ADVERTISEMENT

ಜನಗಣತಿಗೆ ಮುಹೂರ್ತ: ಅಧಿಸೂಚನೆ ಹೊರಡಿಸಿದ ಕೇಂದ್ರದ ವಿರುದ್ಧ ಕಾಂಗ್ರೆಸ್‌ ಟೀಕೆ

ಪಿಟಿಐ
Published 16 ಜೂನ್ 2025, 14:42 IST
Last Updated 16 ಜೂನ್ 2025, 14:42 IST
   

ನವದೆಹಲಿ: ಕೋವಿಡ್‌ ಸಾಂಕ್ರಾಮಿಕದ ನೆಪವೊಡ್ಡಿ ಆರು ವರ್ಷಗಳ ಕಾಲ ಜನಗಣತಿಯನ್ನು ಮುಂದೂಡಿದ್ದ ಕೇಂದ್ರ ಸರ್ಕಾರವು ಕೊನೆಗೂ ಈ ಪ್ರಕ್ರಿಯೆ ನಡೆಸಲು ಸೋಮವಾರ ಮುಂದಡಿ ಇಟ್ಟಿದೆ. ಸ್ವಾತಂತ್ರ್ಯ ನಂತರ ಮೊದಲ ಬಾರಿಗೆ ಜನಗಣತಿಯೊಂದಿಗೆ ಜಾತಿ ಗಣತಿಯನ್ನೂ ನಡೆಸಲು ಅಧಿಸೂಚನೆ ಹೊರಡಿಸುವ ಮೂಲಕ ಪ್ರಕ್ರಿಯೆಯನ್ನು ಅಧಿಕೃತವಾಗಿ ಪ್ರಾರಂಭಿಸಿದೆ.

‘ಭಾರತದ ಜನಗಣತಿಯನ್ನು 2027ರಲ್ಲಿ ನಡೆಸಲಾಗುವುದು ಎಂದು ಕೇಂದ್ರ ಸರ್ಕಾರ ಈ ಮೂಲಕ ಘೋಷಿಸುತ್ತದೆ’ ಎಂದು ಗೃಹ ಸಚಿವಾಲಯ ಹೊರಡಿಸಿದ ಗೆಜೆಟ್ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಜನಗಣತಿಯ ಪ್ರಕ್ರಿಯೆಗಳು 2027ರ ಮಾರ್ಚ್‌ 1ರೊಳಗೆ ಮುಕ್ತಾಯಗೊಳ್ಳಲಿವೆ. ದೇಶದಲ್ಲಿ ಮೊದಲ ಡಿಜಿಟಲ್ ಜನಗಣತಿಯಾಗಲಿರುವ ಈ ಪ್ರಕ್ರಿಯೆಯು ನಾಗರಿಕರಿಗೆ ಸ್ವಯಂ-ಗಣತಿಗೆ ಒಳಪಡಲು ಅವಕಾಶ ನೀಡುತ್ತದೆ. 

ಅಧಿಸೂಚನೆ ಹೊರಡಿಸಿದ ಕೂಡಲೇ ಕಾಂಗ್ರೆಸ್ ಪಕ್ಷವು ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದೆ. ಈ ಅಧಿಸೂಚನೆಯು ಹಿಂದಿನ ಪ್ರಕಟಣೆಗಳ ಪುನರಾವರ್ತನೆಯಾಗಿದೆ ಹಾಗೂ ಅಧಿಸೂಚನೆಯಲ್ಲಿ ಜಾತಿ ಗಣತಿಯ ಸೇರ್ಪಡೆಯ ಬಗ್ಗೆ ಪ್ರಸ್ತಾವವೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ. ‘ಇದು ಯೂ-ಟರ್ನ್‌ಗಳ 'ಉಸ್ತಾದ್'ನಿಂದ ಮತ್ತೊಂದು ಯೂ-ಟರ್ನ್ ಆಗಿದೆಯೇ ಅಥವಾ ವಿವರಗಳನ್ನು ನಂತರ ಪ್ರಕಟಿಸಲಾಗುತ್ತದೆಯೇ’ ಎಂದೂ ಪ್ರಶ್ನಿಸಿದೆ. 

