
ಪ್ರಧಾನಿ ನರೇಂದ್ರ ಮೋದಿ ಹಾಗೂ ಜನಗಣತಿಯ ಪ್ರಾತಿನಿಧಿಕ ಚಿತ್ರ
ನವದೆಹಲಿ: ದೇಶದಾದ್ಯಂತ ನಡೆಸಲು ಉದ್ದೇಶಿಸಿರುವ 2027ರ ಜನಗಣತಿಗೆ ₹ 11,718 ಕೋಟಿ ಅನುದಾನ ನೀಡಲು ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಮಾಧ್ಯಮದವರೊಂದಿಗೆ ಮಾತನಾಡಿರುವ ವೈಷ್ಣವ್, ಡಿಜಿಟಲ್ ತಂತ್ರಜ್ಞಾನದ ಅಳವಡಿಕೆಯೊಂದಿಗೆ ಎರಡು ಹಂತಗಳಲ್ಲಿ ಜನಗಣತಿ ನಡೆಸಲಾಗುವುದು. ಇದು ದೇಶದಲ್ಲಿ 16ನೇ ಮತ್ತು ಸ್ವಾತಂತ್ರ್ಯದ ನಂತರದ 8ನೇ ಜನಗಣತಿಯಾಗಲಿದೆ ಎಂದು ಹೇಳಿದ್ದಾರೆ.
2026ರ ಏಪ್ರಿಲ್‌ನಿಂದ ಸೆಪ್ಟೆಂಬರ್ ಅವಧಿಯಲ್ಲಿ ನಡೆಯುವ ಮೊದಲ ಹಂತದ ವೇಳೆ ಮನೆಗಳ ಗಣತಿ ಮಾಡಲಾಗುವುದು. 2027ರ ಫೆಬ್ರುವರಿಯಲ್ಲಿ ಜನರ ಗಣತಿ ಪ್ರಕ್ರಿಯೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
'2027ರ ಜನಗಣತಿಯು ಮೊದಲ ಡಿಜಿಟಲ್ ಗಣತಿಯಾಗಲಿದೆ. ದತ್ತಾಂಶ ಸಂರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಜನಗಣತಿ ಪ್ರಕ್ರಿಯೆಯ ಡಿಜಿಟಲ್ ವಿನ್ಯಾಸವನ್ನು ರೂಪಿಸಲಾಗಿದೆ' ಎಂದು ಒತ್ತಿ ಹೇಳಿದ್ದಾರೆ.
ಜನಗಣತಿ ಕಾರ್ಯದ ಜವಾಬ್ದಾರಿ ವಹಿಸಿಕೊಳ್ಳಲು ಅಗತ್ಯವಾಗಿರುವ ಅಧಿಕಾರಿಗಳ ನೇಮಕಾತಿಯನ್ನು ಜನವರಿ 15ರೊಳಗೆ ಪೂರ್ಣಗೊಳಿಸಬೇಕು ಎಂದು ಭಾರತೀಯ ನೋಂದಣಿಯ ಮಹಾನಿರ್ದೇಶನಾಲಯವು (ಆರ್‌ಜಿಐ) ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮೊನ್ನೆಯಷ್ಟೇ ನಿರ್ದೇಶನ ನೀಡಿತ್ತು.
ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು; 2026ರ ಏಪ್ರಿಲ್‌ನಿಂದ ಸೆಪ್ಟೆಂಬರ್ ವರೆಗೆ ಮನೆ ಪಟ್ಟಿ ಮತ್ತು ವಸತಿ ಗಣತಿ ಮತ್ತು 2027ರ ಫೆಬ್ರುವರಿಯಲ್ಲಿ ಜನಸಂಖ್ಯಾ ಗಣತಿ.
(ಲಡಾಖ್, ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಜನಸಂಖ್ಯಾ ಗಣತಿಯು 2026ರ ಸೆಪ್ಟೆಂಬರ್‌ನಲ್ಲಿ ನಡೆಯಲಿದೆ)
ಸುಮಾರು 30 ಲಕ್ಷ ಕ್ಷೇತ್ರ ಕಾರ್ಯಕರ್ತರು ಜನಗಣತಿಯಲ್ಲಿ ಭಾಗಿ
ದತ್ತಾಂಶ ಸಂಗ್ರಹಣೆಗಾಗಿ ಮೊಬೈಲ್ ಅಪ್ಲಿಕೇಶನ್ ಮತ್ತು ಮೇಲ್ವಿಚಾರಣಾ ಉದ್ದೇಶಕ್ಕಾಗಿ ಕೇಂದ್ರೀಯ ಪೋರ್ಟಲ್ ಬಳಸಲಾಗುತ್ತದೆ.
ಜನಗಣತಿಯನ್ನು ಯಶಸ್ವಿಯಾಗಿ ನಡೆಸಲು ಸ್ಥಳೀಯ ಮಟ್ಟದಲ್ಲಿ 18,600 ತಾಂತ್ರಿಕ ಮಾನವಶಕ್ತಿಯನ್ನು 550 ದಿನಗಳವರೆಗೆ ನಿಯೋಜಿಸಲಾಗುತ್ತದೆ. ಇದರಿಂದಾಗಿ, ಸರಿಸುಮಾರು 1.02 ಕೋಟಿ ಮಾನವ ದಿನಗಳ ಉದ್ಯೋಗ ಸೃಷ್ಟಿಯಾಗಲಿದೆ.
ಜನಸಂಖ್ಯಾ ಎಣಿಕೆಯಲ್ಲಿ ಜಾತಿ ದತ್ತಾಂಶವನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಸಂಗ್ರಹಿಸಲಾಗುತ್ತದೆ.
ಆಂಡ್ರಾಯ್ಡ್ ಮತ್ತು ಐಒಎಸ್ ಆವೃತ್ತಿಗಳಿಗೆ ಲಭ್ಯವಿರುವ ಮೊಬೈಲ್ ಅಪ್ಲಿಕೇಶನ್ ಬಳಸಿಕೊಂಡು ದತ್ತಾಂಶ ಸಂಗ್ರಹ
ಜನಗಣತಿ ಪ್ರಕ್ರಿಯೆಯನ್ನು ನೈಜ ಸಮಯದಲ್ಲಿ ನಿರ್ವಹಿಸಲು ಮತ್ತು ಮೇಲ್ವಿಚಾರಣೆ ಮಾಡಲು ‘ಜನಗಣತಿ ನಿರ್ವಹಣೆ ಮತ್ತು ಮೇಲ್ವಿಚಾರಣಾ ವ್ಯವಸ್ಥೆ (ಸಿಎಂಎಂಎಸ್)’ ಎಂಬ ಪೋರ್ಟಲ್ ಅಭಿವೃದ್ಧಿ.
ಸ್ವಯಂ-ಗಣತಿ ಮಾಡುವ ಆಯ್ಕೆಯನ್ನು ಸಾರ್ವಜನಿಕರಿಗೆ ಒದಗಿಸಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.