ADVERTISEMENT

ಆಕ್ಸ್‌ಫಾಮ್ ಇಂಡಿಯಾ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲು

ಶೆಮಿಜ್‌ ಜಾಯ್‌
Published 19 ಏಪ್ರಿಲ್ 2023, 17:23 IST
Last Updated 19 ಏಪ್ರಿಲ್ 2023, 17:23 IST
   

ನವದೆಹಲಿ: ಎನ್‌ಜಿಒಗಳಿಗೆ ಕಾನೂನುಬಾಹಿರವಾಗಿ ಹಣ ವರ್ಗಾವಣೆ ಮತ್ತು ವಿದೇಶಿ ಸರ್ಕಾರಗಳು ಹಾಗೂ ಸಂಸ್ಥೆಗಳನ್ನು ಬಳಸಿಕೊಂಡು ವಿದೇಶಿ ದೇಣಿಗೆ ಪರವಾನಗಿ ನವೀಕರಣಕ್ಕೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿದ ಆರೋಪ ಕುರಿತಂತೆ ಆಕ್ಸ್‌ಫಾಮ್ ಇಂಡಿಯಾ ವಿರುದ್ಧ ಕೇಂದ್ರದ ಗೃಹ ಸಚಿವಾಲಯ ತನಿಖೆಗೆ ಆದೇಶಿಸಿದ 12 ದಿನಗಳ ನಂತರಸಿಬಿಐ ಎಫ್‌ಐಆರ್ ದಾಖಲಿಸಿದೆ.

ಗೃಹ ಸಚಿವಾಲಯದ ನಿರ್ದೇಶಕ ಜಿತೇಂದರ್ ಚಡ್ಡಾ ದೂರಿನ ಆಧಾರದ ಮೇಲೆ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ–2010ರ(ಎಫ್‌ಸಿಆರ್‌ಎ) ಅಡಿ ಆಕ್ಸ್‌ಫಾಮ್ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಾಗಿದೆ.

ಕಂಪನಿಯ ಐದು ನಿಯಮಗಳ ಉಲ್ಲಂಘನೆ ಪರಿಗಣಿಸಿದ್ದ ಕೇಂದ್ರ ಸರ್ಕಾರ ವಿದೇಶಿ ದೇಣಿಗೆ ಸಂಗ್ರಹಿಸುವ ಪರವಾನಗಿ ನವೀಕರಿಸಿರಲಿಲ್ಲ. ಇದರ ಪರಿಣಾಮ ಆಕ್ಸ್‌ಫಾಮ್ ಇಂಡಿಯಾ ದೇಶದ 16 ರಾಜ್ಯಗಳಲ್ಲಿ ಕೈಗೊಂಡಿರುವ ಕೋವಿಡ್ ಸಂಬಂಧಿತ ಮತ್ತು ಇತರೆ ಸಾಮಾಜಿಕ ಕಾರ್ಯಗಳಿಗೆ ತೊಡಕಾಗಿತ್ತು.

ADVERTISEMENT

ಆಕ್ಸ್‌ಫಾಮ್ ಇಂಡಿಯಾ ಕಾನೂನು ಮಾರ್ಗವನ್ನು ಹೊರತುಪಡಿಸಿ ಬೇರೆ ಮಾರ್ಗಗಳ ಮೂಲಕ ಹಣವನ್ನು ಮಾಡುವ ಮೂಲಕ ಎಫ್‌ಸಿಆರ್‌ಎ ಕಾಯ್ದೆಯನ್ನು ಉಲ್ಲಂಘಿಸಿದೆ. ಲಾಭ ತಂದುಕೊಡುವಂತಹ ಮಾರ್ಗಗಳನ್ನು ಬಳಸಿ, ಕೆಲ ಸಂಸ್ಥೆಗಳಿಗೆ ‘ಆಕ್ಸ್‌ಫಾಮ್ ಇಂಡಿಯಾ’ ಹಣ ವರ್ಗಾವಣೆ ಮಾಡುತ್ತಿತ್ತು. ಇಂಥ ವಹಿವಾಟಿನ ಮೂಲಕ ಎಫ್‌ಸಿಆರ್‌ಎ ನಿಯಮಗಳಿಂದ ತಪ್ಪಿಸಿಕೊಳ್ಳಲು ಸಂಚು ರೂಪಿಸಿದ್ದು ಆದಾಯ ತೆರಿಗೆ ಇಲಾಖೆ ನಡೆಸಿದ ತನಿಖೆಯಿಂದ ತಿಳಿದು ಬಂದಿತ್ತು ಎಂದು ಗೃಹ ಸಚಿವಾಲಯ ದೂರಿನಲ್ಲಿ ತಿಳಿಸಿದೆ.

ಆಕ್ಸ್‌ಫಾಮ್ ಇಂಡಿಯಾ ವಿದೇಶಿ ಸಂಸ್ಥೆಗಳ ಸಾಧನವಾಗಿರುವ ಸಾಧ್ಯತೆ ಇದೆ ಎಂಬುದು ಪರಿಶೀಲನೆಯಲ್ಲಿ ಕಂಡುಬಂದಿದೆ. ಹಲವು ವರ್ಷಗಳಿಂದ ಸಂಸ್ಥೆಗೆ ಉದಾರವಾಗಿ ದೇಣಿಗೆ ಹರಿದುಬಂದಿದೆ ಎಂದು ಸಚಿವಾಲಯ ಹೇಳಿದೆ.

ಸಾಮಾಜಿಕ ಚಟುವಟಿಕೆಗಳನ್ನು ಕೈಗೊಳ್ಳಲು ನೋಂದಾಯಿಸಿಕೊಂಡಿರುವ ಆಕ್ಸ್‌ಫ್ಯಾಮ್ ಇಂಡಿಯಾ, ತನ್ನ ಸಹವರ್ತಿಗಳು ಮತ್ತು ಉದ್ಯೋಗಿಗಳ ಮೂಲಕ ನೀತಿ ಸಂಶೋಧನಾ ಕೇಂದ್ರಕ್ಕೆ (ಸಿಪಿಆರ್) ಕಮಿಷನ್ ರೂಪದಲ್ಲಿ ಹಣವನ್ನು ರವಾನಿಸಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.