ADVERTISEMENT

ಕಾಶ್ಮೀರ |ಪೊಲೀಸ್ ಕಾನ್‌ಸ್ಟೆಬಲ್‌ಗೆ ಚಿತ್ರಹಿಂಸೆ ಪ್ರಕರಣ: CBI ತನಿಖೆಗೆ SC ಆದೇಶ

ಪಿಟಿಐ
Published 21 ಜುಲೈ 2025, 10:26 IST
Last Updated 21 ಜುಲೈ 2025, 10:26 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿರುವ ಜಂಟಿ ವಿಚಾರಣಾ ಕೇಂದ್ರದಲ್ಲಿ (ಜೆಐಸಿ) ಪೊಲೀಸ್ ಕಾನ್‌ಸ್ಟೆಬಲ್‌ವೊಬ್ಬರಿಗೆ ಚಿತ್ರಹಿಂಸೆ ನೀಡಿದ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ ಸುಪ್ರೀಂ ಕೋರ್ಟ್‌ ಆದೇಶಿಸಿದೆ.

ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ನೇತೃತ್ವದ ಪೀಠವು, ‘ಪೊಲೀಸ್ ಕಾನ್‌ಸ್ಟೆಬಲ್‌ಗೆ ಚಿತ್ರಹಿಂಸೆ ನೀಡಿದ ಪ್ರಕರಣದಲ್ಲಿ ಭಾಗಿಯಾಗಿರುವ ಪೊಲೀಸ್ ಅಧಿಕಾರಿಗಳನ್ನು ಒಂದು ತಿಂಗಳೊಳಗೆ ಬಂಧಿಸಬೇಕು ಮತ್ತು ಮೂರು ತಿಂಗಳೊಳಗೆ ತನಿಖೆ ಪೂರ್ಣಗೊಳಿಸಬೇಕು’ ಎಂದು ಸಿಬಿಐಗೆ ತಾಕೀತು ಮಾಡಿದೆ.

ಮೇಲ್ಮನವಿದಾರ ಖುರ್ಷೀದ್ ಅಹ್ಮದ್ ಚೌಹಾಣ್ ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆಗೆ ಪರಿಹಾರವಾಗಿ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವು ₹50 ಲಕ್ಷ ಪರಿಹಾರ ಪಾವತಿಸುವಂತೆಯೂ ನ್ಯಾಯಪೀಠ ಆದೇಶಿಸಿದೆ.

ADVERTISEMENT

ಐಪಿಸಿ ಸೆಕ್ಷನ್ 309ರ ಅಡಿಯಲ್ಲಿ ತಮ್ಮ ವಿರುದ್ಧ ದಾಖಲಿಸಲಾದ ಎಫ್‌ಐಆರ್ ಅನ್ನು ರದ್ದುಗೊಳಿಸಲು ನಿರಾಕರಿಸಿದ ಹೈಕೋರ್ಟ್‌ನ ತೀರ್ಪು ಪ್ರಶ್ನಿಸಿ ಮೇಲ್ಮನವಿದಾರರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಐಪಿಸಿ ಸೆಕ್ಷನ್ 309 ರ ಅಡಿಯಲ್ಲಿ ತಮ್ಮ ವಿರುದ್ಧ ದಾಖಲಿಸಲಾದ ಎಫ್‌ಐಆರ್ ಅನ್ನು ರದ್ದುಗೊಳಿಸಲು ನಿರಾಕರಿಸಿದ ಹೈಕೋರ್ಟ್‌ನ ತೀರ್ಪಿನ ವಿರುದ್ಧ ಮೇಲ್ಮನವಿದಾರರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

‘2023ರ ಫೆಬ್ರುವರಿ 20ರಿಂದ 26ರವರೆಗೆ ನನ್ನನ್ನು ಜೆಐಸಿ ಕುಪ್ವಾರದಲ್ಲಿ ಅಕ್ರಮವಾಗಿ ಬಂಧಿಸಲಾಗಿತ್ತು. ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ನನಗೆ ಅಮಾನವೀಯ ಮತ್ತು ಅವಮಾನಕರ ರೀತಿಯಲ್ಲಿ ಚಿತ್ರಹಿಂಸೆ ನೀಡಿದ್ದರು. ದೌರ್ಜನ್ಯಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಮೇಲ್ಮನವಿದಾರರು ಮನವಿ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.