ADVERTISEMENT

ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ: ಶೇ 99.37 ಮಂದಿ ಪಾಸ್‌, ಬಾಲಕಿಯರ ಮೇಲುಗೈ

​ಪ್ರಜಾವಾಣಿ ವಾರ್ತೆ
Published 30 ಜುಲೈ 2021, 9:53 IST
Last Updated 30 ಜುಲೈ 2021, 9:53 IST
   

ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್‌ಇ) 12ನೇ ತರಗತಿಯ ಫಲಿತಾಂಶ ಶುಕ್ರವಾರ ಮಧ್ಯಾಹ್ನ ಪ್ರಕಟವಾಗಿದೆ. ಈ ವರ್ಷ ಶೇಕಡಾ 99.37 ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ.

70 ಸಾವಿರಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಶೇ. 95ರಷ್ಟು ಅಂಕಗಳಿಸಿರುವುದು ಈ ಬಾರಿಯ ವಿಶೇಷತೆ. ಶೇ. 0.54ರ ಅಂತರದಲ್ಲಿ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಕಳೆದ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದರು.

65,000ಕ್ಕೂ ಹೆಚ್ಚು ಅಭ್ಯರ್ಥಿಗಳ ಫಲಿತಾಂಶವನ್ನು ಇನ್ನೂ ಸಿದ್ಧಪಡಿಸಲಾಗುತ್ತಿದ್ದು, ಆಗಸ್ಟ್ 5 ರೊಳಗೆ ಘೋಷಿಸಲಾಗುವುತ್ತದೆ ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಬಾರಿ ಅರ್ಹತಾ ಪಟ್ಟಿಯನ್ನು ಘೋಷಿಸಿಲ್ಲ ಎಂದೂ ಅವರು ಹೇಳಿದ್ದಾರೆ.

ADVERTISEMENT

ಒಟ್ಟು 70,004 ವಿದ್ಯಾರ್ಥಿಗಳು ಶೇ 95ಕ್ಕಿಂತಲೂ ಹೆಚ್ಚಿನ ಅಂಕ ಗಳಿಸಿದ್ದರೆ, 1,50,152 ವಿದ್ಯಾರ್ಥಿಗಳು ಶೇ. 90ಕ್ಕಿಂತಲೂ ಹೆಚ್ಚಿನ ಅಂಕ ಪಡೆದಿದ್ದಾರೆ.

ಈ ಬಾರಿ 6149 ಮಂದಿ ಕಂಪಾರ್ಟ್‌ಮೆಂಟ್‌ನಲ್ಲಿದ್ದಾರೆ (ಐದು ವಿಷಯಗಳ ಪೈಕಿ ಒಂದರಲ್ಲಿ ಫೇಲ್‌ ಆದವರು). ಕಳೆದ ವರ್ಷ ಈ ಸಂಖ್ಯೆ 87,000 ಆಗಿತ್ತು.

ಸಿಬಿಎಸ್‌ಇ 13,04,561 ವಿದ್ಯಾರ್ಥಿಗಳ ಪರೀಕ್ಷೆ ಘೋಷಿಸಿದೆ. ಒಟ್ಟು 14,30,188 ವಿದ್ಯಾರ್ಥಿಗಳು 12ನೇ ತರಗತಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು.

ಕೋವಿಡ್‌ ಎರಡನೇ ಅಲೆ ಹಿನ್ನೆಲೆಯಲ್ಲಿ ಈ ವರ್ಷ ಸಿಬಿಎಸ್‌ಇ ಪರೀಕ್ಷೆಗಳನ್ನು ರದ್ದುಪಡಿಸಲಾಗಿತ್ತು. ಹೀಗಾಗಿ ಮಂಡಳಿಯು ಪರ್ಯಾಯ ಮೌಲ್ಯಮಾಪನ ಸೂತ್ರದ ಆಧಾರದ ಮೇಲೆ ಫಲಿತಾಂಶವನ್ನು ಪ್ರಕಟಿಸಿದೆ.

ಫಲಿತಾಂಶವು ಮಂಡಳಿಯ ಅಧಿಕೃತ ವೆಬ್‌ಸೈಟ್ cbseresults.nic.in ನಲ್ಲಿ ಲಭ್ಯವಾಗಲಿದೆ. ಜೊತೆಗೆ, digilocker.gov.in ಮತ್ತು ಮೊಬೈಲ್‌ನಲ್ಲಿರುವ ಡಿಜಿಲಾಕರ್ ಅಪ್ಲಿಕೇಷನ್‌ನಲ್ಲೂ ಫಲಿತಾಂಶಗಳನ್ನು ನೋಡಬಹುದು. ಈಗ ತಿಳಿಸಿರುವ ವೆಬ್‌ಸೈಟ್‌, ಅಪ್ಲಿಕೇಷನ್‌ಗಳಲ್ಲಿ ವಿದ್ಯಾರ್ಥಿಗಳು ತಮ್ಮ ರೋಲ್‌ ನಂಬರ್‌ ಅನ್ನು ನಮೂದಿಸಿ, ಫಲಿತಾಂಶವನ್ನು ಪಡೆಯಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.