ADVERTISEMENT

ಕೋಚಿಂಗ್‌ ಕೇಂದ್ರಗಳ ಪರಿಶೀಲನೆ: ಸಮಿತಿ ರಚನೆ

9 ಸದಸ್ಯರ ಪರಿಶೀಲನಾ ಸಮಿತಿ ರಚಿಸಿದ ಕೇಂದ್ರ ಶಿಕ್ಷಣ ಸಚಿವಾಲಯ

​ಪ್ರಜಾವಾಣಿ ವಾರ್ತೆ
Published 20 ಜೂನ್ 2025, 16:16 IST
Last Updated 20 ಜೂನ್ 2025, 16:16 IST
.
.   

ನವದೆಹಲಿ (ಪಿಟಿಐ): ಕೋಚಿಂಗ್‌ ಕೇಂದ್ರಗಳ ಬಗೆಗಿನ ದೂರುಗಳು, ಅಲ್ಲಿನ ಮೂಲಭೂತ ಸಮಸ್ಯೆಗಳು, ‘ಡಮ್ಮಿ ಸ್ಕೂಲ್‌’ (ನೆಪಮಾತ್ರ ಶಾಲೆ)ಗಳ ಉದಯ, ಪ್ರವೇಶ ಪರೀಕ್ಷೆಗಳ ನ್ಯಾಯೋಚಿತತೆ ಮತ್ತು ಪರಿಣಾಮದ ಕುರಿತು ಪರಿಶೀಲಿಸಲು ಕೇಂದ್ರ ಶಿಕ್ಷಣ ಸಚಿವಾಲಯವು ಒಂಬತ್ತು ಸದಸ್ಯರ ಸಮಿತಿ ರಚಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ವಿನೀತ್‌ ಜೋಶಿ ನೇತೃತ್ವದಲ್ಲಿ ಸಮಿತಿ ಕಾರ್ಯ ನಿರ್ವಹಿಸಲಿದೆ. ಸಿಬಿಎಸ್‌ಇ ಅಧ್ಯಕ್ಷರು, ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಇಲಾಖೆಯ ಜಂಟಿ ಕಾರ್ಯದರ್ಶಿಗಳು, ಐಐಟಿ ಮದ್ರಾಸ್‌, ಎನ್‌ಐಟಿ ತಿರುಚ್ಚಿ, ಐಐಟಿ ಕಾನ್ಪುರ, ಎನ್‌ಸಿಇಆರ್‌ಟಿ ಪ್ರತಿನಿಧಿಗಳು ಹಾಗೂ ಕೇಂದ್ರೀಯ ವಿದ್ಯಾಲಯ, ನವೋದಯ ವಿದ್ಯಾಲಯ ಮತ್ತು ಖಾಸಗಿ ಶಾಲೆಯ ತಲಾ ಒಬ್ಬರು ಪ್ರಾಂಶುಪಾಲರು ಸಮಿತಿಯ ಸದಸ್ಯರಾಗಿರುತ್ತಾರೆ. 

ಸಮಿತಿಯ ಏನೇನು ಪರಿಶೀಲಿಸಲಿದೆ?:

ADVERTISEMENT

* ಉನ್ನತ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ಕೋಚಿಂಗ್ ಕೇಂದ್ರಗಳನ್ನು ಏಕೆ ಅವಲಂಬಿಸುತ್ತಿದ್ದಾರೆ. ಅದನ್ನು ಕಡಿಮೆ ಮಾಡಲು ಏನು ಮಾಡಬೇಕು

* ಕೋಚಿಂಗ್‌ ಕೆಂದ್ರಗಳ ಉಗಮಕ್ಕೆ ಕಾರಣವಾಗಿರುವ ಹಾಲಿ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿನ ಲೋಪ, ದೋಷಗಳನ್ನು ಗುರುತಿಸುವುದು

* ಶಾಲೆಗಳಲ್ಲಿ ಮಕ್ಕಳ ವಿಮರ್ಶಾತ್ಮಕ ಚಿಂತನೆ, ತಾರ್ಕಿಕತೆ, ವಿಶ್ಲೇಷಣಾತ್ಮಕ ಕೌಶಲ, ನಾವಿನ್ಯ ಮತ್ತು ಮೌಖಿಕ ಕಲಿಕಾ ಅಭ್ಯಾಸಗಳು ಹೇಗಿವೆ?  

* ‘ಡಮ್ಮಿ ಸ್ಕೂಲ್‌’ (ನೆಪಮಾತ್ರ ಶಾಲೆ)ಗಳ ಉದಯ, ಅದಕ್ಕೆ ಕಾರಣಗಳು, ಅವುಗಳ ಕಾರ್ಯ ನಿರ್ವಹಣೆ, ಕೋಚಿಂಗ್‌ ಕೇಂದ್ರಗಳ ಜತೆಗಿನ ಅವುಗಳ ಸಂಬಂಧ

*  ವೈದ್ಯಕೀಯ ಮತ್ತು ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಪ್ರವೇಶ ಗಿಟ್ಟಿಲು (ರಾಜ್ಯಗಳ ನಿರ್ದಿಷ್ಟ ಕೋಟಾಗಳನ್ನು ಪಡೆಯಲು) ವಿದ್ಯಾರ್ಥಿಗಳಿಗೆ ಈ ‘ಡಮ್ಮಿ ಸ್ಕೂಲ್‌’ಗಳು ಹೇಗೆಲ್ಲ ನೆರವಾಗುತ್ತಿವೆ

* ಕೋಚಿಂಗ್‌ ಕೇಂದ್ರಗಳ ಮೂಲಕ ‘ಡಮ್ಮಿ ಸ್ಕೂಲ್‌’ಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ನೀಟ್‌, ಜೆಇಇ ಪರೀಕ್ಷೆಗಳನ್ನು ಕೇಂದ್ರೀಕರಿಸಿ ತರಬೇತಿ ಪಡೆಯುತ್ತಾರೆ. ಅಲ್ಲದೆ ಶಾಲೆ ಅಥವಾ ಕಾಲೇಜಿನಲ್ಲಿ ತರಗತಿಗಳಿಗೆ ಹಾಜರಾಗದೇ ನೇರವಾಗಿ ಬೋರ್ಡ್‌ ಪರೀಕ್ಷೆಗೆ ಹಾಜರಾಗುತ್ತಾರೆ. ಈ ವ್ಯವಸ್ಥೆ ಹೇಗೆ ನಡೆಯುತ್ತದೆ, ಅದರ ಸಾಧಕ ಬಾಧಕಗಳೇನು? 

* ಕೋಚಿಂಗ್‌ ಕೇಂದ್ರಗಳು ಮತ್ತು ಶಾಲಾ ಶೈಕ್ಷಣಿಕ ಶುಲ್ಕದ ತೌಲನಿಕ ಪರಿಶೀಲನೆ

* ಕೋಚಿಂಗ್ ಕೇಂದ್ರಗಳು ಹೊಂದಿರುವ ಮೂಲಭೂತ ಸೌಲಭ್ಯಗಳು, ಅಳವಡಿಸಿಕೊಂಡಿರುವ ಬೋಧನಾ ವಿಧಾನ, ಕಟ್ಟಡ ನಿಯಮ ಇತ್ಯಾದಿ   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.