ADVERTISEMENT

ಅಮೆರಿಕಕ್ಕೆ ಮರಳಲಿರುವ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್‌

ಅರುಣ್‌ ಜೇಟ್ಲಿ ಫೇಸ್‌ಬುಕ್‌ ಪ್ರಕಟಣೆ

ಪಿಟಿಐ
Published 20 ಜೂನ್ 2018, 11:38 IST
Last Updated 20 ಜೂನ್ 2018, 11:38 IST
ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್‌
ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್‌   

ನವದೆಹಲಿ: ವಿತ್ತ ಸಚಿವಾಲಯದ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್‌ ಸುಬ್ರಮಣಿಯನ್‌ ತಮ್ಮ ಸ್ಥಾನ ತೊರೆದು ಅಮೆರಿಕಕ್ಕೆ ಮರಳುತ್ತಿರುವುದಾಗಿ ಕೇಂದ್ರ ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ.

’ಕೆಲವು ದಿನಗಳ ಹಿಂದೆ ಮುಖ್ಯ ಆರ್ಥಿಕ ಸಲಹೆಗಾರ(ಸಿಇಎ) ಅರವಿಂದ್‌ ಸುಬ್ರಮಣಿಯನ್‌ ವಿಡಿಯೊ ಕಾನ್ಫೆರೆನ್ಸ್‌ ಮೂಲಕ ನನ್ನೊಂದಿಗೆ ಮಾತನಾಡಿದರು. ಅವರಿಗೆ ಬಹಳ ಮುಖ್ಯವಾಗಿರುವ ವೈಯಕ್ತಿಕ ಕಾರಣಗಳಿಂದಾಗಿ ಅಮೆರಿಕಕ್ಕೆ ಮರಳಲು ನಿರ್ಧರಿಸಿದ್ದಾರೆ. ಅವರ ನಿರ್ಧಾರಕ್ಕೆ ಒಪ್ಪದ ಹೊರತು ಬೇರೆ ಆಯ್ಕೆ ಇರಲಿಲ್ಲ’ ಎಂದು ಅರುಣ್‌ ಜೇಟ್ಲಿ ಫೇಸ್‌ಬುಕ್‌ ಪುಟದಲ್ಲಿ ಬರೆದುಕೊಂಡಿದ್ದಾರೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅವರ ಮೂರು ವರ್ಷಗಳ ಸೇವಾವಧಿ ಪೂರ್ಣಗೊಂಡ ನಂತರವೂ ಸ್ಥಾನದಲ್ಲಿ ಮುಂದುವರಿಯುವಂತೆ ಜೇಟ್ಲಿ ಮನವಿ ಮಾಡಿದ್ದರು. ಆಗಲೂ ಕುಟುಂಬದ ಜವಾಬ್ದಾರಿ ಮತ್ತು ಹೆಚ್ಚು ಆತ್ಮತೃಪ್ತಿ ನೀಡುತ್ತಿರುವ ಕೆಲಸದ ನಡುವೆ ಆಯ್ಕೆಯ ಕ್ಲಿಷ್ಟತೆಯನ್ನು ಹೇಳಿಕೊಂಡಿದ್ದಾಗಿ ಪ್ರಕಟಿಸಿದ್ದಾರೆ.

ADVERTISEMENT

ಭಾರತೀಯ ಆರ್ಥಿಕತೆಯ ಬೃಹತ್‌ ಆರ್ಥಿಕತೆ ನಿರ್ವಹಣೆಯಲ್ಲಿ ಅವರ ಕೊಡುಗೆಯನ್ನು ಸ್ಮರಿಸಿರುವ ಜೇಟ್ಲಿ, ’ನಿತ್ಯವೂ ಅನೇಕ ಬಾರಿ ನನ್ನ ಭೇಟಿಗೆ ಬರುತ್ತಿದ್ದ ಅವರು ಒಳ್ಳೇಸುದ್ದಿಯನ್ನು ಅಥವಾ ಮತ್ತಾವುದೇ ವಿಷಯವನ್ನು ಮುಟ್ಟಿಸುತ್ತಿದ್ದರು. ಅವರು ಎಲ್ಲಿಯೇ ಇದ್ದರೂ ಸಲಹೆ ಮತ್ತು ವಿಶ್ಲೇಷಣೆ ಕಳುಹಿಸುವ ಭರವಸೆಯಿದೆ’ ಎಂದಿದ್ದಾರೆ.

ಮೇ ಮಧ್ಯದಲ್ಲಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗುವುದಕ್ಕೂ ಮುನ್ನ ಜೇಟ್ಲಿ ಅವರು ವಿತ್ತ ಸಚಿವರಾಗಿದ್ದರು.

2014ರ ಅಕ್ಟೋಬರ್‌ 16ರಂದು ಸುಬ್ರಮಣಿಯನ್‌ ಮುಖ್ಯ ಆರ್ಥಿಕ ಸಲಹೆಗಾರರಾಗಿ ನೇಮಕವಾಗಿದ್ದರು. 2017ರಲ್ಲಿ ಅವರ ಸೇವಾವಧಿಯನ್ನು ಒಂದು ವರ್ಷಗಳ ವರೆಗೂ ವಿಸ್ತರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.