ADVERTISEMENT

ಸಿಬಿಎಸ್‌ಇ: ಜೂ. 20ರೊಳಗೆ 10ನೇ ತರಗತಿ ಫಲಿತಾಂಶ

ಪಿಟಿಐ
Published 1 ಮೇ 2021, 22:04 IST
Last Updated 1 ಮೇ 2021, 22:04 IST
   

ನವದೆಹಲಿ: ಕೋವಿಡ್‌–19 ಕಾರಣಕ್ಕಾಗಿ ರದ್ದುಪಡಿಸಲಾಗಿದ್ದ ಕೇಂದ್ರ ಪ್ರೌಢಶಿಕ್ಷಣ ಮಂಡಳಿಯ (ಸಿಬಿಎಸ್‌ಇ) 10ನೇ ತರಗತಿಯ ಪರೀಕ್ಷಾ ಫಲಿತಾಂಶವನ್ನು ಜೂನ್ 20ರೊಳಗೆ ಪ್ರಕಟಿಸಲಾಗುವುದು ಎಂದು ಪರೀಕ್ಷಾ ವಿಭಾಗದ ನಿಯಂತ್ರಕ ಸನ್ಯಂ ಭಾರದ್ವಾಜ್ ತಿಳಿಸಿದ್ದಾರೆ.

ರದ್ದಾಗಿರುವ ಪರೀಕ್ಷೆಗಳಿಗೆ ಅಂಕಗಳನ್ನು ನಿಗದಿಪಡಿಸುವ ಯೋಜನೆಯನ್ನೂ ಸಿಬಿಎಸ್‌ಇ ಶನಿವಾರ ತಿಳಿಸಿದೆ.

ಈ ಯೋಜನೆಯ ಪ್ರಕಾರ, ಪ್ರತಿ ವರ್ಷಕ್ಕೆ 20 ಅಂಕಗಳು ಆಂತರಿಕ ಮೌಲ್ಯಮಾಪನಕ್ಕೆ ಒಳಪಟ್ಟರೆ, ವರ್ಷವಿಡೀ ವಿವಿಧ ಪರೀಕ್ಷೆಗಳು ಅಥವಾ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಸಾಧನೆಯ ಆಧಾರದ ಮೇಲೆ 80 ಅಂಕಗಳನ್ನು ಲೆಕ್ಕಹಾಕಲಾಗುತ್ತದೆ.

ADVERTISEMENT

‘ಶಾಲೆಗಳು ನೀಡುವ ಅಂಕಗಳು 10ನೇ ತರಗತಿ ಪರೀಕ್ಷೆಗಳಲ್ಲಿ ಶಾಲೆಯ ಹಿಂದಿನ ಸಾಧನೆಗೆ ಅನುಗುಣವಾಗಿರಬೇಕು ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಫಲಿತಾಂಶಗಳನ್ನು ಅಂತಿಮಗೊಳಿಸಲು ಶಾಲೆಗಳು ಪ್ರಾಂಶುಪಾಲರ ನೇತೃತ್ವದಲ್ಲಿ ಮೇ 5ರೊಳಗೆ ಎಂಟು ಸದಸ್ಯರ ಸಮಿತಿಯನ್ನು ರಚಿಸಬೇಕು. ಶಾಲಾವಾರು ಅಂಕಗಳ ವಿತರಣೆ ಮತ್ತು ದಾಖಲೆಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆಯನ್ನು ಮೇ 10ರೊಳಗೆ ಪೂರ್ಣಗೊಳಿಸಬೇಕು’ ಎಂದು ಭಾರದ್ವಾಜ್ ಹೇಳಿದ್ದಾರೆ.

‘ವರ್ಷವಿಡೀ ಕೆಲ ಪರೀಕ್ಷೆಗಳಲ್ಲಿ ಹಾಜರಾಗದವರಿಗೆ ಶಾಲೆಗಳು ಮೇ 15ರೊಳಗೆ ಆನ್‌ಲೈನ್ ಅಥವಾ ದೂರವಾಣಿ ಮೂಲಕ ಮೌಲ್ಯಮಾಪನ ನಡೆಸಲಿವೆ ಮತ್ತು ಮೇ 25ರೊಳಗೆ ಫಲಿತಾಂಶವನ್ನು ಅಂತಿಮಗೊಳಿಸಲಿವೆ. ಜೂನ್ 11ರೊಳಗೆ ಎಲ್ಲಾ ಫಲಿತಾಂಶಗಳನ್ನು ಸಿಬಿಎಸ್‌ಇಗೆ ಸಲ್ಲಿಸಬೇಕು. ಜೂನ್ 20ರೊಳಗೆ ಫಲಿತಾಂಶವನ್ನು ಪ್ರಕಟಿಸಲಾಗುವುದು’ ಎಂದೂ ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.