ADVERTISEMENT

ಮಾದರಿ ಸಂಗ್ರಹ: ಸಿಡಿಎಸ್‌ಸಿಒದಿಂದ ಹೊಸ ಮಾರ್ಗಸೂಚಿ

ಔಷಧ, ಕಾಸ್ಮೆಟಿಕ್‌ಗಳ ಗುಣಮಟ್ಟದ ಮೇಲೆ ನಿಗಾ ಹೆಚ್ಚಳ ಉದ್ದೇಶ

ಪಿಟಿಐ
Published 17 ಫೆಬ್ರುವರಿ 2024, 14:12 IST
Last Updated 17 ಫೆಬ್ರುವರಿ 2024, 14:12 IST
-
-   

ನವದೆಹಲಿ(ಪಿಟಿಐ): ಮಾರುಕಟ್ಟೆಯಲ್ಲಿ ಲಭ್ಯವಿರುವ ಔಷಧಗಳು, ಕಾಸ್ಮೆಟಿಕ್‌ ಹಾಗೂ ವೈದ್ಯಕೀಯ ಉಪಕರಣಗಳ ಗುಣಮಟ್ಟ ಪರಿಶೀಲನೆಗಾಗಿ ಏಕರೂಪ ಮಾದರಿ ಸಂಗ್ರಹ ಪದ್ಧತಿ ಅನುಸರಿಸಬೇಕು ಎಂದು ತಿಳಿಸಿರುವ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಘಟನೆ (ಸಿಡಿಎಸ್‌ಸಿಒ), ಈ ಕುರಿತು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಈ ಹೊಸ ಮಾರ್ಗಸೂಚಿಗಳ ಕುರಿತು ಕಳೆದ ವಾರ ಅಧಿಸೂಚನೆ ಪ್ರಕಟಿಸಲಾಗಿದೆ.

ಪ್ರಸ್ತುತ ನಗರ ಹಾಗೂ ಪಟ್ಟಣ ಪ್ರದೇಶಗಳಿಂದ ಮಾತ್ರ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ. ಜೊತೆಗೆ, ದೊಡ್ಡ ಬ್ರ್ಯಾಂಡ್‌ಗಳ ಉತ್ಪನ್ನಗಳ ಮಾದರಿ ಮಾತ್ರ ಸಂಗ್ರಹಿಸಲಾಗುತ್ತಿದೆ. ಇದರಿಂದ, ಗ್ರಾಮೀಣ ಪ್ರದೇಶಗಳ ಗ್ರಾಹಕರು ಅಥವಾ ನಗರ ಪ್ರದೇಶದಿಂದ ದೂರ ಇರುವ ಬಳಕೆದಾರರು ಈ ಮಾದರಿ ಸಂಗ್ರಹ ವ್ಯವಸ್ಥೆಯಿಂದ ಹೊರಗುಳಿಯುತ್ತಿದ್ದಾರೆ. ಹೀಗಾಗಿ, ಗುಣಮಟ್ಟ ಪರಿಶೀಲನೆಯಲ್ಲಿ ಇಂತಹ ಬಳಕೆದಾರರ ಅಭಿಪ್ರಾಯವನ್ನು ಪರಿಗಣಿಸಲಾಗುತ್ತಿಲ್ಲ ಎಂದು ಸಿಡಿಎಸ್‌ಸಿಒ ಹೇಳಿದೆ.

ADVERTISEMENT

ಮಾದರಿಗಳ ಸಂಗ್ರಹ ಮತ್ತು ಸ್ಥಳಕ್ಕೆ ಸಂಬಂಧಿಸಿ ಯಾವುದೇ ನಿರ್ದಿಷ್ಟ ವಿಧಾನ ಈ ವರೆಗೆ ಇರಲಿಲ್ಲ. ಔಷಧ ಪರಿವೀಕ್ಷಕರು ತಮಗೆ ತೋಚಿದಂತೆ ಮಾದರಿಗಳನ್ನು ಸಂಗ್ರಹಿಸುತ್ತಿದ್ದರು ಎಂಬ ಬಗ್ಗೆಯೂ ಈ ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.

ಕೆಲ ಅಂಗಡಿಗಳಲ್ಲಿ ಗುಣಮಟ್ಟ ಇಲ್ಲದ (ಎನ್‌ಎಸ್‌ಕ್ಯೂ) ಅಥವಾ ನಕಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದುದು ಮಾದರಿಗಳ ಸಂಗ್ರಹದಿಂದ ಗೊತ್ತಾಗಿದೆ. ಇಂತಹ ಅಂಗಡಿಗಳ ಮೇಲೆ ನಿಯಮಿತವಾಗಿ ಕಣ್ಗಾವಲು ಅಗತ್ಯ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ಗುಣಮಟ್ಟವಿರದ ಔಷಧಗಳು/ಕಾಸ್ಮೆಟಿಕ್‌ಗಳ ಕುರಿತು ಕೇಂದ್ರೀಕೃತ ದತ್ತಾಂಶವನ್ನು ನಿರ್ವಹಣೆ ಮಾಡುವುದು ಹಾಗೂ ಇಂತಹ ಉತ್ಪನ್ನಗಳ ಪಟ್ಟಿಯನ್ನು ಸಂಘಟನೆಯ ಜಾಲತಾಣದಲ್ಲಿ ಪ್ರತಿ ತಿಂಗಳು ಪ್ರಕಟಿಸಬೇಕು. ಇದರಿಂದ, ನಕಲಿ/ಗುಣಮಟ್ಟವಿರದ ಉತ್ಪನ್ನಗಳ ಬಳಕೆಯನ್ನು ನಿಲ್ಲಿಸಲು ಅನುಕೂಲವಾಗಲಿದೆ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.