ADVERTISEMENT

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ‘ಈಕ್ವಿಟಿ ಸಮಿತಿ’ ಕಡ್ಡಾಯ: ಕೇಂದ್ರ ಸರ್ಕಾರ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 18:55 IST
Last Updated 15 ಜನವರಿ 2026, 18:55 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ತಾರತಮ್ಯವನ್ನು ಹೋಗಲಾಡಿಸಿ, ಸಮಾನತೆಯನ್ನು ಉತ್ತೇಜಿಸಲು ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳು ‘ಈಕ್ವಿಟಿ ಸಮಿತಿ’ಗಳನ್ನು (ಸಮಾನ ಅವಕಾಶಗಳನ್ನು ಒದಗಿಸುವ ಕೇಂದ್ರ) ಕಡ್ಡಾಯವಾಗಿ ರಚಿಸಬೇಕು ಎಂಬ ಹೊಸ ನಿಯಮವನ್ನು ಕೇಂದ್ರ ಸರ್ಕಾರ ರೂಪಿಸಿದೆ.

ವಿಶ್ವವಿದ್ಯಾಲಯ ಅನುದಾನ ಆಯೋಗದ 2026ರ ನಿಯಮಗಳಲ್ಲಿ ಈ ಸಮಿತಿ ಬಗ್ಗೆ ಮಾಹಿತಿ ಇದೆ. ಸಮಿತಿಯಲ್ಲಿ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದವರು ಮತ್ತು ವಿಕಲಚೇತನರು, ಮಹಿಳೆಯರು ಸದಸ್ಯರಾಗಿರಬೇಕು ಎಂದು ಆದೇಶಿಸಲಾಗಿದೆ. ‌

‘ನೀತಿಗಳು ಮತ್ತು ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನದ ಮೇಲ್ವಿಚಾರಣೆ ನೋಡಿಕೊಳ್ಳಲು, ಮಾರ್ಗದರ್ಶನ ನೀಡಲು ಹಾಗೂ ಶಿಕ್ಷಣ, ಆರ್ಥಿಕ, ಸಾಮಾಜಿಕ ಮತ್ತು ಇತರ ವಿಚಾರಗಳಿಗೆ ಸಂಬಂಧಿಸಿದಂತೆ ಸಮಾಲೋಚನೆ, ಕ್ಯಾಂಪಸ್‌ನಲ್ಲಿ ವೈವಿಧ್ಯ ಹೆಚ್ಚಿಸಲು ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳು ಸಮಾನ ಅವಕಾಶಗಳ ಕೇಂದ್ರವನ್ನು ತೆರೆಯಬೇಕು’ ಎಂದು ಅಧಿಸೂ‌ಚನೆಯಲ್ಲಿ ತಿಳಿಸಲಾಗಿದೆ.

ADVERTISEMENT

ಸಮಿತಿಯನ್ನು ರಚಿಸಲು ಯಾವ ಕಾಲೇಜಿನಲ್ಲಿ ಕನಿಷ್ಠ ಐವರು ಸಿಬ್ಬಂದಿ ಇರುವುದಿಲ್ಲವೋ, ಆ ಕಾಲೇಜು ಒಳಪಡುವ ವಿಶ್ವವಿದ್ಯಾಲಯದ ಸಮಿತಿಯು ಅಲ್ಲಿ ಕಾರ್ಯನಿರ್ವಹಿಸಲಿದೆ. 

ಹೊಸ ನಿಯಮದ ಉದ್ದೇಶಗಳನ್ನು ತಿಳಿಸಲು ಕೇಂದ್ರವು ನಾಗರಿಕರು, ಸ್ಥಳೀಯ ಮಾದ್ಯ‌ಮ, ಪೊಲೀಸರು‌, ಜಿಲ್ಲಾಡಳಿತ‌, ಸರ್ಕಾರೇತರ ಸಂಸ್ಥೆಗಳು, ಸಿಬ್ಬಂದಿ ಹಾಗೂ ಪೋಷಕರೊಂದಿಗೆ ಮಾತುಕತೆ ನಡೆಸಲಿದೆ ಎಂದು ತಿಳಿಸಿದೆ. 

ಜನರ ಪ್ರತಿಕ್ರಿಯೆಗಳಿಗಾಗಿ, ಕಳೆದ ವರ್ಷ ಫೆಬ್ರುವರಿಯಲ್ಲಿ ನಿಯಮಗಳ ಕರಡನ್ನು ಸಾರ್ವಜನಿಕಗೊಳಿಸಲಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.