ADVERTISEMENT

ಸರ್ಕಾರ ಉರುಳಿಸಲು ಬಿಜೆಪಿಯಿಂದ 'ಆಪರೇಷನ್ ಕಮಲ': ಎಎಪಿ ದೂರು ಸ್ವೀಕರಿಸಿದ ಸಿಬಿಐ

ಪಿಟಿಐ
Published 1 ಸೆಪ್ಟೆಂಬರ್ 2022, 5:48 IST
Last Updated 1 ಸೆಪ್ಟೆಂಬರ್ 2022, 5:48 IST
ಎಎಪಿ, ಬಿಜೆಪಿ
ಎಎಪಿ, ಬಿಜೆಪಿ   

ನವದೆಹಲಿ: ದೆಹಲಿ ಸರ್ಕಾರವನ್ನು ಉರುಳಿಸಲು ಬಿಜೆಪಿಯು 'ಆಪರೇಷನ್‌ ಕಮಲ' ನಡೆಸುತ್ತಿದೆ ಎಂದು ಆರೋಪಿಸಿ ನೀಡಿರುವದೂರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಬುಧವಾರ ಸ್ವೀಕರಿಸಿದೆ ಎಂದುಆಮ್‌ ಆದ್ಮಿ ಪಕ್ಷ (ಎಎಪಿ) ಶಾಸಕರು ತಿಳಿಸಿದ್ದಾರೆ.

ದೂರು ಸ್ವೀಕರಿಸುವಂತೆ ಒತ್ತಾಯಿಸಿ ಎಎಪಿ ಶಾಸಕರುಸಿಬಿಐ ಪ್ರಧಾನ ಕಚೇರಿ ಎದುರು ಬುಧವಾರ ಎರಡು ಗಂಟೆ ಕಾಲ ಪ್ರತಿಭಟನೆ ನಡೆಸಿದ್ದರು.

ಪ್ರತಿಭಟನೆ ವೇಳೆ, ದೆಹಲಿ ವಿಧಾನಸಭೆಯಲ್ಲಿ ಎಎಪಿಯ ಮುಖ್ಯ ಸಚೇತಕರಾಗಿರುವ ದಿಲೀಪ್ ಕೆ.ಪಾಂಡೆ ಹಾಗೂ ಕಲ್ಕಾಜಿ ಶಾಸಕಿ ಆತಿಶಿ ಅವರಿಗೆ ತಮ್ಮ ದೂರು ದಾಖಲಿಸಲು ಕಚೇರಿ ಆವರಣಕ್ಕೆ ಬರಲು ಸಿಬಿಐ ಅಧಿಕಾರಿಗಳು ಅವಕಾಶ ಕಲ್ಪಿಸಿದರು.

ADVERTISEMENT

ದೂರು ದಾಖಲಿಸಿದ ಬಳಿಕ ಮಾತನಾಡಿರುವಆತಿಶಿ,'ಕೊನೆಗೂ ನಾವು ದೂರು ದಾಖಲಿಸಿದ್ದೇವೆ. ಅದಕ್ಕೆ ಸಂಬಂಧಿಸಿದ ಪತ್ರವನ್ನೂ ಪಡೆದುಕೊಂಡಿದ್ದೇವೆ. ಆದರೆ, 10 ಮಂದಿ ಚುನಾಯಿತ ಜನಪ್ರತಿನಿಧಿಗಳು ಸುಮಾರು 2 ಗಂಟೆ ಕಾಲ ರಸ್ತೆಯಲ್ಲಿ ನಿಂತು ಕಾಯಬೇಕಾದದ್ದು ದುರದೃಷ್ಟಕರ. ಯಾವೊಬ್ಬ ಅಧಿಕಾರಿಯೂ ನಮ್ಮನ್ನು ಭೇಟಿ ಮಾಡಲಿಲ್ಲ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಕ್ಕೆ ಸಿಬಿಐ ಹೆದರಿದೆ ಎನಿಸುತ್ತದೆ ಎಂದೂ ಅವರು ಚಾಟಿ ಬೀಸಿದ್ದಾರೆ.