ADVERTISEMENT

ಜನಗಣತಿಯ ಜೊತೆಗೆ ಜಾತಿ ಗಣತಿಯನ್ನು ಮೊದಲ ಬಾರಿಗೆ ನಡೆಸಲಾಗುವುದು ಎಂದು ಸರ್ಕಾರ ಈ ಹಿಂದೆ ಘೋಷಿಸಿತ್ತು. ‘ಅಧಿಸೂಚನೆಯಲ್ಲಿ ಜಾತಿ ಗಣತಿ ಬಗ್ಗೆ ಉಲ್ಲೇಖಿಸುವ ಅಗತ್ಯ ಇಲ್ಲ. ಜನಗಣತಿಯ ಪ್ರಶ್ನಾವಳಿಯಲ್ಲಿ ಜಾತಿಯ ಕುರಿತ ಪ್ರಶ್ನೆ ಇರುತ್ತದೆ’ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಜನಗಣತಿಯೊಂದಿಗೆ ಜಾತಿ ಎಣಿಕೆಯೂ ನಡೆಯಲಿದೆ ಎಂದು ಸರ್ಕಾರದ ಹೇಳಿಕೆ ತಿಳಿಸಿದೆ. 

2011ರಲ್ಲಿ ಕೊನೆಯ ಬಾರಿ ಗಣತಿ ನಡೆದಿತ್ತು. ಈ ಅಧಿಸೂಚನೆಯಿಂದಾಗಿ 2021ರಲ್ಲಿ ಜನಗಣತಿ ನಡೆಸಲು ಹೊರಡಿಸಲಾಗಿದ್ದ 2019ರ ಮಾರ್ಚ್‌ 26ರ ಅಧಿಸೂಚನೆ ರದ್ದಾಗಿದೆ. ಕೋವಿಡ್ -19 ಸಾಂಕ್ರಾಮಿಕವು ದೇಶವನ್ನು ಆವರಿಸಿ ಲಾಕ್‌ಡೌನ್‌ ಹೇರಿದ್ದರಿಂದ ಜನಗಣತಿಯನ್ನು ಮುಂದೂಡಲಾಗಿತ್ತು. 2021ರ ಜನಗಣತಿಯಲ್ಲಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು ಪರಿಷ್ಕರಿಸಲು ಯೋಜಿಸಲಾಗಿತ್ತು. ಆದರೆ, ಹೊಸ ಅಧಿಸೂಚನೆಯಲ್ಲಿ ಈ ಬಗ್ಗೆ ಉಲ್ಲೇಖ ಇಲ್ಲ. 

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೇಂದ್ರ ಗೃಹ ಕಾರ್ಯದರ್ಶಿ, ರಿಜಿಸ್ಟ್ರಾರ್ ಜನರಲ್ ಮತ್ತು ಭಾರತದ ಜನಗಣತಿ ಆಯುಕ್ತ ಮೃತ್ಯುಂಜಯ್ ಕುಮಾರ್ ನಾರಾಯಣ್ ಮತ್ತು ಇತರ ಹಿರಿಯ ಅಧಿಕಾರಿಗಳೊಂದಿಗೆ ಭಾನುವಾರ ಸಭೆ ನಡೆಸಿ ಜನಗಣತಿಯ ಸಿದ್ಧತೆಯನ್ನು ಪರಿಶೀಲಿಸಿದ್ದರು.

ಜನಗಣತಿ ಪ್ರಕ್ರಿಯೆ ಪ್ರಾರಂಭವಾದಾಗಿನಿಂದ ಇದು 16ನೇ ಜನಗಣತಿಯಾಗಿದ್ದು, ಸ್ವಾತಂತ್ರ್ಯ ನಂತರದ ಎಂಟನೇ ಜನಗಣತಿಯಾಗಿದೆ ಎಂದು ಸರ್ಕಾರದ ಹೇಳಿಕೆ ತಿಳಿಸಿದೆ.

