ADVERTISEMENT

‘ಸೆಂಟ್ರಲ್‌ ವಿಸ್ತಾ’ದಿಂದ ವಾರ್ಷಿಕ ₹ 1000 ಕೋಟಿ ಬಾಡಿಗೆ ಉಳಿತಾಯ: ಕೇಂದ್ರ

​ಪ್ರಜಾವಾಣಿ ವಾರ್ತೆ
Published 7 ಜೂನ್ 2021, 14:50 IST
Last Updated 7 ಜೂನ್ 2021, 14:50 IST
‘ಸೆಂಟ್ರಲ್‌ ವಿಸ್ತಾ’ ನೀಲನಕ್ಷೆ
‘ಸೆಂಟ್ರಲ್‌ ವಿಸ್ತಾ’ ನೀಲನಕ್ಷೆ   

ನವದೆಹಲಿ: ಸೆಂಟ್ರಲ್ ವಿಸ್ತಾ ಯೋಜನೆಗೆ ವ್ಯಕ್ತವಾಗಿರುವ ತೀವ್ರ ಟೀಕೆ, ವಿರೋಧದ ನಡುವೆಯು, ಉದ್ದೇಶಿತ ಯೋಜನೆಯಿಂದ ವಾರ್ಷಿಕ ₹ 1000 ಕೋಟಿಯಷ್ಟು ಬಾಡಿಗೆ ಮೊತ್ತ ಉಳಿತಾಯವಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಸದ್ಯ, ವಿವಿಧ ಸರ್ಕಾರಿ ಕಚೇರಿಗಳಿಗೆ ಬಾಡಿಗೆ ನೀಡಲಾಗುತ್ತಿದೆ. ಬಾಡಿಗೆ ಕಟ್ಟಡದಲ್ಲಿರುವ ವಿವಿಧ ಕಚೇರಿಗಳನ್ನು ವಿಸ್ತಾ ನಿರ್ಮಾಣದ ಬಳಿಕ ನೂತನ ಸಂಕೀರ್ಣಕ್ಕೆ ಸ್ಥಳಾಂತರಿಸಲಾಗುತ್ತದೆ ಎಂದು ನಗರಾಭಿವೃದ್ಧಿ ವ್ಯವಹಾರಗಳ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೇಂದ್ರದ ವಿವಿಧ ಕಚೇರಿಗಳು ವಿವಿಧ ಸ್ಥಳಗಳಲ್ಲಿ ಬಾಡಿಗೆ ಕಟ್ಟಡದಲ್ಲಿವೆ. ಸೆಂಟ್ರಲ್‌ ವಿಸ್ತಾ ಸಂಕೀರ್ಣ ನಿರ್ಮಾಣ ಪೂರ್ಣಗೊಂಡ ಬಳಿಕ ಒಂದೇ ಚಾವಣಿಯಡಿ ಈ ಕಚೇರಿಗಳು ಬರಲಿದೆ. ಇದರಿಂದ ಹಣ ಉಳಿತಾಯದ ಜೊತೆಗೆ, ಸಮನ್ವಯತೆಗೂ ಸಹಕಾರಿಯಾಗಲಿದೆ ಎಂದು ಹೇಳಿದರು.

ADVERTISEMENT

ಸೆಂಟ್ರಲ್ ವಿಸ್ತಾ ಸಂಕೀರ್ಣವು ನೂತನ ಸಂಸತ್‌ ಕಟ್ಟಡ, ಸಂಸದರ ಕಚೇರಿಗಳು, ಸೆಂಟ್ರಲ್‌ ವಿಸ್ತಾ ಅವಿನ್ಯೂ (ರಾಜಪಥ) ನವೀಕರಣ, ಉಪ ರಾಷ್ಟ್ರಪತಿ ಮತ್ತು ಪ್ರಧಾನಿಯವರ ನೂತನ ನಿವಾಸ, ಪರಸ್ಪರ ಸಂಪರ್ಕವುಳ್ಳ ಸಚಿವಾಲಯ ಕಟ್ಟಡ ಒಳಗೊಂಡಿದೆ. ನಿರ್ಮಾಣಕ್ಕೆ ಪೂರಕವಗಿ ರಾಜಪಥದ ಉಭಯ ಬದಿಯಲ್ಲಿ ಕೆಲವು ಕಟ್ಟಡಗಳನ್ನು ನೆಲಸಮಗೊಳಿಸಲಾಗುತ್ತದೆ.

ಸದ್ಯ, ಎರಡು ನಿರ್ಮಾಣ ಚಟುವಟಿಕೆಗಳು ಅಂದರೆ ನೂತನ ಸಂಸತ್ ಕಟ್ಟಡ ಮತ್ತು ಸೆಂಟ್ರಲ್ ವಿಸ್ತಾ ಅವಿನ್ಯೂ ಪ್ರಗತಿಯಲ್ಲಿವೆ. ಸಚಿವಾಲಯ ಮೂಲಗಳ ಪ್ರಕಾರ, ಒಟ್ಟಾರೆ ಯೋಜನಾ ವೆಚ್ಚ ₹ 20,000 ಕೋಟಿಯಾಗಿದ್ದು, 2026ಕ್ಕೆ ಪೂರ್ಣಗೊಳಿಸುವ ಗುರಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.