ನವದೆಹಲಿಯ ಸೇಂಟ್ ಥಾಮಸ್ ಗರ್ಲ್ಸ್ ಸೆಕಂಡರಿ ಸ್ಕೂಲ್‌ನ ವಿದ್ಯಾರ್ಥಿನಿಯರು ಮಂಗಳವಾ ಪ್ರಕಟವಾದ ಸಿಬಿಎಸ್‌ಇ 12ನೇ ತರಗತಿ ಫಲಿತಾಂಶವನ್ನು ಸಂಭ್ರಮಿಸಿದ್ದು ಹೀಗೆ
–ಪಿಟಿಐ ಚಿತ್ರ
ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್‌ಇ) 12ನೇ ತರಗತಿ ಫಲಿತಾಂಶವನ್ನು ಮಂಗಳವಾರ ಪ್ರಕಟಿಸಿದ್ದು, ಬಾಲಕಿಯರು ಉತ್ತಮ ಸಾಧನೆ ದಾಖಲಿಸಿದ್ದಾರೆ.
ಈ ವರ್ಷ 16,92,794 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಶೇ 90ಕ್ಕೂ ಅಧಿಕ ಅಂಕ ಗಳಿಸಿರುವ ವಿದ್ಯಾರ್ಥಿಗಳ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ ಎಂದು ಮಂಡಳಿಯ ಪರೀಕ್ಷಾ ನಿಯಂತ್ರಕರಾದ ಸಂಯಮ್ ಭಾರದ್ವಾಜ್ ಹೇಳಿದ್ದಾರೆ.
ಪರೀಕ್ಷೆಗೆ ಹಾಜರಾಗಿದ್ದವರ ಪೈಕಿ, ಶೇ 88.39ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದು ಕಳೆದ ವರ್ಷದ ಫಲಿತಾಂಶದ ಪ್ರಮಾಣ ಶೇ 87.98ಕ್ಕೆ ಹೋಲಿಸಿದರೆ, ಶೇ 5ರಷ್ಟು ಹೆಚ್ಚಳವಾಗಿದೆ. ಶೇ 91.64ರಷ್ಟು ಬಾಲಕಿಯರು ಹಾಗೂ ಶೇ 85.70ರಷ್ಟು ಬಾಲಕರು ತೇರ್ಗಡೆಯಾಗಿದ್ದಾರೆ ಎಂದೂ ತಿಳಿಸಿದ್ದಾರೆ.
ಪರೀಕ್ಷೆ ಹಾಜರಾಗಿದ್ದ ಲಿಂಗತ್ವ ಅಲ್ಪಸಂಖ್ಯಾತ ವಿದ್ಯಾರ್ಥಿಗಳೆಲ್ಲರೂ ಈ ಬಾರಿ ಉತ್ತೀರ್ಣರಾಗಿದ್ದಾರೆ. 290 ‘ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗಳು‘(ಸಿಎಸ್‌ಡಬ್ಲ್ಯುಎನ್) ಶೇ 90ಕ್ಕೂ ಅಧಿಕ ಅಂಕ ಗಳಿಸಿ ಗಮನ ಸೆಳೆದಿದ್ದಾರೆ. ಈ ವರ್ಗದ 55 ವಿದ್ಯಾರ್ಥಿಗಳು ಶೇ 95ಕ್ಕೂ ಅಧಿಕ ಅಂಕ ಗಳಿಸಿ ಸಾಧನೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಈ ವರ್ಷ, ಒಂದು ಅಥವಾ ಹೆಚ್ಚು ವಿಷಯಗಳಲ್ಲಿ ಅನುತ್ತೀರ್ಣಗೊಂಡಿದ್ದ 1.29 ಲಕ್ಷ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ಕೊಡಲಾಗಿತ್ತು. ಕಳೆದ ವರ್ಷ ಇಂತಹ ವಿದ್ಯಾರ್ಥಿಗಳ ಸಂಖ್ಯೆ 1.22 ಲಕ್ಷ ಇತ್ತು.
ಜವಾಹರ ನವೋದಯ ವಿದ್ಯಾಲಯಗಳು ಶೇ 99.9ರಷ್ಟು ಫಲಿತಾಂಶದೊಂದಿಗೆ ಗರಿಷ್ಠ ತೇರ್ಗಡೆ ಪ್ರಮಾಣ ದಾಖಲಿಸಿದ್ದರೆ, ಖಾಸಗಿ/ಸ್ವತಂತ್ರ ಶಾಲೆಗಳು ಶೇ 87.94ರಷ್ಟು ಫಲಿತಾಂಶದೊಂದಿಗೆ ಅತ್ಯಂತ ಕಡಿಮೆ ಸಾಧನೆ ಮಾಡಿವೆ.