‘ರಾಜ್ಯದ ಜಾತಿ ಗಣತಿ ಭಿನ್ನ’
ದಾವಣಗೆರೆ: ಕೇಂದ್ರ ಸರ್ಕಾರ ಕೇವಲ ಆಯಾ ಜಾತಿಯ ಜನರ ಸಂಖ್ಯೆಯನ್ನು ಲೆಕ್ಕ ಹಾಕುತ್ತಿದೆ. ರಾಜ್ಯ ಸರ್ಕಾರ ಜಾತಿ ಗಣತಿಯ ಜೊತೆಗೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದೆ. ಕೇಂದ್ರಕ್ಕಿಂತ ರಾಜ್ಯ ಸರ್ಕಾರ ನಡೆಸುವ ಜಾತಿ ಗಣತಿ ಭಿನ್ನವಾಗಿರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ‘ಸಾಮಾಜಿಕ ನ್ಯಾಯಕ್ಕೆ ಜಾತಿಗಳ ಸ್ಥಿತಿಗತಿ ಅರ್ಥ ಮಾಡಿಕೊಳ್ಳುವುದು ಮುಖ್ಯ. ಇದಕ್ಕೆ ಜಾತಿಗಳ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಪರಿಸ್ಥಿತಿ ಗೊತ್ತಾಗಬೇಕು. ಇಲ್ಲವಾದರೆ ಸಾಮಾಜಿಕ ನ್ಯಾಯ ನೀಡುವುದು ಕಷ್ಟ’ ಎಂದು ಸೋಮವಾರ ಇಲ್ಲಿ ಸುದ್ದಿಗಾರರಿಗೆ ಹೇಳಿದರು.
ಜಾತಿ ಜನಗಣತಿಯ ಬೇಡಿಕೆಗೆ ಪ್ರಧಾನಿ ಶರಣಾಗಲು ಕಾಂಗ್ರೆಸ್‌ನ ಹಠ ಮತ್ತು ಒತ್ತಾಯವೇ ಕಾರಣ. ಈ ಬೇಡಿಕೆಯನ್ನು ಮಂಡಿಸಿದ್ದಕ್ಕಾಗಿ ಪ್ರಧಾನಿ ಅವರು ಕಾಂಗ್ರೆಸ್ ನಾಯಕರನ್ನು ನಗರ ನಕ್ಸಲರು ಎಂದು ಕರೆದಿದ್ದರು. ಜಾತಿ ಎಣಿಕೆಗೆ ಮಾತ್ರವಲ್ಲದೆ ಸಾಮಾಜಿಕ-ಆರ್ಥಿಕ ಅಂಶಗಳ ದತ್ತಾಂಶ ಸಂಗ್ರಹಿಸಲು ಕೇಂದ್ರ ಸರ್ಕಾರವು ತೆಲಂಗಾಣ ಮಾದರಿ ಅಳವಡಿಸಿಕೊಳ್ಳಬೇಕು.
ಜೈರಾಮ್‌ ರಮೇಶ್‌, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ)

ಗಣತಿ ಯಾವಾಗ?

2026ರ ಅಕ್ಟೋಬರ್‌ 1: ಗುಡ್ಡಗಾಡು ಹಾಗೂ ಹಿಮ ಬೀಳುವ ಲಡಾಖ್‌, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡ. 

