ADVERTISEMENT

ಮೂಲಸೌಕರ್ಯ ಯೋಜನೆಗಳ ವ್ಯಾಜ್ಯಕ್ಕಾಗಿ ವಿಶೇಷ ನ್ಯಾಯಾಲಯ ಸ್ಥಾಪಿಸಲು ಕೇಂದ್ರ ಸೂಚನೆ

ಪಿಟಿಐ
Published 20 ಡಿಸೆಂಬರ್ 2020, 11:36 IST
Last Updated 20 ಡಿಸೆಂಬರ್ 2020, 11:36 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ‘ಮೂಲಸೌಕರ್ಯ ಯೋಜನೆ ಒಪ್ಪಂದಗಳಿಗೆ ಸಂಬಂಧಿಸಿದ ವ್ಯಾಜ್ಯಗಳನ್ನು ತ್ವರಿತವಾಗಿ ಪರಿಹರಿಸುವ ಸಲುವಾಗಿ ಎರಡು ವರ್ಷಗಳ ಹಿಂದೆ ಕಾನೂನಿಗೆ ತಿದ್ದುಪಡಿ ತರಲಾಗಿದ್ದು, ಅದರ ಅಡಿಯಲ್ಲಿ ವಿಶೇಷ ನ್ಯಾಯಾಲಯ ಸ್ಥಾಪಿಸಲು ಒತ್ತು ನೀಡಬೇಕು’ ಎಂದು ಕೇಂದ್ರ ಕಾನೂನು ಸಚಿವಾಲಯವು ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.

‘ದೇಶ ಹಾಗೂ ರಾಜ್ಯಗಳಲ್ಲಿ ಸುಲಲಿತ ವ್ಯವಹಾರ ನಡೆಸಲು ಇದು ಸಹಕಾರಿ’ ಎಂದು ಸಚಿವಾಲಯ ತಿಳಿಸಿದೆ.

ಕರ್ನಾಟಕ, ಅಲಹಾಬಾದ್‌ ಹಾಗೂ ಮಧ್ಯಪ್ರದೇಶ ಹೈಕೋರ್ಟ್‌ಗಳಂತೆ ಇತರ ರಾಜ್ಯಗಳಲ್ಲೂ ಮೂಲಸೌಕರ್ಯ ಯೋಜನೆಗೆ ಸಂಬಂಧಿಸಿದ ದಾವೆಗಳ ಶೀಘ್ರ ಇತ್ಯರ್ಥಕ್ಕಾಗಿ ವಿಶೇಷ ದಿನವನ್ನು ನಿಗದಿಪಡಿಸಬೇಕೆಂದೂ ಸಚಿವಾಲಯ ನಿರ್ದೇಶಿಸಿದೆ.

ADVERTISEMENT

ಈ ಸಂಬಂಧ ಕಾನೂನು ಸಚಿವಾಲಯದ ಕಾರ್ಯದರ್ಶಿಯವರು (ನ್ಯಾಯ) ಹೋದ ವಾರ ಎಲ್ಲಾ ಹೈಕೋರ್ಟ್‌ಗಳ ರಿಜಿಸ್ಟ್ರಾರ್‌ ಜನರಲ್‌ಗಳಿಗೆ ಪತ್ರ ಬರೆದಿದ್ದಾರೆ.

2018ರ ನಿರ್ದಿಷ್ಟ ಪರಿಹಾರ (ತಿದ್ದುಪಡಿ) ಕಾಯ್ದೆಯ ಸೆಕ್ಷನ್‌ 20–ಬಿ ಪ್ರಕಾರ ರಾಜ್ಯ ಸರ್ಕಾರಗಳು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಸಲಹೆ ಪಡೆದು ಒಂದು ಅಥವಾ ಅದಕ್ಕಿಂತ ಹೆಚ್ಚಿನ ಸಿವಿಲ್‌ ನ್ಯಾಯಾಲಯಗಳನ್ನು ವಿಶೇಷ ನ್ಯಾಯಾಲಯಗಳೆಂದು ನಿಯೋಜಿಸಬಹುದಾಗಿದೆ.

‘ವಿಶೇಷ ನ್ಯಾಯಾಲಯಗಳು ಅಸ್ತಿತ್ವಕ್ಕೆ ಬರುವವರೆಗೂ ಕರ್ನಾಟಕ ಹಾಗೂ ಅಲಹಾಬಾದ್‌ ಹೈಕೋರ್ಟ್‌ಗಳ ರೀತಿ ಇತರರು ವಿಶೇಷ ದಿನ ನಿಗದಿಪಡಿಸಿ ಮೂಲಸೌಕರ್ಯ ಯೋಜನೆಗೆ ಸಂಬಂಧಿಸಿದ ವ್ಯಾಜ್ಯಗಳನ್ನು ಇತ್ಯರ್ಥಪಡಿಸಲು ಪ್ರಯತ್ನಿಸಬೇಕು. ಇದರಿಂದ ಯೋಜನೆಗಳನ್ನು ಬೇಗನೆ ಅನುಷ್ಠಾನಗೊಳಿಸಲು ಅನುವಾಗುತ್ತದೆ. ಕಾಲಹರಣವಾಗುವುದನ್ನು ತಪ್ಪಿಸುವ ಜೊತೆಗೆ ಅನಗತ್ಯ ವೆಚ್ಚಕ್ಕೂ ಕಡಿವಾಣ ಹಾಕಬಹುದು. ಆ ಮೂಲಕ ಹೂಡಿಕೆದಾರರನ್ನು ಆಕರ್ಷಿಸಬಹುದಾಗಿದೆ’ ಎಂದೂ ಪತ್ರದಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.