
ಕಾರ್ಮಿಕರು
ನವದೆಹಲಿ: ಕೇಂದ್ರ ಸರ್ಕಾರವು ಕಾರ್ಮಿಕ ಕಾನೂನುಗಳನ್ನು ಸಮಗ್ರವಾಗಿ ಪರಿಷ್ಕರಿಸಿದ್ದು, ನಾಲ್ಕು ನೂತನ ಕಾರ್ಮಿಕ ಸಂಹಿತೆಗಳು ಶುಕ್ರವಾರದಿಂದ ಜಾರಿಗೆ ಬಂದಿವೆ. ಕೇಂದ್ರ ಸರ್ಕಾರವು ಈ ಕುರಿತು ಅಧಿಸೂಚನೆಯನ್ನೂ ಹೊರಡಿಸಿದೆ.
ವೇತನ ಸಂಹಿತೆ(2019), ಕೈಗಾರಿಕೆ ಸಂಪರ್ಕ ಸಂಹಿತೆ(2020), ಸಾಮಾಜಿಕ ಭದ್ರತೆ ಕುರಿತ ಸಂಹಿತೆ(2020) ಹಾಗೂ ವೃತ್ತಿ ಸುರಕ್ಷತೆ, ಆರೋಗ್ಯ ಮತ್ತು ಉದ್ಯೋಗ ಕುರಿತ ನಿಬಂಧನೆಗಳ ಸಂಹಿತೆ(2020) ಜಾರಿಗೆ ಬಂದಿವೆ.
ಈ ಮೊದಲಿನ 29 ಕಾರ್ಮಿಕ ಕಾಯ್ದೆಗಳ ಬದಲಾಗಿ ಈ ನಾಲ್ಕು ಸಂಹಿತೆಗಳು ಅನುಷ್ಠಾನಕ್ಕೆ ಬಂದಿದ್ದು, ಕಾರ್ಮಿಕರಿಗೆ ಸಂಬಂಧಿಸಿದ ವಿವಿಧ ಕಾನೂನುಗಳನ್ನು ಆಧುನಿಕ ಚೌಕಟ್ಟಿನೊಂದಿಗೆ ಈ ಸಂಹಿತೆಯಡಿ ಒಟ್ಟುಗೂಡಿಸಲಾಗಿದೆ. ಗಿಗ್ ಕಾರ್ಮಿಕರು ಸಹ ಈ ಸಂಹಿತೆ ವ್ಯಾಪ್ತಿಗೆ ಬರಲಿದ್ದಾರೆ.
ಈ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ‘ಅಧಿಸೂಚಿತ ನಾಲ್ಕು ಕಾರ್ಮಿಕ ಸಂಹಿತೆಗಳು ಅತ್ಯಂತ ಸಮಗ್ರ ಹಾಗೂ ಪ್ರಗತಿಪರವಾಗಿವೆ. ಸ್ವಾತಂತ್ರ್ಯಾ ನಂತರ ರೂಪಿಸಿರುವ ಕಾರ್ಮಿಕ ಕೇಂದ್ರಿತ ಸುಧಾರಣೆಗಳನ್ನು ಒಳಗೊಂಡಿರುವ ಈ ಸಂಹಿತೆಗಳಿಂದ ಕಾರ್ಮಿಕರ ಸಬಲೀಕರಣ ಸಾಧ್ಯವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘ಸಂಹಿತೆಯ ಪಾಲನೆ ಸರಳವಾಗಲಿದ್ದು, ಸುಲಲಿತ ವ್ಯವಹಾರವನ್ನು ಉತ್ತೇಜಿಸಲಿವೆ’ ಎಂದೂ ಹೇಳಿದ್ದಾರೆ.
‘ಈ ಸಂಹಿತೆಗಳು ವಿಶೇಷವಾಗಿ ನಾರಿಶಕ್ತಿ ಮತ್ತು ಯುವಶಕ್ತಿಗೆ ಸಾರ್ವತ್ರಿಕವಾದ ಸಾಮಾಜಿಕ ಭದ್ರತೆ, ಕನಿಷ್ಠ ಮತ್ತು ಸಕಾಲಿಕ ವೇತನ ಪಾವತಿ, ಉದ್ಯೋಗ ಸ್ಥಳಗಳಲ್ಲಿ ಸುರಕ್ಷತೆ ಹಾಗೂ ಆರ್ಥಿಕವಾಗಿ ಲಾಭದಾಯಕವಾದ ಅವಕಾಶಗಳನ್ನು ಒದಗಿಸುವುದಕ್ಕೆ ಭದ್ರ ಬುನಾದಿಯಾಗಲಿವೆ’ ಎಂದು ಮೋದಿ ಹೇಳಿದ್ದಾರೆ.
