಾಳ್‌ ವಿವರಿಸಿದ್ದಾರೆ.

ADVERTISEMENT

ಆಕರ್ಷಕ ಬಡ್ಡಿ ನೀಡುವ ಭರವಸೆಯೊಂದಿಗೆ ಜನರಿಂದ ₹2,500 ಕೋಟಿ ಸಂಗ್ರಹಿಸಿದ್ದ ಶಾರದಾ ಸಮೂಹವು ನಂತರ ಹಣ ನೀಡದೇ ವಂಚಿಸಿತ್ತು. ಜನರಿಗೆ ಹಣ ನೀಡಲು ವಿಫಲರಾದ ಸೇನ್‌ 2013ರಲ್ಲಿ ಕಂಪನಿಯನ್ನು ಮುಚ್ಚಿದ್ದರು.

ಸುಪ್ರೀಂ ಕೋರ್ಟ್‌ 2014ರಲ್ಲಿ ಶಾರದಾ ಹಗರಣವನ್ನು ಸಿಬಿಐಗೆ ವಹಿಸಿದ ನಂತರ ಸಲ್ಲಿಸಲಾಗಿರುವ ಆರನೇ ಆರೋಪ ಪಟ್ಟಿ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.