ADVERTISEMENT

ಅಂ.ರಾ. ಡ್ರಗ್ಸ್ ಕೂಟಗಳತ್ತ ಗಮನ ಹರಿಸದ ತನಿಖಾ ಸಂಸ್ಥೆಗಳು: ಸುಪ್ರೀಂ ಕೋರ್ಟ್

ಪಿಟಿಐ
Published 10 ಫೆಬ್ರುವರಿ 2023, 19:31 IST
Last Updated 10 ಫೆಬ್ರುವರಿ 2023, 19:31 IST
ಸುಪ್ರೀಂ ಕೋರ್ಟ್ 
ಸುಪ್ರೀಂ ಕೋರ್ಟ್    

ನವದೆಹಲಿ: ಕೇಂದ್ರ ಸರ್ಕಾರ ಹಾಗೂ ತನಿಖಾ ಸಂಸ್ಥೆಗಳು ಅಂತರರಾಷ್ಟ್ರೀಯ ಡ್ರಗ್ಸ್ ಒಕ್ಕೂಟಗಳಲ್ಲಿ ಸದಸ್ಯರಾಗಿರುವ ದೊಡ್ಡ ತಿಮಿಂಗಲಗಳನ್ನು ಹಿಡಿಯುವ ಬದಲು ಎನ್‌ಡಿಪಿಎಸ್ ಪ್ರಕರಣಗಳಲ್ಲಿ ಸಣ್ಣ ಮೀನುಗಳನ್ನು ಹಿಡಿಯುತ್ತಿವೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಸೂಚ್ಯವಾಗಿ ಹೇಳಿದೆ.

ಹೊಲವೊಂದರಲ್ಲಿ ಆಫೀಮು ಬೆಳೆದಿದ್ದ ಕಾರಣಕ್ಕೆ ಬಂಧಿಸಲಾಗಿದ್ದ ಆರೋಪಿಯೊಬ್ಬರ ಜಾಮೀನು ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಮೇಲಿನಂತೆ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಜೆ.ಬಿ. ಪಾರ್ದಿವಾಲಾ ಅವರನ್ನೊಳಗೊಂಡ ನ್ಯಾಯಪೀಠವು, ‘ಭಾರತ ಸರ್ಕಾರ ಹಾಗೂ ತನಿಖಾ ಸಂಸ್ಥೆಗಳು ಮಾದಕ ದ್ರವ್ಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ದೊಡ್ಡದೊಡ್ಡ ತಿಮಿಂಗಲಗಳನ್ನು ಬಂಧಿಸುತ್ತಿಲ್ಲ. ಅಷ್ಟೇ ಅಲ್ಲ, ಅಂತರರಾಷ್ಟ್ರೀಯ ಡ್ರಗ್ಸ್ ಒಕ್ಕೂಟಗಳತ್ತಲೂ ಗಮನ ಹರಿಸುತ್ತಿಲ್ಲ. ಅದರ ಬದಲು ಸಣ್ಣ ಮೀನುಗಳನ್ನು ಹಿಡಿಯುತ್ತಿದ್ದೀರಿ’ ಎಂದು ಚಾಟಿ ಬೀಸಿದೆ.

ADVERTISEMENT

ಎನ್‌ಡಿಪಿಎಸ್ ಕಾಯ್ದೆಗೆ ವಿರೋಧವಾಗಿ ತಮ್ಮ ಕೃಷಿ ಜಮೀನಿನಲ್ಲಿ ವಾಣಿಜ್ಯ ಪ್ರಮಾಣದಲ್ಲಿ ಅಫೀಮನ್ನು ಬೆಳೆದಿದ್ದ ಸಬೀರ್ ಎನ್ನುವವರನ್ನು ಪೊಲೀಸರು ಬಂಧಿಸಿದ್ದು, ಈ ಸಂಬಂಧದ ಅರ್ಜಿಯ ವಿಚಾರಣೆಯನ್ನು ನ್ಯಾಯಪೀಠವು ನಡೆಸಿತು.

ಮಧ್ಯಪ್ರದೇಶ ಸರ್ಕಾರ ಹಾಗೂ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ವಿಕ್ರಮಜಿತ್ ಬ್ಯಾನರ್ಜಿ ಅವರು ಸಬೀರ್ ಅವರ ಜಾಮೀನು ಅರ್ಜಿಯನ್ನು ವಿರೋಧಿಸಿದರು. ಅವರು ಬೆಳೆದಿರುವ ಅಫೀಮು ಕಡಿಮೆ ಪ್ರಮಾಣದಲ್ಲ. ಅಲ್ಲದೇ, ಅವರು ಈಗಾಗಲೇ ಇಂಥ ಎರಡು ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿದ್ದಾರೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು, ‘ಆರೋಪಿಯಿಂದ ವಶಪಡಿಸಿಕೊಂಡ ಸೈಕೋಟ್ರೋಪಿಕ್ ವಸ್ತುವಿನ ಪ್ರಮಾಣಕ್ಕೆ ಗರಿಷ್ಠ 10 ವರ್ಷ ಶಿಕ್ಷೆ ವಿಧಿಸಲಾಗಿದೆ. ಆರೋಪಿಯು ಈಗಾಗಲೇ ಅಪರಾಧಕ್ಕಾಗಿ ಐದು ವರ್ಷಗಳಿಗಿಂತ ಹೆಚ್ಚು ಜೈಲು ಶಿಕ್ಷೆಯನ್ನು ಅನುಭವಿಸಿದ್ದಾರೆ’ ಎಂದು ಹೇಳಿತು.

ಅರೋಪಿಯು ಸಣ್ಣ ಪ್ರಮಾಣದ ರೈತನಾಗಿದ್ದು, ಅವರು ತಮ್ಮ ಅಪರಾಧಕ್ಕಾಗಿ ಜಾಮೀನು ಪಡೆಯಲು ಸಾಧ್ಯವಾಗಲಿಲ್ಲ ಎಂಬುದನ್ನು ಗಮನಿಸಿದ ಪೀಠವು, ‘ಆರೋಪಿಯು ಜಾಮೀನಿಗೆ ಅರ್ಹರಾಗಿದ್ದಾರೆ’ ಎಂದು ತಿಳಿಸಿ, ಜಾಮೀನು ಮಂಜೂರು ಮಾಡಿತು. ಮಧ್ಯಪ್ರದೇಶ ಸರ್ಕಾರ ಹಾಗೂ ಎನ್‌ಸಿಬಿಯ ಮನವಿಯನ್ನು ತಿರಸ್ಕರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.