ನೂತನ ಸಂಹಿತೆಗಳ ವೈಶಿಷ್ಟ್ಯಗಳು
ಮಹಿಳೆಯರ ಹಕ್ಕುಗಳು ಹಾಗೂ ಸುರಕ್ಷತೆಗೆ ಹೆಚ್ಚು ಪ್ರಾಮುಖ್ಯ. ಅದರಲ್ಲೂ ರಾತ್ರಿ ಪಾಳಿಗಳಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರ ಕೇಂದ್ರಿತ ಸುಧಾರಣೆಗಳನ್ನು ಒಳಗೊಂಡಿವೆ
40 ವರ್ಷ ಮೇಲ್ಪಟ್ಟ ಕಾರ್ಮಿಕರಿಗೆ ವಾರ್ಷಿಕ ಉಚಿತ ಆರೋಗ್ಯ ತಪಾಸಣೆ ಸೌಲಭ್ಯ
ಅಪಾಯಕಾರಿ ಸಂಸ್ಕರಣಾ ಘಟಕಗಳಲ್ಲಿ ಕಾರ್ಯನಿರ್ವಹಿಸುವವರೂ ಸೇರಿದಂತೆ ದೇಶದಾದ್ಯಂತ ಎಲ್ಲ ಕಾರ್ಮಿಕರಿಗೆ ಇಎಸ್‌ಐ ಸೌಲಭ್ಯ
ಉದ್ಯೋಗದಾತ ಸಂಸ್ಥೆಗಳು ಎಲ್ಲ ನೌಕರರಿಗೆ ನೇಮಕಾತಿ ಪತ್ರಗಳನ್ನು ಕೊಡುವುದು ಕಡ್ಡಾಯ
ಎಲ್ಲ ವಲಯಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಕಾನೂನಿನ ಪ್ರಕಾರ ಕನಿಷ್ಠ ವೇತನ ನೀಡಬೇಕು. ಸಕಾಲಿಕ ಪಾವತಿ ಕಡ್ಡಾಯ
.
ಕಾರ್ಮಿಕ ಕಾನೂನುಗಳಲ್ಲಿ ತಂದಿರುವ ಈ ಸುಧಾರಣೆಗಳು ಉದ್ಯೋಗ ಸೃಷ್ಟಿಗೆ ಬಲ ತುಂಬಲಿವೆ. ಉತ್ಪಾದಕತೆ ಹೆಚ್ಚಿಸುವ ಮೂಲಕ ವಿಕಸಿತ ಭಾರತದತ್ತ ನಮ್ಮ ಪಯಣಕ್ಕೆ ವೇಗ ನೀಡಲಿವೆನರೇಂದ್ರ ಮೋದಿ ಪ್ರಧಾನಿ
ಈ ಸಂಹಿತೆಗಳು ಕಾರ್ಮಿಕರ ಬದುಕಿನ ಮೇಲೆ ಮಾಡಿರುವ ದಾಳಿಗಳಿದ್ದಂತೆ. ಇವುಗಳ ಜಾರಿ ಮೂಲಕ ಕಾರ್ಮಿಕರ ಎಲ್ಲ ಹಕ್ಕುಗಳನ್ನು ಕಸಿಯಲಾಗುತ್ತದೆ. ಮುಂದಿನ ಪೀಳಿಗೆಗಳ ಆಸೆ–ಆಕಾಂಕ್ಷೆಗಳು ಕಮರಿಹೋಗುತ್ತವೆಸಿಟಿಯು (ಸೆಂಟ್ರಲ್ ಟ್ರೇಡ್ ಯೂನಿಯನ್‌ಗಳು)
ಕೇಂದ್ರ ಸರ್ಕಾರ ರೂಪಿಸಿ ಅಧಿಸೂಚನೆ ಪ್ರಕಟಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳಿಗೆ ವಿಪಕ್ಷಗಳೊಂದಿಗೆ ಸಂಯೋಜನೆ ಹೊಂದಿರುವ 10 ಕಾರ್ಮಿಕ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಈ ಸಂಹಿತೆಗಳ ಅನುಷ್ಠಾನ ವಿರೋಧಿಸಿ ನವೆಂಬರ್ 26ಕ್ಕೆ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ದೇಶವ್ಯಾಪಿ ಪ್ರತಿಭಟನೆ ನಡೆಸುವುದಾಗಿ ಹೇಳಿವೆ.
ಈ ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು ಹಾಗೂ ‘ಶ್ರಮ ಶಕ್ತಿ ನೀತಿ–2025’ರ ಕರಡು ಹಿಂಪಡೆಯಬೇಕು ಎಂಬುದಾಗಿ ಒತ್ತಾಯಿಸಲಾಗುವುದು ಎಂದೂ ತಿಳಿಸಿವೆ. ನೂತನ ಕಾರ್ಮಿಕ ಸಂಹಿತೆಗಳನ್ನು ‘ನರಹತ್ಯೆಯ ದಾಳಿಗಳು’ ಹಾಗೂ ‘ದುಡಿಯುವ ವರ್ಗಗಳ ಮೇಲಿನ ಯುದ್ಧ’ ಎಂದು ಐಎನ್‌ಟಿಯುಸಿ ಎಐಟಿಯುಸಿ ಎಚ್‌ಎಂಎಸ್ ಸಿಐಟಿಯು ಎಐಯುಟಿಯುಸಿ ಟಿಯುಸಿಸಿ ಎಸ್‌ಇಡಬ್ಲುಎ ಎಐಸಿಸಿಟಿಯು ಎಲ್‌ಪಿಎಫ್ ಹಾಗೂ ಯುಟಿಯುಸಿ ಟೀಕಿಸಿವೆ.
ಈ ಕುರಿತು ಜಂಟಿ ಹೇಳಿಕೆ ಬಿಡುಗಡೆ ಮಾಡಿರುವ ಈ ಸಂಘಟನೆಗಳು‘ಕಾರ್ಮಿಕ ವಿರೋಧಿ ಹಾಗೂ ಉದ್ಯೋಗದಾತರ ಪರವಾದ ಈ ಸಂಹಿತೆಗಳನ್ನು ಏಕಪಕ್ಷೀಯವಾಗಿ ಜಾರಿಗೊಳಿಸಿರುವುದು ಖಂಡನೀಯ’ ಎಂದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.