ADVERTISEMENT

ಸರ್ಕಾರಿ ಶಾಲೆಗಳ ಗುಣಮಟ್ಟ ತಿಳಿಯಲು ಶೀಘ್ರ ಸಮೀಕ್ಷೆ

ದೇಶದಾದ್ಯಂತ 12 ಲಕ್ಷ ಶಾಲೆಗಳಲ್ಲಿ ‘ಶಗುನೋತ್ಸವ್‌’ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2019, 19:28 IST
Last Updated 4 ಜೂನ್ 2019, 19:28 IST

ನವದೆಹಲಿ: ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಲಭ್ಯವಿರುವ ಮೂಲಸೌಕರ್ಯಗಳ ಕುರಿತು ಸಮಗ್ರ ಮಾಹಿತಿ ಪಡೆಯಲು ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ಸಮೀಕ್ಷೆ ನಡೆಸಲಿದೆ. 12 ಲಕ್ಷ ಶಾಲೆಗಳಲ್ಲಿ ಈ ಕಾರ್ಯ ನಡೆಯಲಿದೆ.

‘ಶಗುನೋತ್ಸವ್‌’ ಹೆಸರಿನಲ್ಲಿ ದೇಶದಾದ್ಯಂತ ಸಮೀಕ್ಷೆ ನಡೆಯಲಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ರಾಜ್ಯಗಳು ಸಲ್ಲಿಸಿರುವ ಅಂಕಿ ಅಂಶಗಳ ಸತ್ಯಾಸತ್ಯತೆಯನ್ನು ಅರಿಯುವ ಉದ್ದೇಶ ಈ ಸಮೀಕ್ಷೆಯದ್ದಾಗಿದೆ. ಈ ಗಣತಿಯಲ್ಲಿ ಲಭ್ಯವಾಗುವ ಅಂಕಿ ಅಂಶಗಳನ್ನು ಆಧರಿಸಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶ್ರೇಣೀಕರಣ ಕಾರ್ಯವೂ ನಡೆಯಲಿದೆ. ಬಹುತೇಕ ಸೆಪ್ಟೆಂಬರ್ ತಿಂಗಳಿನಲ್ಲಿ ಸಮೀಕ್ಷೆ ನಡೆಯಲಿದೆ.

ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 11,85,227 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಈ ಪ್ರಕ್ರಿಯೆ ನಡೆಯಲಿದೆ. ಇವುಗಳ ಪೈಕಿ 10,74,911 ಶಾಲೆಗಳು ಗ್ರಾಮೀಣ ಪ್ರದೇಶದಲ್ಲಿವೆ.

ADVERTISEMENT

‘ಶಾಲೆಗಳಿಗೆ ಸಂಬಂಧಿಸಿದಂತೆ ಸಂಗ್ರಹಿಸಲಾಗುವ ಅಂಕಿ ಅಂಶ ಆಧರಿಸಿ ಲಭ್ಯವಿರುವ ಶಿಕ್ಷಣದ ಗುಣಮಟ್ಟ ಮತ್ತು ಮೂಲಸೌಕರ್ಯಗಳನ್ನು ಅಂದಾಜಿಸಲಾಗುತ್ತದೆ. ಸ್ಥಳಕ್ಕೆ ಭೇಟಿ ನೀಡದೇ ಮಾಹಿತಿಯ ದೃಢೀಕರಣ ಅಸಾಧ್ಯ. ಈ ಕಾರಣದಿಂದಲೇ ಸಮೀಕ್ಷೆ ನಡೆಸಲಾಗುತ್ತಿದೆ’ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.