2027ರ ಮಾರ್ಚ್‌ 1: ಕರ್ನಾಟಕ ಸೇರಿದಂತೆ ಉಳಿದ ರಾಜ್ಯಗಳು

ಎರಡು ಹಂತಗಳಲ್ಲಿ ಗಣತಿ

  • ಮೊದಲ ಹಂತದಲ್ಲಿ ಮನೆ ಪಟ್ಟಿ ಕಾರ್ಯಾಚರಣೆ (ಎಚ್‌ಎಲ್‌ಒ) ನಡೆಸಲಾಗುವುದು. ಇಲ್ಲಿ ದೇಶದ ಪ್ರತಿಯೊಂದು ಕಟ್ಟಡಕ್ಕೆ ಭೇಟಿ ನೀಡಿ ಕಟ್ಟಡಗಳು ಮತ್ತು ಮನೆಗಳ ಗುಣಲಕ್ಷಣಗಳನ್ನು ದಾಖಲಿಸಲಾಗುತ್ತದೆ. ಗಣತಿದಾರರು ಮನೆಯ ಮುಖ್ಯಸ್ಥ, ಸದಸ್ಯರ ಸಂಖ್ಯೆ, ಕಟ್ಟಡದ ಬಳಕೆ (ವಸತಿ, ವಾಣಿಜ್ಯ, ಇತ್ಯಾದಿ), ಅದರ ನಿರ್ಮಾಣದಲ್ಲಿ ಬಳಸಿದ ವಸ್ತುಗಳು, ಕೊಠಡಿಗಳ ಸಂಖ್ಯೆ, ಮಾಲೀಕತ್ವದ ಸ್ಥಿತಿ, ನೀರು ಮತ್ತು ವಿದ್ಯುತ್ ಮೂಲಗಳು, ಶೌಚಾಲಯದ ಮಾದರಿ, ಅಡುಗೆಗೆ ಬಳಸುವ ಇಂಧನ ಮತ್ತು ಟಿವಿ, ಫೋನ್, ವಾಹನ ಇತ್ಯಾದಿ ಸ್ವತ್ತುಗಳ ದತ್ತಾಂಶ ಸಂಗ್ರಹಿಸುತ್ತಾರೆ. ಮೊದಲ ಹಂತವು ಮುಂದಿನ ವರ್ಷ ಏಪ್ರಿಲ್ 1ರಿಂದ ಸೆಪ್ಟೆಂಬರ್ 30ರವರೆಗೆ ನಡೆಯಲಿದೆ. 

  • ಎರಡನೇ ಹಂತದಲ್ಲಿ ಜನಸಂಖ್ಯಾ ಗಣತಿ ನಡೆಯುತ್ತದೆ. ಇಲ್ಲಿ ವೈಯಕ್ತಿಕ ದತ್ತಾಂಶಗಳ ಮೇಲೆ ಗಮನ ಕೇಂದ್ರೀಕರಿಸಲಾಗುತ್ತದೆ: ಹೆಸರು, ವಯಸ್ಸು, ಲಿಂಗ, ಹುಟ್ಟಿದ ದಿನಾಂಕ, ಮನೆಯ ಮುಖ್ಯಸ್ಥರೊಂದಿಗಿನ ಸಂಬಂಧ, ವೈವಾಹಿಕ ಸ್ಥಿತಿ, ಶಿಕ್ಷಣ, ಉದ್ಯೋಗ, ಧರ್ಮ, ಜಾತಿ/ಪಂಗಡ, ಅಂಗವೈಕಲ್ಯ ಸ್ಥಿತಿ ಮತ್ತಿತರ ಮಾಹಿತಿ ಸಂಗ್ರಹ. ಎರಡನೇ ಹಂತವು 2027ರ ಫೆಬ್ರುವರಿಯಲ್ಲಿ ನಡೆಯುವ ಸಂಭವವಿದೆ. ಆದರೆ, ಹಿಮ ಬೀಳುವ ಪ್ರದೇಶಗಳಲ್ಲಿ ಬೇರೆ ಸಮಯ ನಿಗದಿಮಾಡುವ ಸಾಧ್ಯತೆ ಇದೆ. 

ಗಣತಿದಾರರು ಮತ್ತು ಮೇಲ್ವಿಚಾರಕರಿಗೆ 2025ರ ಅಕ್ಟೋಬರ್‌ನಲ್ಲಿ ತರಬೇತಿ ಪ್ರಕ್ರಿಯೆ ಪ್ರಾರಂಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.