ಸುಪ್ರೀಂ ಕೋರ್ಟ್
ನವದೆಹಲಿ: ಬರ ಪರಿಸ್ಥಿತಿ ನಿರ್ವಹಣೆಗೆ ರಾಷ್ಟ್ರೀಯ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಿಂದ (ಎನ್‌ಡಿಆರ್‌ಎಫ್) ಹಣ ಬಿಡುಗಡೆ ಕುರಿತ ವಿವಾದವನ್ನು ಕೇಂದ್ರ ಮತ್ತು ಕರ್ನಾಟಕ ಸರ್ಕಾರಗಳೇ ಬಗೆಹರಿಸಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಅವರು, ಈ ಕುರಿತು ಪ್ರತಿಕ್ರಿಯೆ ದಾಖಲಿಸಲು ಕೆಲ ಸಮಯ ಬೇಕು ಎಂದು ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರಿದ್ದ ಪೀಠಕ್ಕೆ ತಿಳಿಸಿದರು.
‘ನೀವೇ ಬಗೆಹರಿಸಿಕೊಳ್ಳಬೇಕು’ ಎಂದು ಈ ಸಂದರ್ಭದಲ್ಲಿ ಪೀಠ ಅಭಿಪ್ರಾಯಪಟ್ಟಿತು.
ಎನ್‌ಡಿಆರ್‌ಎಫ್‌ನಿಂದ ಹಣ ಬಿಡುಗಡೆ ಕುರಿತು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದೆ.
‘ಇದುವರೆಗೂ ಎಷ್ಟು ಹಣ ಬಿಡುಗಡೆ ಮಾಡಲಾಗಿದೆ’ ಎಂದು ಪೀಠ ಪ್ರಶ್ನಿಸಿತು. ಕರ್ನಾಟಕವನ್ನು ಪ್ರತಿನಿಧಿಸಿದ್ದ ವಕೀಲರು, ‘ಕರ್ನಾಟಕವು ₹18,171 ಕೋಟಿ ಬಿಡುಗಡೆಗೆ ಮನವಿ ಸಲ್ಲಿಸಿದೆ. ಕೇಂದ್ರ ₹3,819 ಕೋಟಿ ಬಿಡುಗಡೆ ಮಾಡಿದೆ’ ಎಂದರು.
ಈ ಕುರಿತ ವಿಚಾರಣೆಯನ್ನು ಪೀಠವು ಜನವರಿ ತಿಂಗಳಿಗೆ ಮುಂದೂಡಿತು. ಏಪ್ರಿಲ್ 29ರಂದು ವಿಚಾರಣೆ ವೇಳೆ ಕರ್ನಾಟಕದಲ್ಲಿ ಬರಪರಿಸ್ಥಿತಿ ನಿರ್ವಹಣೆಗೆ ಒಟ್ಟು ₹3,400 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿತ್ತು.
ಬರ ಪರಿಸ್ಥಿತಿ ನಿರ್ವಹಣೆಗೆ ಎನ್‌ಡಿಆರ್‌ಎಫ್‌ನಿಂದ ಪೂರ್ಣ ಆರ್ಥಿಕ ನೆರವು ಬಿಡುಗಡೆ ಮಾಡದ ಕೇಂದ್ರ ನಿಲುವು ಸಂವಿಧಾನದ ವಿಧಿ 14 ಮತ್ತು 21 ಅನ್ವಯ ರಾಜ್ಯದ ಜನರ ಮೂಲಭೂತ ಹಕ್ಕಿನ ಉಲ್ಲಂಘನೆ ಎಂದು ಕರ್ನಾಟಕ ತನ್ನ ಅರ್ಜಿಯಲ್ಲಿ ಪ್ರತಿಪಾದಿಸಿತ್ತು.
ರಾಜ್ಯದಲ್ಲಿ ಗಂಭೀರವಾದ ಬರ ಪರಿಸ್ಥಿತಿ ಇದೆ. 2023ರ ಮುಂಗಾರು ಹಂಗಾಮಿನಲ್ಲಿ ಜನರ ಬದುಕಿನ ಮೇಲೆ ಗಂಭೀರ ಪರಿಣಾಮವಾಗಿದೆ. 236 ತಾಲ್ಲೂಕುಗಳ ಪೈಕಿ 223 ತಾಲ್ಲೂಕುಗಳು ಬರಪೀಡಿತವಾಗಿವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿತ್ತು.
‘196 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಮುಂಗಾರುಹಂಗಾಮಿನಲ್ಲಿ 48ಲಕ್ಷ ಹೆಕ್ಟೇರ್‌ನಲ್ಲಿ ಬೆಳೆ ನಷ್ಟ ಸಂಭವಿಸಿದ್ದು, ಒಟ್ಟಾರೆ ₹ 35,162 ಕೋಟಿ ನಷ್ಟ ಸಂಭವಿಸಿದೆ’ ಎಂದು ವಕೀಲ ಡಿ.ಎಲ್.ಚಿದಾನಂದ ಸಲ್ಲಿಸಿದ್ದ ಅರ್ಜಿಯಲ್ಲಿ ತಿಳಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.