'ಬಿಜೆಪಿಯು ದೇಶದಾದ್ಯಂತ 277 ಶಾಸಕರನ್ನು ಖರೀದಿಸಿದೆ. ಇದಕ್ಕಾಗಿ ಸುಮಾರು 6,300 ಕೋಟಿ ಹಣ ಖರ್ಚು ಮಾಡಿದೆ. ಜೊತೆಗೆ ದೆಹಲಿಯಲ್ಲಿ ಎಎಪಿಯ 40 ಶಾಸಕರನ್ನು ಖರೀದಿಸಲು ಸಿದ್ಧತೆ ನಡೆಸುತ್ತಿದೆ. ಹೀಗಾಗಿ ಸಿಬಿಐ ತನಿಖೆ ನಡೆಸಬೇಕು ಎಂದು ನಾವು ದೂರಿನಲ್ಲಿ ಉಲ್ಲೇಖಿಸಿದ್ದೇವೆ' ಎಂದು ಆತಿಶಿ ತಿಳಿಸಿದ್ದಾರೆ.

'ಬಿಜೆಪಿ ಪ್ರಜಾಪ್ರಭುತ್ವವನ್ನು ಹೇಗೆ ಕೊಂದಿದೆ ಮತ್ತು ಶಾಸಕರನ್ನು ಖರೀದಿಸುವ ಮೂಲಕ ಇತರ ಪಕ್ಷಗಳ ಸರ್ಕಾರಗಳನ್ನು ಯಾವ ರೀತಿ ಅಸ್ಥಿರಗೊಳಿಸಿದೆ ಎಂಬ ಬಗ್ಗೆ ಎಎಪಿ ಶಾಸಕರು ವ್ಯಕ್ತಪಡಿಸುತ್ತಿರುವಕಳವಳದ ಬಗ್ಗೆ ಸಿಬಿಐನ ಯಾವೊಬ್ಬ ಅಧಿಕಾರಿಯೂ ಕಾಳಜಿ ವಹಿಸಿಲ್ಲ' ಎಂದು ದಿಲೀಪ್ ಪಾಂಡೆ ಆರೋಪಿಸಿದ್ದಾರೆ.

'ಆದಾಗ್ಯೂ, ನಮ್ಮ ದೂರಿನನ್ವಯ ಸಿಬಿಐ ಕೂಡಲೇ ತನಿಖೆ ಆರಂಭಿಸಲಿದೆ. ದೇಶದೆದುರು ಬಿಜೆಪಿಯ ಆಪರೇಷನ್‌ ಕಮಲ ಪ್ರಕರಣಗಳನ್ನು ಬಿಚ್ಚಿಡಲಿದೆ ಎಂಬ ವಿಶ್ವಾಸವಿದೆ. ನಾವು ಪ್ರತಿನಿತ್ಯ ತನಿಖೆಯ ಪ್ರಗತಿ ಪರಿಶೀಲನೆ ನಡೆಸಲಿದ್ದು, ಬೆಳವಣಿಗೆಗಳ ಬಗ್ಗೆ ಪ್ರಶ್ನಿಸುತ್ತೇವೆ' ಎಂದು ತಿಮಾರ್‌ಪುರ ಕ್ಷೇತ್ರದ ಶಾಸಕರೂ ಆಗಿರುವ ಪಾಂಡೆ ಹೇಳಿದ್ದಾರೆ.

ದೆಹಲಿ ಸರ್ಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಸಿಬಿಐ ಮುಖ್ಯಸ್ಥ ಸಬೋಧ್‌ ಕುಮಾರ್‌ ಜೈಸ್ವಾಲ್‌ ಅವರಿಗೆ ದೂರು ನೀಡಲು ಆಗಮಿಸಿದ್ದ ಎಎಪಿ ಶಾಸಕರಿಗೆ ಕಚೇರಿಯ ಒಳಗೆ ಹೋಗಲು ಅವಕಾಶ ನೀಡಿರಲಿಲ್ಲ. ಇದರಿಂದ ಬೇಸತ್ತು ಶಾಸಕರು ಪ್ರತಿಭಟನೆ ಕೈಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.