ADVERTISEMENT

ಪಶ್ಚಿಮ ಬಂಗಾಳ: ಚುನಾವಣೋತ್ತರ ಹಿಂಸಾಚಾರ– ಸಿಬಿಐನಿಂದ ಹೈಕೋರ್ಟ್‌ಗೆ ವರದಿ

ಪಿಟಿಐ
Published 4 ಜನವರಿ 2022, 15:44 IST
Last Updated 4 ಜನವರಿ 2022, 15:44 IST
court
court   

ಕೋಲ್ಕತ್ತ: ಕಳೆದ ವರ್ಷ ಏಪ್ರಿಲ್‌ನಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆಗೆ ನಡೆದ ಚುನಾವಣೆ ನಂತರ ಸಂಭವಿಸಿದ್ದ ಹಿಂಸಾಚಾರ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ, ಕಲ್ಕತ್ತಾ ಹೈಕೋರ್ಟ್‌ಗೆ ವಸ್ತುಸ್ಥಿತಿ ವರದಿಯನ್ನು ಸಲ್ಲಿಸಿದೆ.

ಮುಖ್ಯನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ನೇತೃತ್ವದ ವಿಭಾಗೀಯ ಪೀಠಕ್ಕೆ ಸಿಬಿಐ ವರದಿ ಸಲ್ಲಿಸಿದೆ.

ರಾಜಕೀಯ ಪ್ರತೀಕಾರದಿಂದ ನಡೆದಿತ್ತು ಎನ್ನಲಾದ ಹಿಂಸಾಚಾರದ ನಂತರ ಹಲವರು ಮನೆಗಳನ್ನು ತೊರೆದಿದ್ದರು. ಈ ಜನರು ಮನೆಗಳಿಗೆ ಮರಳಿರುವ ಕುರಿತು ಮುಂದಿನ ವಿಚಾರಣೆ ವೇಳೆ ಪ್ರಮಾಣಪತ್ರ ಸಲ್ಲಿಸುವಂತೆ ವಿಭಾಗೀಯ ಪೀಠವು ರಾಜ್ಯ ಸರ್ಕಾರಕ್ಕೆ ಸೂಚಿಸಿತು. ವಿಚಾರಣೆಯನ್ನು ಜ.24ಕ್ಕೆ ಮುಂದೂಡಿತು.

ADVERTISEMENT

ಹಿಂಸಾಚಾರ ಆರೋಪಗಳ ಕುರಿತು ತನಿಖೆ ನಡೆಸುವಂತೆ ಹೈಕೋರ್ಟ್‌ನ ಐವರು ನ್ಯಾಯಾಧೀಶರಿದ್ದ ಪೀಠ ಸಿಬಿಐಗೆ ನಿರ್ದೇಶನ ನೀಡಿತ್ತು. ಹೈಕೋರ್ಟ್‌ನ ಸೂಚನೆಯಂತೆ ರಾಜ್ಯ ಪೊಲೀಸ್ ಇಲಾಖೆ 64 ಘಟನೆಗಳ ಕುರಿತ ತನಿಖೆಯನ್ನು ತನಗೆ ಒಪ್ಪಿಸಿತ್ತು ಎಂದು ಸಿಬಿಐ ತಿಳಿಸಿದೆ.

ತಾನು ತನಿಖೆ ನಡೆಸಿರುವ ಪ್ರಕರಣಗಳ ಪೈಕಿ 10 ಪ್ರಕರಣಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಇತರ ಪ್ರಕರಣಗಳಿಗೆ ಸಂಬಂಧಿಸಿ ಚಾರ್ಜ್‌ಶೀಟ್‌ ಸಿದ್ಧಪಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದೂ ಸಿಬಿಐ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.