ADVERTISEMENT

ಜಾತ್ಯತೀತತೆ, ಒಕ್ಕೂಟ ವಿಷಯ ಕೈಬಿಟ್ಟ ಸಿಬಿಎಸ್‌ಇ

ವಿವಾದಕ್ಕೀಡಾದ ನಿರ್ಧಾರ: ವಿರೋಧ ಪಕ್ಷಗಳ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 8 ಜುಲೈ 2020, 15:09 IST
Last Updated 8 ಜುಲೈ 2020, 15:09 IST
ಸಿಬಿಎಸ್‌ಇ
ಸಿಬಿಎಸ್‌ಇ   

ನವದೆಹಲಿ: ಪ್ರಸಕ್ತ ಶೈಕ್ಷಣಿಕ ವರ್ಷದ 11ನೇ ತರಗತಿಯ ಪಠ್ಯಕ್ರಮದಿಂದ ಜಾತ್ಯತೀತತೆ, ಪೌರತ್ವ, ರಾಷ್ಟ್ರೀಯತೆ, ಒಕ್ಕೂಟ ವ್ಯವಸ್ಥೆ, ಸ್ಥಳೀಯ ಸರ್ಕಾರಗಳ ಬೆಳವಣಿಗೆ ಮುಂತಾದ ವಿಷಯಗಳನ್ನು ಕೈಬಿಟ್ಟಿರುವ ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯ (ಸಿಬಿಎಸ್‌ಇ) ಕ್ರಮ ವಿವಾದಕ್ಕೀಡಾಗಿದೆ.

ಕೋವಿಡ್‌–19 ಬಿಕ್ಕಟ್ಟಿನಿಂದಾಗಿ ಶಾಲೆಗಳು ಮುಚ್ಚಿರುವುದರಿಂದ 9ರಿಂದ 12ನೇ ತರಗತಿಯವರೆಗೆ ಶೇಕಡ 30ರಷ್ಟು ಪಠ್ಯಕ್ರಮವನ್ನು ಕಡಿತಗೊಳಿಸಲು ನಿರ್ಧರಿಸಿದ್ದ ಸಿಬಿಎಸ್‌ಇ, ಈ ಕ್ರಮಕೈಗೊಂಡಿತ್ತು.

‘ಪ್ರಜಾಪ್ರಭುತ್ವ’ ಮತ್ತು ‘ವೈವಿಧ್ಯತೆ’, ’ಜನಪ್ರಿಯ ಹೋರಾಟ ಮತ್ತು ಚಳವಳಿಗಳು’ ಹಾಗೂ ‘ಪ್ರಜಾಪ್ರಭುತ್ವಕ್ಕೆ ಸವಾಲುಗಳು’ ವಿಷಯಗಳನ್ನು ಸಹ 10ನೇ ತರಗತಿ ರಾಜ್ಯಶಾಸ್ತ್ರ ಪಠ್ಯಕ್ರಮದಿಂದ ಕೈಬಿಟ್ಟಿದೆ.

ADVERTISEMENT

12ನೇ ತರಗತಿ ಪಠ್ಯಕ್ರಮದಿಂದ ‘ವಿಭಜನೆಯನ್ನು ತಿಳಿದುಕೊಳ್ಳುವುದು’ ಮತ್ತು ’ನೋಟು ರದ್ದು’ ಹಾಗೂ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಮ್ಯಾನ್ಮಾರ್‌, ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ ಜತೆ ಸಂಬಂಧದ ವಿಷಯಗಳನ್ನು ಕೈಬಿಡಲಾಗಿದೆ.

ವಿದ್ಯಾರ್ಥಿಗಳ ಮೇಲಿನ ಹೊರೆ ಕಡಿಮೆ ಮಾಡಲು ಈ ವಿಷಯಗಳನ್ನು ಕಡಿತಗೊಳಿಸಲಾಗಿದ್ದು, ಪ್ರಮುಖ ವಿಷಯಗಳನ್ನು ಉಳಿಸಿಕೊಳ್ಳಲಾಗಿದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ತಿಳಿಸಿದೆ.

ಸಿಬಿಎಸ್‌ಇಯ ಈ ನಿರ್ಧಾರಕ್ಕೆ ಕಾಂಗ್ರೆಸ್‌ ಹಾಗೂ ಇತರ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ.

’ಜಾತ್ಯತೀತತೆ ಮತ್ತು ಒಕ್ಕೂಟ ವ್ಯವಸ್ಥೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಆಧಾರ ಸ್ಥಂಭಗಳು. ಪಠ್ಯಕ್ರಮದಿಂದ ಈ ವಿಷಯಗಳನ್ನು ಕೈಬಿಟ್ಟು ಯಾವ ರೀತಿಯ ಸಂದೇಶ ನೀಡುತ್ತಿದ್ದೀರಿ’ ಎಂದು ಕಾಂಗ್ರೆಸ್‌ ವಕ್ತಾರ ಅಭಿಷೇಕ್‌ ಮನು ಸಿಂಘ್ವಿ ಪ್ರಶ್ನಿಸಿದ್ದಾರೆ.

‘ಸಿಬಿಎಸ್‌ಇ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವ ಬಗ್ಗೆ ಯೋಚಿಸುತ್ತಿದ್ದೇನೆ’ ಎಂದು ಹೇಳಿದ್ದಾರೆ.

