ADVERTISEMENT

ನೀಟ್‌: ಇಡಬ್ಲ್ಯೂಎಸ್‌ ಆದಾಯಮಿತಿ ಪರಿಷ್ಕರಣೆಗೆ ಸಮಿತಿ ರಚನೆ –ಕೇಂದ್ರ ಸರ್ಕಾರ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2021, 14:18 IST
Last Updated 25 ನವೆಂಬರ್ 2021, 14:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸ್ನಾತಕೋತ್ತರ ವೈದ್ಯಕೀಯ (ಪಿ.ಜಿ) ಕೋರ್ಸ್‌ಗೆ ‘ನೀಟ್’ ಮೂಲಕ ಪ್ರವೇಶಾತಿಗೆ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ (ಇಡಬ್ಲ್ಯೂಎಸ್‌) ನಿಗದಿಪಡಿಸಿರುವ ವಾರ್ಷಿಕ ₹ 8 ಲಕ್ಷ ಆದಾಯ ಮಿತಿಯನ್ನು ನಾಲ್ಕು ವಾರಗಳ ಅವಧಿಯಲ್ಲಿ ಪರಿಷ್ಕರಿಸಲಾಗುವುದು ಎಂದು ಕೇಂದ್ರ ಸರ್ಕಾರ ಗುರುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ಸೂರ್ಯಕಾಂತ್, ವಿಕ್ರಂ ನಾಥ್ ಅವರಿದ್ದ ಪೀಠಕ್ಕೆ ಈ ಮಾಹಿತಿ ನೀಡಿದ ಸಾಲಿಸಿಟರ್‌ ಜನರಲ್‌ ತುಷಾರ್ ಮೆಹ್ತಾ ಅವರು, ‘ಆದಾಯ ಮಿತಿ ಮಾನದಂಡ ಪರಿಷ್ಕರಿಸಲು ಸಮಿತಿ ರಚಿಸಲಾಗುವುದು’ ಎಂದು ತಿಳಿಸಿದರು.

‘ಪಿ.ಜಿ ಕೌನ್ಸೆಲಿಂಗ್‌ ಪ್ರಕ್ರಿಯೆಯನ್ನು ಅಲ್ಲಿಯವರೆಗೂ ಮುಂದೂಡಲಾಗುವುದು’ ಎಂದೂ ತಿಳಿಸಿದರು. ಈ ಹಂತದಲ್ಲಿ ಪೀಠವು, ಶೈಕ್ಷಣಿಕ ವರ್ಷ ವಿಳಂಬವಾಗುವ ಕಾರಣ ಮೀಸಲಾತಿ ಪರಿಷ್ಕರಣೆಯನ್ನು ಮುಂದಿನ ವರ್ಷದಿಂದ ಜಾರಿಗೊಳಿಸಬಹುದು’ ಎಂದು ಸಲಹೆ ಮಾಡಿತು. ಇದಕ್ಕೆ ‘ತಾವು ಸರ್ಕಾರದಿಂದ ಸೂಚನೆ ಪಡಯಬೇಕಿದೆ’ ಎಂದು ಮೆಹ್ತಾ ಪ್ರತಿಕ್ರಿಯಿಸಿದರು.

ADVERTISEMENT

‘ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವುದು ಪ್ರಗತಿಪರ ಮತ್ತು ಪ್ರಾಯೋಗಿಕವಾದುದು. ಆದರೆ, ಇದರ ಸ್ವರೂಪ ಯಾವ ರೀತಿ ಇರಬೇಕು ಎಂಬುದೇ ಈಗಿರುವ ಪ್ರಶ್ನೆ’ ಎಂದೂ ಪೀಠ ಅಭಿ‍ಪ್ರಾಯಪಟ್ಟಿತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಅರವಿಂದ ದಾತಾರ್ ಅವರು, ಮಾಸಿಕ ₹ 70 ಸಾವಿರ ಆದಾಯ ಉಳ್ಳವರನ್ನು ಇಡಬ್ಲ್ಯೂಎಸ್‌ ಎಂದು ಗುರುತಿಸಬಹುದೇ ಎಂಬ ಪ್ರಶ್ನೆಯೂ ಇದೆ ಎಂದು ಅಹವಾಲು ಸಲ್ಲಿಸಿದರು.

ಇದನ್ನು ಜನವರಿ ತಿಂಗಳಲ್ಲಿ ವಿಚಾರಣೆಗೆ ತೆಗೆದುಕೊಳ್ಳಲಾಗುವುದು ಎಂದು ಪೀಠವು ತಿಳಿಸಿತು.

ಅಖಿಲ ಭಾರತ ಕೋಟಾ ಸೀಟುಗಳಿಗೆ ಒಬಿಸಿ ಮತ್ತು ಇಡಬ್ಲ್ಯೂಎಸ್‌ ವರ್ಗದ ಮೀಸಲಾತಿ ಸಿಂಧುತ್ವ ಕುರಿತು ತೀರ್ಮಾನ ಕೈಗೊಳ್ಳುವವರೆಗೂ ನೀಟ್‌–ಪಿ.ಜಿ ಕೌನ್ಸೆಲಿಂಗ್ ಮುಂದೂಡಬೇಕು ಎಂದು ಕೋರ್ಟ್‌ ಅ. 25ರಂದು ಕೇಂದ್ರಕ್ಕೆ ನಿರ್ದೇಶಿಸಿತ್ತು.

ಇಡಬ್ಲ್ಯೂಎಸ್‌ ವರ್ಗಕ್ಕೆ ಮೀಸಲಾತಿ ಕಲ್ಪಿಸಲು ವಾರ್ಷಿಕ ₹ 8 ಲಕ್ಷ ಆದಾಯ ಮಿತಿ ನಿಗದಿಪಡಿಸಲಾಗಿದೆ. ಇದೇ ಮಾನದಂಡವನ್ನು ಒಬಿಸಿಯ ಮೇಲ್ಪದರ ವರ್ಗಕ್ಕೂ ಸರ್ಕಾರ ಅನುಸರಿಸಿರುವುದನ್ನು ಕೋರ್ಟ್‌ ಅಂದು ಪ್ರಶ್ನಿಸಿತ್ತು.

ಈ ಮೊದಲು ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡು ಪ್ರಮಾಣಪತ್ರ ಸಲ್ಲಿಸಿದ್ದ ಕೇಂದ್ರ ಸರ್ಕಾರವು, ವಿವಿಧ ರಾಜ್ಯಗಳಲ್ಲಿರುವ ಭಿನ್ನ ಆರ್ಥಿಕ ಸ್ಥಿತಿಗತಿಯನ್ನು ಆಧಾರವಾಗಿಟ್ಟುಕೊಂಡು ಈ ಬಗ್ಗೆ ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿತ್ತು.

ಒಬಿಸಿ ಮತ್ತು ಇಡಬ್ಲ್ಯೂಎಸ್‌ ವರ್ಗದ ಮೀಸಲಾತಿ ಕುರಿತು ಕೇಂದ್ರದ ನಿಲುವನ್ನು ನೀಲ್‌ ಅರೆಲಿಯೊ ನ್ಯೂನ್ಸ್‌ ಮತ್ತು ಇತರರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.