ADVERTISEMENT

ಪ್ರಣಯ್‌ ರಾಯ್‌, ರಾಧಿಕಾ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2019, 18:21 IST
Last Updated 21 ಆಗಸ್ಟ್ 2019, 18:21 IST

ನವದೆಹಲಿ: ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಎನ್‌ಡಿಟಿವಿ ಪ್ರವರ್ತಕರಾದ ಪ್ರಣಯ್‌ ರಾಯ್‌, ರಾಧಿಕಾ ರಾಯ್‌ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕ್ರಮಾದಿತ್ಯ ಚಂದ್ರ ವಿರುದ್ಧ ಸಿಬಿಐ ಎಫ್‌ಐಆರ್‌ ದಾಖಲಿಸಿದೆ.

ಸರ್ಕಾರಿ ಅಧಿಕಾರಿಗಳು ಅಕ್ರಮವಾಗಿ ಗಳಿಸಿದ್ದ ಹಣವನ್ನು ಎಫ್‌ಡಿಐ ಮೂಲಕ ಭಾರತಕ್ಕೆ ತರಲಾಗಿದೆ ಎಂಬ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಸಿಬಿಐ ಡಿಎಸ್‌ಪಿ ಲಲಿತ್‌ ಫುಲಾರ್‌ ಅವರು, ಈ ಕುರಿತು ಪ್ರಾಥಮಿಕ ತನಿಖೆ ನಡೆಸಿದ ನಂತರ ಆಗಸ್ಟ್‌ 19 ರಂದು ಎಫ್‌ಐಆರ್‌ ದಾಖಲಾಗಿದೆ.

ಪ್ರಣಯ್‌, ರಾಧಿಕಾ ಮತ್ತು ಚಂದ್ರ ವಿರುದ್ಧ ಕ್ರಿಮಿನಲ್‌ ಪಿತೂರಿ, ವಂಚನೆ ಆರೋಪಗಳನ್ನು ಎಫ್‌ಐಆರ್‌
ನಲ್ಲಿ ದಾಖಲಿಸಲಾಗಿದೆ. ಮತ್ತೊಬ್ಬ ಪ್ರವರ್ತಕ, ನಿವೃತ್ತ ಐಆರ್‌ಎಸ್‌ ಅಧಿಕಾರಿ ಕೆ.ವಿ.ಎಲ್‌. ನಾರಾಯಣ್‌ ರಾವ್‌ ಅವರನ್ನೂ ತನಿಖೆಗೊಳಪಡಿಸಲಾಗಿತ್ತು. ಆದರೆ, ಅವರು ಮೃತಪಟ್ಟಿರುವುದರಿಂದ ಎಫ್‌ಐಆರ್‌ನಲ್ಲಿ ರಾವ್‌ ಹೆಸರನ್ನು ಕೈಬಿಡಲಾಗಿದೆ.

ADVERTISEMENT

ಎನ್‌ಡಿಟಿವಿ ಸಂಸ್ಥೆಯು 2004 ಮೇ ತಿಂಗಳಿನಿಂದ 2010ರ ಮೇ ಅವಧಿಯಲ್ಲಿ 32 ಅಂಗ ಸಂಸ್ಥೆಗಳನ್ನು ಜಗತ್ತಿನಾದ್ಯಂತ ಆರಂಭಿಸಿದೆ. ತೆರಿಗೆ ವಿನಾಯಿತಿ ಇರುವ ನೆದರ್ಲೆಂಡ್ಸ್‌, ಬ್ರಿಟನ್‌, ದುಬೈ, ಮಲೇಷ್ಯಾ, ಮಾರಿಷಸ್‌ ನಂಥ ರಾಷ್ಟ್ರಗಳಲ್ಲಿಯೇ ಹೆಚ್ಚಿನ ಅಂಗ ಸಂಸ್ಥೆಗಳನ್ನು ಆರಂಭಿಸಿ, ಎಫ್‌ಡಿಐ ನಿಯಮಗಳನ್ನು ಉಲ್ಲಂಘಿಸಿ ಅಕ್ರಮ ಹಣ ಪಡೆಯ ಲಾಗಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಸಿಬಿಐ ಹೇಳಿದೆ.

ಆರೋಪ ಅಲ್ಲಗಳೆದ ಎನ್‌ಡಿಟಿವಿ

ಎಫ್‌ಡಿಐ ನಿಯಮಗಳನ್ನು ಉಲ್ಲಂಘಿಸಿರುವ ಆರೋಪವನ್ನು ಎನ್‌ಡಿಟಿವಿ ಸಂಸ್ಥೆ ಅಲ್ಲಗಳೆದಿದೆ.

‘ಭಾರತದ ನ್ಯಾಯಾಂಗದಲ್ಲಿ ಎನ್‌ಡಿಟಿವಿ ಸಂಸ್ಥೆ ಮತ್ತು ಅದರ ಪ್ರವರ್ತಕರು ಸಂಪೂರ್ಣ ವಿಶ್ವಾಸ ಹೊಂದಿದ್ದಾರೆ. ಪತ್ರಿಕೋದ್ಯಮ ಕುರಿತ ಬದ್ಧತೆಯನ್ನು ಸಂಸ್ಥೆ ಮುಂದುವರಿಸಲಿದೆ. ದುರುದ್ದೇಶಪೂರಿತ ಮತ್ತು ಕಲ್ಪಿತ ಆರೋಪಗಳ ಮೂಲಕ ಅಭಿವ್ಯಕ್ತಿ ಮತ್ತು ಪತ್ರಿಕಾ ಸ್ವಾತಂತ್ರ್ಯದ ಧ್ವನಿ ಅಡಗಿಸುವ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ’ ಎಂದು ಸಂಸ್ಥೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.