ADVERTISEMENT

ಮಾಜಿ ಸಚಿವ ದೇಶ್‌ಮುಖ್‌ ನಿವಾಸಗಳ ಮೇಲೆ ಸಿಬಿಐ ದಾಳಿ

ಪಿಟಿಐ
Published 11 ಅಕ್ಟೋಬರ್ 2021, 15:06 IST
Last Updated 11 ಅಕ್ಟೋಬರ್ 2021, 15:06 IST
ಅನಿಲ್ ದೇಶಮುಖ್
ಅನಿಲ್ ದೇಶಮುಖ್   

ನವದೆಹಲಿ: ತಮ್ಮ ವಿರುದ್ಧದ ಭ್ರಷ್ಟಾಚಾರ ಆರೋಪದ ಪ್ರಕರಣದ ಪ್ರಾಥಮಿಕ ತನಿಖೆಗೆ ಸಂಬಂಧಿಸಿದ ಗೋಪ್ಯ ದಾಖಲೆಗಳ ಸೋರಿಕೆ ಸಂಬಂಧ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರಿಗೆ ಸೇರಿದ ಹಲವು ಸ್ಥಳಗಳಲ್ಲಿ ಸಿಬಿಐ ಸೋಮವಾರ ಶೋಧ ಕಾರ್ಯ ನಡೆಸಿದೆ.

ಸಿಬಿಐ ಅಧಿಕಾರಿಗಳು ಸೋಮವಾರ ಬೆಳಿಗ್ಗೆ ನಾಗ್ಪುರ ಮತ್ತು ಮುಂಬೈನಲ್ಲಿರುವ ದೇಶಮುಖ್ ಅವರ ನಿವಾಸಗಳಿಗೆ ವಾರಂಟ್‌ ಸಮೇತ ಬಂದು ಶೋಧ ಕಾರ್ಯಾಚರಣೆ ನಡೆಸಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೇಶಮುಖ್ ವಿರುದ್ಧದ ಪ್ರಕರಣದ ಪ್ರಾಥಮಿಕ ವಿಚಾರಣೆಗೆ ಸಂಬಂಧಿಸಿದ ರಹಸ್ಯ ದಾಖಲೆಗಳನ್ನು ಸೋರಿಕೆ ಮಾಡಿದ ಆರೋಪದ ಮೇಲೆ ಸಿಬಿಐ ಅಧಿಕಾರಿಗಳು ಸೆಪ್ಟೆಂಬರ್ 2ರಂದು ದೇಶಮುಖ್ ಅವರ ವಕೀಲ ಆನಂದ್ ದಾಗಾ ಮತ್ತು ಸಿಬಿಐನ ಸಬ್ ಇನ್ಸ್‌ಪೆಕ್ಟರ್ ಅಭಿಷೇಕ್ ತಿವಾರಿ ಅವರನ್ನು ಬಂಧಿಸಿದ್ದರು.

ADVERTISEMENT

ದೇಶಮುಖ್ ವಿರುದ್ಧದ ಭ್ರಷ್ಟಾಚಾರದ ಆರೋಪಗಳ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಆಲಿಸುವಾಗ ಬಾಂಬೆ ಹೈಕೋರ್ಟ್‌ ನೀಡಿದ್ದ ಆದೇಶದ ಮೇರೆಗೆ ಸಿಬಿಐ ಪ್ರಾಥಮಿಕ ತನಿಖೆ ಆರಂಭಿಸಿತ್ತು.

ದೇಶಮುಖ್ ವಿರುದ್ಧದ ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿದ ವಿಚಾರಣೆ ಮತ್ತು ತನಿಖೆಯ ವಿವರಗಳನ್ನು ನೀಡುವ ವಕೀಲ ದಾಗಾ ಅವರು ಐಪೋನ್ 12 ಪ್ರೊ ಅನ್ನು ತಿವಾರಿಗೆ ಲಂಚವಾಗಿ ಕೊಡಿಸಿದ್ದರು. ಅಲ್ಲದೇ ತಿವಾರಿ ಅವರೊಂದಿಗೆ ದಾಗಾ ನಿರಂತರ ಸಂಪರ್ಕದಲ್ಲಿದ್ದು, ಈ ಪ್ರಕರಣದ ಮಾಹಿತಿ ಸೋರಿಕೆಗೆ ಲಂಚ ಪಡೆದಿದ್ದಾರೆ ಎಂದು ಎಫ್ಐಆರ್‌ನಲ್ಲಿ ಆರೋಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.