
ನವದೆಹಲಿ: ಕೃತಕ ಬುದ್ಧಿಮತ್ತೆ (ಎ.ಐ) ಮತ್ತು ಕಂಪ್ಯುಟೇಷನಲ್ ಥಿಂಕಿಂಗ್ (ಕಂಪ್ಯೂಟರ್ ಆಧಾರಿತ ಆಲೋಚನೆ) ವಿಷಯಾಧಾರಿತ ಪಠ್ಯ ರೂಪಿಸಲು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಐಐಟಿ ಮದ್ರಾಸ್‌ನ ಪ್ರಾಧ್ಯಾಪಕ ಕಾರ್ತಿಕ್ ರಮಣ್ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಿದೆ.
2026–27ರ ಶೈಕ್ಷಣಿಕ ವರ್ಷದಿಂದ ತನ್ನ ವ್ಯಾಪ್ತಿಯ ಎಲ್ಲ ಶಾಲೆಗಳಲ್ಲಿ ಮೂರನೇ ತರಗತಿಯಿಂದ ಎ.ಐ ಮತ್ತು ಕಂಪ್ಯುಟೇಷನಲ್ ಥಿಂಕಿಂಗ್ ಪಠ್ಯಕ್ರಮವನ್ನು ಅಳವಡಿಸುವ ಪ್ರಯತ್ನದ ಭಾಗವಾಗಿ ಸಮಿತಿ ರಚಿಸಲಾಗಿದೆ.
‘ಸಿಬಿಎಸ್‌ಇ, ಎನ್‌ಸಿಇಆರ್‌ಟಿ, ಕೆವಿಎಸ್, ಎನ್‌ವಿಎಸ್ ತಜ್ಞರು ಮತ್ತು ಬಾಹ್ಯ ತಜ್ಞರೊಂದಿಗೆ ಮಂಡಳಿಯ ಪ್ರಮುಖರು ಬುಧವಾರ ಸಮಾಲೋಚನೆ ನಡೆಸಿದರು. ಸಭೆಯಲ್ಲಿ ಮದ್ರಾಸ್ ಐಐಟಿಯ ದತ್ತಾಂಶ ವಿಜ್ಞಾನ (ಡೆಟಾ ಸೈನ್ಸ್) ಮತ್ತು ಎ.ಐ ವಿಭಾಗದ ಪ್ರಾಧ್ಯಾಪಕ ಕಾರ್ತಿಕ್ ರಮಣ್ ನೇತೃತ್ವದಲ್ಲಿ ಪಠ್ಯಕ್ರಮ ರಚನಾ ಸಮಿತಿ ರಚಿಸಲಾಯಿತು’ ಎಂದು ಶಾಲಾ ಶಿಕ್ಷಣ ಕಾರ್ಯದರ್ಶಿ ಸಂಜಯ್ ಕುಮಾರ್ ತಿಳಿಸಿದ್ದಾರೆ.
‘ಕೃತಕ ಬುದ್ಧಿಮತ್ತೆ ಮತ್ತು ಕಂಪ್ಯುಟೇಷನಲ್ ಥಿಂಕಿಂಗ್ ಎನ್ನುವುದು ಕಲಿಕೆ, ಆಲೋಚನೆ ಮತ್ತು ಬೋಧನೆ ಪರಿಕಲ್ಪನೆಯನ್ನು ಬಲಪಡಿಸಲಿದೆ. ಜನರ ಒಳಿತಿಗಾಗಿ ಕೃತಕ ಬುದ್ಧಿಮತ್ತೆ ಬಳಸುವ ಆಲೋಚನೆಯನ್ನು ವಿಸ್ತರಿಸುತ್ತದೆ. ಈ ಪ್ರಯತ್ನ ಈಗಷ್ಟೇ ಹುಟ್ಟಿಕೊಂಡಿದೆ. ಸಂಕೀರ್ಣ ಸಮಸ್ಯೆಗಳ ಪರಿಹಾರಕ್ಕೆ ಕೃತಕ ಬುದ್ಧಿಮತ್ತೆಯನ್ನು ನೈತಿಕವಾಗಿ ಬಳಸುವ ನಿಟ್ಟಿನಲ್ಲಿ ಇದು ಪರಿಣಾಮಕಾರಿ ಹೆಜ್ಜೆ’ ಎಂದು ಅವರು ತಿಳಿಸಿದರು.
‘ವಿಶಾಲವಾದ, ಸಮಗ್ರವಾದ ಮತ್ತು ಶಾಲಾ ಶಿಕ್ಷಣದ ರಾಷ್ಟ್ರೀಯ ಪಠ್ಯಕ್ರಮ ಸ್ವರೂಪದ (ಎನ್‌ಸಿಎಫ್–ಎಸ್‌ಇ) ಪರಿಧಿಯಲ್ಲಿ ಎಐ ಪಠ್ಯಕ್ರಮ ರಚಿಸಲಾಗುತ್ತದೆ. ಪ್ರತಿಯೊಂದು ಮಗುವಿನ ವಿಶಿಷ್ಟ ಸಾಮರ್ಥ್ಯ ನಮ್ಮ ಆದ್ಯತೆ’ ಎಂದು ಹೇಳಿದರು.
ಪ್ರಸ್ತುತ, ದೇಶದ 18,000 ಸಿಬಿಎಸ್‌ಇ ಶಾಲೆಗಳು 6ನೇ ತರಗತಿ ನಂತರ ಕೃತಕ ಬುದ್ಧಿಮತ್ತೆಯನ್ನು ಕೌಶಲ ವಿಷಯದ ರೂಪದಲ್ಲಿ 15 ಗಂಟೆಗಳಷ್ಟು ಕಾಲ ಬೋಧಿಸುತ್ತಿವೆ. 9ರಿಂದ 12ನೇ ತರಗತಿವರೆಗೆ ಇದು ಐಚ್ಛಿಕ ವಿಷಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.