ADVERTISEMENT

ದೆಹಲಿಯಲ್ಲಿ ಮಹಿಳೆಯರ ಸುರಕ್ಷತೆಗೆ ಕ್ಯಾಮೆರಾ ಕಣ್ಣು

ಪಿಟಿಐ
Published 7 ಮಾರ್ಚ್ 2025, 16:27 IST
Last Updated 7 ಮಾರ್ಚ್ 2025, 16:27 IST
   

ನವದೆಹಲಿ: ದೆಹಲಿಯಲ್ಲಿ ಕಣ್ಗಾವಲು ಕ್ಯಾಮೆರಾ ಮುಂದೆ ನಿಂತು ಮಹಿಳೆಯರು ಕೈಬೀಸಿದರೆ, ಅದು ಅವರಿಗೆ ಸಂಕಷ್ಟದಿಂದ ಪಾರಾಗಲು ನೆರವಾಗಬಹುದು. ದೆಹಲಿ ಪೊಲೀಸರು ಇಂಥದ್ದೊಂದು ವಿನೂತನವಾದ ವ್ಯವಸ್ಥೆಯನ್ನು ಶೀಘ್ರವೇ ಜಾರಿಗೆ ತರಲು ಸಿದ್ಧತೆ ನಡೆಸಿದ್ದಾರೆ.

‘ಸುರಕ್ಷಿತ ನಗರ’ ಹೆಸರಿನ ಈ ಯೋಜನೆಯ ಅಡಿ, ದೃಶ್ಯಗಳನ್ನು ಹೆಚ್ಚು ನಿಖರವಾಗಿ ಸೆರೆಹಿಡಿಯುವ ಕ್ಯಾಮೆರಾಗಳನ್ನು ನಗರದ ಹಲವೆಡೆ ಅಳವಡಿಸಲಾಗುತ್ತದೆ. ಈ ಕ್ಯಾಮೆರಾಗಳು ಸೆರೆಹಿಡಿಯುವ ದೃಶ್ಯಗಳು ನೇರವಾಗಿ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ, ಡಿಸಿಪಿಗಳ ಕಚೇರಿಗಳಲ್ಲಿ ಮತ್ತು ಪೊಲೀಸ್ ಮುಖ್ಯ ಕಚೇರಿಯಲ್ಲಿ ಕಾಣುತ್ತಿರುತ್ತವೆ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

‘ಇಂಥದ್ದೊಂದು ವ್ಯವಸ್ಥೆ ಜಾರಿಗೊಳ್ಳುತ್ತಿರುವುದು ದೇಶದಲ್ಲಿ ಇದೇ ಮೊದಲು’ ಎಂದು ಅವರು ಹೇಳಿದರು. ಸಂಕಷ್ಟಕ್ಕೆ ಸಿಲುಕಿರುವ ಮಹಿಳೆಯು ಈ ಕ್ಯಾಮೆರಾ ಎದುರು ಕೈಬೀಸಿದರೆ, ಪೊಲೀಸರಿಗೆ ತಕ್ಷಣವೇ ವಿಚಾರ ತಿಳಿಯುತ್ತದೆ.

ADVERTISEMENT

‘ಮಹಿಳೆಯರನ್ನು ಗುರಿಯಾಗಿಸಿಕೊಂಡ ಯಾವುದೇ ಅಪರಾಧ ಕೃತ್ಯ ದೆಹಲಿಯ ಬೀದಿಗಳಲ್ಲಿ ನಡೆದರೆ, ಪೊಲೀಸರಿಗೆ ತಕ್ಷಣವೇ ಮಾಹಿತಿ ರವಾನೆ ಆಗುತ್ತದೆ. ಪರಿಸ್ಥಿತಿ ಬಿಗಡಾಯಿಸುವ ಮೊದಲೇ ಪೊಲೀಸರು ಮಧ್ಯಪ್ರವೇಶ ಮಾಡಬಹುದು. ಅಪರಾಧ ಕೃತ್ಯಗಳನ್ನು ತಡೆಯುವಲ್ಲಿ ಇದು ಬಹಳ ದೊಡ್ಡ ಹೆಜ್ಜೆ’ ಎಂದರು.

ಬಹುಕೋಟಿ ವೆಚ್ಚದ ಈ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉದ್ಘಾಟಿಸುವ ನಿರೀಕ್ಷೆ ಇದೆ.

ಅಪರಾಧ ಕೃತ್ಯಗಳು ಹೆಚ್ಚಾಗಿ ನಡೆಯುವ ಸ್ಥಳಗಳನ್ನು ಗುರುತಿಸುವಂತೆ ಕೆಳ ಹಂತದ ಪೊಲೀಸ್ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ‘ನಗರದ ಪ್ರತಿ ಸ್ಥಳದಲ್ಲೂ ಕ್ಯಾಮೆರಾ ಅಳವಡಿಸಲು ಆಗುವುದಿಲ್ಲ. ಹೀಗಾಗಿ ಅಪರಾಧ ಕೃತ್ಯಗಳು ಹೆಚ್ಚಿರುವ ಸ್ಥಳ ಗುರುತಿಸಲು ಠಾಣಾಧಿಕಾರಿಗಳಿಗೆ ಹೇಳಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಪೊಲೀಸರಲ್ಲಿ ಇರುವ ದತ್ತಾಂಶವನ್ನು ಈ ವ್ಯವಸ್ಥೆಯ ಜೊತೆ ಜೋಡಿಸಲಾಗಿದೆ. ಇದರಿಂದಾಗಿ, ಶಂಕಿತರನ್ನು ಗುರುತಿಸಲು ಸಾಧ್ಯವಾಗುತ್ತದೆ. ಎ.ಐ. ಆಧಾರಿತ ಸಾಫ್ಟ್‌ವೇರ್‌ ಶಂಕಿತರ ಮುಖದಲ್ಲಿ ಆಗಿರುವ ಬದಲಾವಣೆಗಳನ್ನು ಪರಿಶೀಲಿಸಿ, ಅವರನ್ನು ಗುರುತಿಸುವ ಕೆಲಸ ಮಾಡುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.