‘ಮೆರಿಟ್ ಪಟ್ಟಿ ಘೋಷಣೆ ಇಲ್ಲ’
‘ವಿದ್ಯಾರ್ಥಿಗಳಲ್ಲಿ ಅನಾರೋಗ್ಯಕರ ಪೈಪೋಟಿಯನ್ನು ಪ್ರೋತ್ಸಾಹಿಸಬಾರದು ಎಂಬ ದೃಷ್ಟಿಯಿಂದ ಈ ಬಾರಿ 10 ಹಾಗೂ 12ನೇ ತರಗತಿ ಫಲಿತಾಂಶದಲ್ಲಿ ಮೆರಿಟ್ ಪಟ್ಟಿ ಅಥವಾ ದರ್ಜೆಗಳನ್ನು ಘೋಷಣೆ ಮಾಡಿಲ್ಲ’ ಎಂದು ಸಿಬಿಎಸ್‌ಇ ಪರೀಕ್ಷಾ ನಿಯಂತ್ರಕ ಸಂಯಮ್ ಭಾರದ್ವಾಜ್ ಹೇಳಿದ್ದಾರೆ. ‘ಎಲ್ಲ ವಿಷಯಗಳಲ್ಲಿ ಅತ್ಯಧಿಕ ಅಂಕಗಳನ್ನು ಪಡೆದಿರುವ ಶೇ 0.1ರಷ್ಟು ವಿದ್ಯಾರ್ಥಿಗಳಿಗೆ ಅರ್ಹತಾ ಪ್ರಮಾಣಪತ್ರವನ್ನು ನೀಡಲಾಗುವುದು. ಈ ಪ್ರಮಾಣಪತ್ರಗಳು ವಿದ್ಯಾರ್ಥಿಗಳ ಡಿಜಿ ಲಾಕರ್ ಖಾತೆಯಲ್ಲಿ ಲಭ್ಯವಿರುತ್ತವೆ’ ಎಂದು ಕೋವಿಡ್–19 ಪಿಡುಗಿನ ಕಾರಣ 2020 ಹಾಗೂ 2021ರಲ್ಲಿ ಕೆಲ ವಿಷಯಗಳ ಪರೀಕ್ಷೆಯನ್ನು ಮಂಡಳಿ ರದ್ದುಪಡಿಸಿತ್ತು. ಹೀಗಾಗಿ ಈ ಶೈಕ್ಷಣಿಕ ವರ್ಷಗಳಿಗೆ ಸಂಬಂಧಿಸಿ ಮಂಡಳಿಯು ಮೆರಿಟ್ ಪಟ್ಟಿಯನ್ನು ಪ್ರಕಟಿಸಿರಲಿಲ್ಲ. 2022ರಿಂದ ಮೆರಿಟ್ ಪಟ್ಟಿ ಪ್ರಕಟಿಸುವ ನೀತಿಯನ್ನು ಕೈಬಿಡಲಾಗಿದೆ ಕೆಲ ಶಾಲೆಗಳಿಂದ ಘೋಷಣೆ: ಮೆರಿಟ್ ಪಟ್ಟಿ ಅಥವಾ ವಿದ್ಯಾರ್ಥಿಗಳು ಪಡೆದ ದರ್ಜೆ ಘೋಷಣೆ ಮಾಡುವುದಿಲ್ಲ ಎಂದು ಸಿಬಿಎಸ್‌ಇ ತಿಳಿಸಿದ್ದರೂ ಕೆಲ ಶಾಲೆಗಳು ಅಗ್ರಸ್ಥಾನ ಪಡೆದ ವಿದ್ಯಾರ್ಥಿಗಳ ಹೆಸರುಗಳನ್ನು ಪ್ರಕಟಿಸಿವೆ.
ಅಂಕಗಳು ನಿಮ್ಮ ಸಾಮರ್ಥ್ಯ ನಿರ್ಧರಿಸವು: ಮೋದಿ
ಸಿಬಿಎಸ್‌ಇಯ 10 ಹಾಗೂ 12ನೇ ತರಗತಿ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಅಭಿನಂದಿಸಿದ್ದಾರೆ. ‘ಒಂದು ಪರೀಕ್ಷೆ ಅಥವಾ ನೀವು ಪಡೆದ ಅಂಕಗಳು ನೀವು ಏನು? ನಿಮ್ಮ ಸಾಮರ್ಥ್ಯವೇನು ಎಂಬುದನ್ನು ನಿರ್ಧರಿಸುವುದಿಲ್ಲ. ಅಂಕಪಟ್ಟಿಯಾಚೆಗೆ ನಿಮ್ಮೆಲ್ಲರ ಶಕ್ತಿ ಇದೆ’ ಎಂದು ಹೇಳುವ ಮೂಲಕ ವಿದ್ಯಾರ್ಥಿಗಳನ್ನು ಅವರು ಹುರಿದುಂಬಿಸಿದ್ದಾರೆ. ‘ನಿಮ್ಮ ಬದ್ಧತೆ ಶಿಸ್ತು ಹಾಗೂ ಕಠಿಣ ಪರಿಶ್ರಮದ ಫಲಿತಾಂಶವೇ ನೀವು ಪಡೆದಿರುವ ಅಂಕಗಳು. ನಿಮ್ಮ ಈ ಸಾಧನೆ–ಸಂಭ್ರಮಕ್ಕೆ ಶಿಕ್ಷಕರು ಪಾಲಕರು ಹಾಗೂ ಇತರರು ನೀಡಿರುವ ಕೊಡುಗೆಯನ್ನು ಅರಿತು ಅವರೆಲ್ಲರಿಗೆ ಧನ್ಯವಾದ ಅರ್ಪಿಸುವ ದಿನವೂ ಇದಾಗಿದೆ’ ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.