ಸಮಾರು 73 ಸಾವಿರ ಜನರನ್ನು ಸಮೀಕ್ಷೆ ಕಾರ್ಯಕ್ಕೆ ನಿಯೋಜಿಸಲಾಗುತ್ತದೆ. ಈ ಪ್ರಕ್ರಿಯೆಗಾಗಿ ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ನೋಡಲ್‌ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದಲ್ಲಿ ಸಂಯೋಜಕರನ್ನು ನಿಯೋಜಿಸಲಾಗುವುದು. ಇಡೀ ಪ್ರಕ್ರಿಯೆಯ ನಿರ್ವಹಣೆಗೆ ಕೇಂದ್ರ ಮತ್ತು ರಾಜ್ಯಗಳ ಮಟ್ಟದಲ್ಲಿ ನಿರ್ವಹಣಾ ಘಟಕಗಳನ್ನು ಸ್ಥಾಪಿಸಲಾಗುತ್ತದೆ. ಈ ಕುರಿತು ಸಚಿವಾಲಯವು ಈಗಾಗಲೇ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಧಿಕಾರಿಗಳ ಜೊತೆಗೆ ಚರ್ಚಿಸಿ ನೀಲನಕ್ಷೆ ರೂಪಿಸಿದೆ ಎಂದು ತಿಳಿದುಬಂದಿದೆ.

ಸಮೀಕ್ಷೆ ಕಾರ್ಯದಲ್ಲಿ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ (ಡಯಟ್‌) ಸಿಬ್ಬಂದಿ, ತರಬೇತಿ ನಿರತರು ಹಾಗೂ ರಾಜ್ಯಗಳ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಸಂಸ್ಥೆಗಳ (ಎಸ್‌ಸಿಇಆರ್‌ಟಿ) ಸಿಬ್ಬಂದಿ ಪಾಲ್ಗೊಳ್ಳುವರು.

ಶಿಕ್ಷಕರು, ಪ್ರಾಂಶುಪಾಲರು, ಹಾಗೂ ಶಾಲೆಯ ಇತರೆ ಸಿಬ್ಬಂದಿಯನ್ನು ಈ ಕೆಲಸಕ್ಕೆ ನಿಯೋಜಿಸುವುದಿಲ್ಲ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು.

ಆನ್‌ಲೈನ್‌ ಮೂಲಕ ಅಂಕಿ ಅಂಶಗಳ ಕ್ರೋಡೀಕರಣ ಹಾಗೂ ವರ್ಗೀಕರಣ ಕಾರ್ಯಕ್ಕೆ ಪೂರಕವಾಗಿ ಈಗಾಗಲೇ ಮೊಬೈಲ್‌ ಅಪ್ಲಿಕೇಷನ್ ಅನ್ನೂ ಅಭಿವೃದ್ಧಿಪಡಿಸಲಾಗಿದೆ. ತರಬೇತಿ ಕಾರ್ಯಕ್ಕೆ ಚಾಲನೆ ನೀಡುವ ಮುನ್ನ, ನಿಯೋಜಿಸಲಾಗುವ ಸಿಬ್ಬಂದಿಗೆ ತರಬೇತಿಯನ್ನು ನೀಡಲಾಗುತ್ತದೆ. ಸಿಬ್ಬಂದಿಗೆ ಒಂದು ತಿಂಗಳು ಅನಿಯಮಿತ ಇಂಟರ್‌ನೆಟ್‌ ಸಂಪರ್ಕ ಪಡೆಯಲು ಡಾಟಾ ಪ್ಯಾಕೇಜ್‌ ವೆಚ್ಚ, ಗೌರವಧನ ನೀಡಲಾಗುವುದು.

‘ಶಾಲೆಗಳಲ್ಲಿನ ಶೈಕ್ಷಣಿಕ ಗುಣಮಟ್ಟ ಮತ್ತು ಮೂಲಸೌಕರ್ಯಗಳ ಲಭ್ಯತೆ ಕುರಿತಂತೆ ಸಮೀಕ್ಷೆಯಲ್ಲಿ ಲಭ್ಯವಾಗುವ ಮಾಹಿತಿ, ಅಂಕಿ ಅಂಶಗಳು ಅಂತಿಮವಾಗಿ ಪರಿಣಾಮಕಾರಿ ನೀತಿ ರೂಪಿಸಲು ಸರ್ಕಾರಕ್ಕೆ ನೆರವಾಗಲಿದೆ’ ಎಂದು ಅಧಿಕಾರಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.