ADVERTISEMENT

ಕೇಂದ್ರ ನೌಕರರ ಡಿ.ಎ: ಶೇ 4ರಷ್ಟು ಹೆಚ್ಚಳ

ಪಿಟಿಐ
Published 7 ಮಾರ್ಚ್ 2024, 16:10 IST
Last Updated 7 ಮಾರ್ಚ್ 2024, 16:10 IST
   

ನವದೆಹಲಿ: ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ (ಡಿಎ) ಹಾಗೂ ತುಟ್ಟಿ ಪರಿಹಾರವನ್ನು (ಡಿಆರ್‌) ಕೇಂದ್ರ ಸರ್ಕಾರ ಶೇ 4ರಷ್ಟು ಹೆಚ್ಚಿಸಿದೆ. ಇದರಿಂದ, ಈ ಮೊದಲು ಮೂಲ ವೇತನದ ಶೇ 46ರಷ್ಟಿದ್ದ ತುಟ್ಟಿ ಭತ್ಯೆ ಶೇ 50ಕ್ಕೆ ಏರಿದಂತಾಗುತ್ತದೆ.

ಈ ವರ್ಷದ ಜನವರಿ 1ರಿಂದಲೇ ಇದು ಅನ್ವಯವಾಗಲಿವೆ. ಕೇಂದ್ರದ ಈ ನಿರ್ಧಾರದಿಂದಾಗಿ ಲೋಕಸಭಾ ಚುನಾವಣೆಗೂ ಮುನ್ನ 49.15 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 67.95 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ.

ಡಿಎ ಮತ್ತು ಡಿಆರ್‌ ಹೆಚ್ಚಳದಿಂದ ಬೊಕ್ಕಸಕ್ಕೆ ವಾರ್ಷಿಕವಾಗಿ ₹12,869 ಕೋಟಿ ಹೊರೆಯಾಗಲಿದೆ. 2024ರ ಜನವರಿಯಿಂದ ಫೆಬ್ರುವರಿ 2025ರವರೆಗೆ ₹15,014 ಕೋಟಿ ವ್ಯಯವಾಗಲಿದೆ ಎಂದು ಸಂಪುಟ ಸಭೆಯ ಬಳಿಕ ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ಮಾಹಿತಿ ನೀಡಿದರು.

ADVERTISEMENT

ಡಿಎ ಹೆಚ್ಚಳದೊಂದಿಗೆ ಸಾರಿಗೆ, ಕ್ಯಾಂಟಿನ್‌, ನಿಯೋಜಿತ ಭತ್ಯೆಗಳನ್ನು ಶೇ 25ರಷ್ಟು ಹೆಚ್ಚಿಸಲಾಗಿದೆ. ಮನೆ ಬಾಡಿಗೆ ಭತ್ಯೆಯನ್ನು ಮೂಲ ವೇತನದ ಶೇ 27, ಶೇ 19 ಮತ್ತು ಶೇ 9ರಿಂದ ಕ್ರಮವಾಗಿ ಶೇ 30, ಶೇ 20 ಮತ್ತು ಶೇ 10ಕ್ಕೆ ಏರಿಸಲಾಗಿದೆ.

ಗ್ರಾಚ್ಯುಟಿ ಅಡಿಯಲ್ಲಿನ ಪ್ರಯೋಜನಗಳನ್ನು ಶೇ 25ರಷ್ಟು ಹೆಚ್ಚಿಸಲಾಗಿದೆ. ಅದನ್ನು ಹಿಂದಿದ್ದ ₹ 20 ಲಕ್ಷದಿಂದ ₹ 25 ಲಕ್ಷಕ್ಕೆ ಹೆಚ್ಚಿಸಲಾಗಿದೆ. ವಿವಿಧ ಭತ್ಯೆಗಳ ಹೆಚ್ಚಳದಿಂದ ಬೊಕ್ಕಸಕ್ಕೆ ವಾರ್ಷಿಕವಾಗಿ ₹ 9,400 ಕೋಟಿ ಹೊರೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.