‘ಇದೊಂದು ಆಘಾತಕಾರಿ ನಿರ್ಧಾರ. ನಾವು ಆಕ್ಷೇಪ ವ್ಯಕ್ತಪಡಿಸುತ್ತೇವೆ. ಈ ವಿಷಯಗಳನ್ನು ಕೈಬಿಡಬಾರದು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ಕೋರುತ್ತೇನೆ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಶಿವಸೇನಾ ಸಹ ಈ ಬಗ್ಗೆ ದನಿ ಎತ್ತಿದ್ದು, ‘ವೈವಿಧ್ಯಮಯ ಚಿಂತನೆಗಳನ್ನು ಅಳವಡಿಸಿಕೊಳ್ಳಲು ಮೋದಿ ಸರ್ಕಾರ ಸಹಿಷ್ಣುತೆ ಗುಣವನ್ನು ಬೆಳೆಸಿಕೊಳ್ಳಬೇಕು’ ಎಂದು ಹೇಳಿದೆ.

‘ಪಠ್ಯ ಕಡಿತ ಮಾಡುವ ನೆಪದಲ್ಲಿ ಪ್ರಮುಖ ವಿಷಯಗಳನ್ನು ಕೈಬಿಡಬಾರದು’ ಎಂದು ಶಿವಸೇನಾ ನಾಯಕಿ ಪ್ರಿಯಾಂಕಾ ಚತುರ್ವೇದಿ ಹೇಳಿದ್ದಾರೆ.

‘ದೇಶದ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವ ವೈವಿಧ್ಯತೆ, ಬಹುತ್ವ, ಪ್ರಜಾಪ್ರಭುತ್ವ ಕುರಿತಾದ ಅಂಶಗಳನ್ನೇ ಮೋದಿ ಸರ್ಕಾರ ತೆಗೆದುಹಾಕುತ್ತಿದೆ. ಇದು ಆರ್‌ಎಸ್‌ಎಸ್‌ನ ಅಸಹಿಷ್ಣುತೆ, ಫ್ಯಾಸಿಸ್ಟ್‌ ಸಿದ್ಧಾಂತಗಳನ್ನು ಸಿಬಿಎಸ್‌ಇ ಮೂಲಕ ಹೇರುವ ಪ್ರಯತ್ನ ಮಾಡಲಾಗುತ್ತಿದೆ’ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹೇಳಿದ್ದಾರೆ.

‘ಸಂವಿಧಾನವನ್ನು ನಾಶ ಮಾಡುವ ಪ್ರಯತ್ನ ಇದಾಗಿದೆ. ಇದನ್ನು ಸಹಿಸುವುದಿಲ್ಲ’ ಎಂದು ಅವರು ಹೇಳಿದ್ದಾರೆ.

ಶೈಕ್ಷಣಿಕ ವಲಯದಲ್ಲೂ ಅಸಮಾಧಾನ:

ಪಠ್ಯಕ್ರಮವನ್ನು ಕಡಿತಗೊಳಿಸುವಾಗ ಶೈಕ್ಷಣಿಕ ವಿಷಯಗಳಿಗಿಂತ ರಾಜಕೀಯವನ್ನೇ ‍ಪ್ರಮುಖವಾಗಿ ಪರಿಗಣಿಸಲಾಗಿದೆ ಎಂದು ಕೆಲವು ಶೈಕ್ಷಣಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

‘ಪಠ್ಯದಿಂದ ತೆಗೆದುಹಾಕಿರುವ ವಿಷಯಗಳನ್ನು ನೋಡಿದಾಗ ಸೈದ್ಧಾಂತಿಕ ವಿಷಯಗಳನ್ನು ಆಯ್ಕೆ ಮಾಡಿರುವುದು ಸ್ಪಷ್ಟವಾಗುತ್ತದೆ. ವಿದ್ಯಾರ್ಥಿಗಳ ಕಲಿಕೆಯ ಜತೆ ರಾಜಿ ಮಾಡಿಕೊಳ್ಳಲಾಗುತ್ತಿದೆ’ ಎಂದು ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ಸುರಜೀತ್‌ ಮಜುಂದಾರ್‌ ಅಭಿಪ್ರಾಯಪಟ್ಟಿದ್ದಾರೆ.

‘ಶೈಕ್ಷಣಿಕ ಗುಣಮಟ್ಟದ ಮೇಲೆ ಪರಿಣಾಮ ಬೀರುವ ನಿರ್ಧಾರ ಇದಾಗಿದೆ. ಸ್ವಾತಂತ್ರ್ಯ, ಸಮಾನತೆ, ಸಾಮಾಜಿಕ ನ್ಯಾಯ, ಜಾತ್ಯತೀತತೆ ವಿಷಯಗಳು ಒಂದಕ್ಕೊಂದು ಸಂಬಂಧ ಹೊಂದಿವೆ. ಒಂದು ವಿಷಯ ಇಲ್ಲದೆಯೇ ಇನ್ನೊಂದು ವಿಷಯ ಕಲಿಸಲಾಗುವುದಿಲ್ಲ’ ಎಂದು ದೆಹಲಿ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಪ್ರಾಧ್ಯಾಪಕ ರಾಜೇಶ್‌ ಝಾ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.